ADVERTISEMENT

ಸೇವಾ ನ್ಯೂನತೆ: 2 ಸ್ಕ್ಯಾನಿಂಗ್‌ ಕೇಂದ್ರಗಳಿಗೆ ₹40 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 21:04 IST
Last Updated 11 ಫೆಬ್ರುವರಿ 2025, 21:04 IST

ಹಾಸನ: ಶಿಶು ಆರೋಗ್ಯವಾಗಿರುವುದಾಗಿ ತಪ್ಪು ಮಾಹಿತಿ ನೀಡಿ ಸೇವಾ ನ್ಯೂನತೆ ಎಸಗಿದ ಎರಡು ಸ್ಕ್ಯಾನಿಂಗ್ ಕೇಂದ್ರಗಳಿಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹40 ಲಕ್ಷ ದಂಡ ವಿಧಿಸಿದೆ.

ಕುಂದೂರು ಹೋಬಳಿ ಹನುಮನಹಳ್ಳಿಯ ಶುಭಾ ಎಂ.ಕೆ. ಅವರು 2018ರ ಜುಲೈ 31ರಂದು ಬೆಂಗಳೂರಿನ ವಿವೇಕ್‌ ಸ್ಕ್ಯಾನ್‌ ಸೆಂಟರ್‌ನ ರೇಡಿಯಾಲಾಜಿಸ್ಟ್‌ ಡಾ.ಚಂದ್ರಕಾಂತ್ ಕೆ.ಎಸ್. ಅವರಲ್ಲಿ ಸ್ಕ್ಯಾನಿಂಗ್‌ ಮಾಡಿಸಿದ್ದರು. ಯಾವುದೇ ತೊಂದರೆ ಕಂಡುಬಂದಿಲ್ಲವೆಂದು ವರದಿ ದೊರಕಿತ್ತು. ನಂತರ ಅರಕಲಗೂಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸೂಚನೆ ಮೇರೆಗೆ ಹಾಸನದ ಯುನಿಟಿ ಸ್ಕ್ಯಾನ್ ಸೆಂಟರ್‌ನಲ್ಲಿ ಅದೇ ವರ್ಷ ಸೆ.29ರಂದು ಗರ್ಭಿಣಿಯ ಗರ್ಭಕೋಶದ ಸೊನೋಗ್ರಫಿ ತಪಾಸಣೆ ಮಾಡಿಸಿದ್ದರು. ಅಲ್ಲಿಯೂ ಯಾವುದೇ ತೊಂದರೆ ಇಲ್ಲ ಎಂದು ವರದಿ ನೀಡಲಾಗಿತ್ತು.

ಆದರೆ, ಶುಭಾ ಅವರ ಮಗು ಜನಿಸಿದಾಗ ಮೂತ್ರದಲ್ಲಿ ನಿಯಂತ್ರಣ ಇಲ್ಲದಿರುವುದು, ಬೆನ್ನುಹುರಿ ಬೆಳವಣಿಗೆಯ ತೊಂದರೆ ಹಾಗೂ ಮಲಬದ್ಧತೆ ಕಂಡುಬಂದಿತ್ತು. ಮಗು ಕುಂಟುತ್ತಿದ್ದರಿಂದ ಬೆಂಗಳೂರಿನ ನರರೋಗ ತಜ್ಞ ಡಾ.ಹರೀಶ್ ಅವರಲ್ಲಿ ತಪಾಸಣೆ ಮಾಡಿಸಿದ್ದರು. ಮಗುವಿನ ಎಂಆರ್‌ಐ ಮಾಡಿದಾಗ, ತೀವ್ರತರನಾದ ಸಮಸ್ಯೆಗಳು ಕಂಡುಬಂದಿದ್ದವು.

ADVERTISEMENT

ಪ್ರಸವಪೂರ್ವದಲ್ಲೇ ಸ್ಕ್ಯಾನಿಂಗ್ ಮೂಲಕ ಸಮಸ್ಯೆಯನ್ನು ಕಂಡುಹಿಡಿದಿದ್ದರೆ, ಮಗುವನ್ನು ಗರ್ಭಾವಸ್ಥೆಯಲ್ಲೇ ತೆಗೆಸುವ ಅವಕಾಶವಿತ್ತು. ಸರಿಯಾದ ವರದಿ ನೀಡದೇ ಶಾಶ್ವತ ಅಂಗವೈಕಲ್ಯ ಹೊಂದಿರುವ ಹೆಣ್ಣುಮಗು ಜನಿಸಲು ಕಾರಣವಾಗಿದ್ದು, ಅದಕ್ಕೆ ಪರಿಹಾರವಾಗಿ ₹50 ಲಕ್ಷ ಕೊಡಿಸಬೇಕು ಎಂದು ಅವರು ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ 2023ರ ಆ.17ರಂದು ಅರ್ಜಿ ಸಲ್ಲಿಸಿದ್ದರು.

ವಾದ ಆಲಿಸಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ ಅವರಿದ್ದ ಪೀಠವು ಬೆಂಗಳೂರಿನ ವಿವೇಕ ಸ್ಕ್ಯಾನ್‌ ಹಾಗೂ ಹಾಸನದ ಯುನಿಟಿ ಸ್ಕ್ಯಾನ್ ಸೆಂಟರ್‌ನ ಪರವಾಗಿ ವೈದ್ಯರ ವೃತ್ತಿಪರ ನಷ್ಟ ಪರಿಹಾರಕ್ಕಾಗಿ ತಲಾ ₹20 ಲಕ್ಷ ಪರಿಹಾರ ನೀಡುವಂತೆ ಓರಿಯೆಂಟಲ್ ಇನ್ಶೂರೆನ್ಸ್‌ಗೆ  ಜ.31ರಂದು ಆದೇಶಿಸಿದೆ.

ಒಟ್ಟು ಪರಿಹಾರ ₹40 ಲಕ್ಷವನ್ನು 45 ದಿನಗಳ ಒಳಗಾಗಿ ದೂರುದಾರರಿಗೆ ನೀಡಬೇಕು. ಅದರಲ್ಲಿ ₹30 ಲಕ್ಷ ಮಗುವಿನ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಬೇಕು. ಶಾಶ್ವತ ಅಂಗವೈಕಲ್ಯ ಹೊಂದಿರುವ ಮಗುವಿನ ಪಾಲನೆ–ಪೋಷಣೆಗಾಗಿ ಬಡ್ಡಿ ಹಣವನ್ನು ಉಪಯೋಗಿಸಬೇಕು. ಉಳಿದ ₹10 ಲಕ್ಷವನ್ನು ದೂರುದಾರರ ನಷ್ಟ ಭರ್ತಿ ಹಾಗೂ ಮಾನಸಿಕ ಹಿಂಸೆಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.