
ಚನ್ನರಾಯಪಟ್ಟಣ: ‘ಕೋಪದಿಂದ ಕುಟುಂಬದಲ್ಲಿ ಸಾಮರಸ್ಯ, ನೆಮ್ಮದಿ ಹಾಳಾಗುತ್ತದೆ. ಮನುಷ್ಯನಿಗೆ ಕೋಪ ಬಹುದೊಡ್ಡ ಶತ್ರು’ ಎಂದು ಅರಸೀಕೆರೆ ತಾಲ್ಲೂಕು ಕೋಡಿಮಠದ ಶಿವಾನಂದ ರಾಜೇಂದ್ರ ಸ್ಚಾಮೀಜಿ ಹೇಳಿದರು.
ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದಲ್ಲಿರುವ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಸೋಮವಾರ ಲೋಕ ಕಲ್ಯಾಣಾರ್ಥವಾಗಿ ನಡೆದ ಚಂಡಿಕಯಾಗದ ಪೂರ್ಣಾಹುತಿ ನೆರವೇರಿಸಿದ ಬಳಿಕ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯನಿಗೆ ತಿಳವಳಿಕೆಯ ಜ್ಞಾನ ಇದೆ. ಸಹಿಷ್ಣುತೆ, ತಾಳ್ಮೆ ಇದ್ದರೆ ಸಹಬಾಳ್ವೆ, ಸಾಮರಸ್ಯದ ಬದುಕು ನಮ್ಮದಾಗುತ್ತದೆ’ ಎಂದರು.
‘ಸಮಾಜದಲ್ಲಿ ನಮ್ಮ ದೃಷ್ಠಿಕೋನ ಸಕಾರಾತ್ಮಕವಾಗಿರಬೇಕು, ಮನಸು ಪರಿಶುದ್ಧವಾಗಿರಬೇಕು. ಚಂಚಲ ಮನಸು ನಮ್ಮದಾಗಬಾರದು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಉತ್ತಮ ಪ್ರಜೆಗಳಾಗಿ ಬಾಳ್ವೆ ನಡೆಸಬೇಕು. ಬದುಕಿನ ಸಂಧ್ಯಾಕಾಲದಲ್ಲಿ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕುಟುಂಬದಲ್ಲಿ ಪರಸ್ಪರ ನಂಬಿಕೆ ಮತ್ತು ಗೌರವ ಇರಬೇಕು’ ಎಂದು ಹೇಳಿದರು.
ಕತ್ತರಿಘಟ್ಟದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ ಮಾತನಾಡಿ, ‘ದಾಸೋಹ, ಆರೋಗ್ಯ ಮತ್ತು ಶಿಕ್ಷಣಕ್ಕೆ ಕಳೆದ 22 ವರ್ಷಗಳಿಂದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರ ಸೇವೆ ಸಲ್ಲಿಸುತ್ತಿದೆ. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಿಗೂ ಫಲ ನೀಡುತ್ತದೆ ಎಂಬುದನ್ನು ಮರೆಯಬಾರದು. ಸಮಾಜಸೇವೆ ಮತ್ತು ಸಮಾಜಮುಖಿ ಚಿಂತನೆ ಅಗತ್ಯ’ ಎಂದರು.
ಮಹಿಳೆಯರಿಗೆ ಬಾಗಿನ ನೀಡಲಾಯಿತು. ಕಲಾಪರಿವಾರದ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖಂಡರಾದ ತಿಮ್ಮಪ್ಪ, ಮಹಾದೇವಪ್ಪ, ಆನಂದ್, ಆಧ್ಯಾತ್ಮಿಕ ಕೇಂದ್ರದ ಕಾರ್ಯದರ್ಶಿ ಡಿ.ಸಿ. ಅಮೋಘ್, ಟಿಎಪಿಸಿಎಂಎಸ್ ಅಧ್ಯಕ್ಷ ನಂಜಪ್ಪ, ಯೋಗಾಸನ ತರಬೇತುದಾರ ಉಮಮಹೇಶ್, ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಸ್ಚಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.