ADVERTISEMENT

‘ಮಕ್ಕಳ ಓದುವ ಅಭಿರುಚಿ ಹೆಚ್ಚಿಸಿ’; ಶೃಂಗೇರಿ ಮಠದ ಅದ್ವೈತಾನಂದ ಭಾರತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:59 IST
Last Updated 29 ಡಿಸೆಂಬರ್ 2025, 6:59 IST
ಹಾಸನದಲ್ಲಿ ನಡೆದ ಜಿಲ್ಲಾ ಬ್ರಾಹ್ಮಣ ಸಭಾ ದ್ವಿತೀಯ ಸಮ್ಮೇಳನದಲ್ಲಿ ಅದ್ವೈತಾನಂದ ಭಾರತೀ ಸ್ವಾಮೀಜಿ ಮಾತನಾಡಿದರು. ಹೈಕೋರ್ಟ್‌ ನ್ಯಾಯಾಮೂರ್ತಿ ವಿ. ಶ್ರೀಶಾನಂದ,  ಸಭಾ ಅಧ್ಯಕ್ಷ ಎಚ್‌.ಎಸ್‌‍. ಮಂಜುನಾಥ ಮೂರ್ತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎಚ್‌.ಎಸ್‌‍.ಸಚ್ಚಿದಾನಂದಮೂರ್ತಿ ಭಾಗವಹಿಸಿದ್ದರು 
ಹಾಸನದಲ್ಲಿ ನಡೆದ ಜಿಲ್ಲಾ ಬ್ರಾಹ್ಮಣ ಸಭಾ ದ್ವಿತೀಯ ಸಮ್ಮೇಳನದಲ್ಲಿ ಅದ್ವೈತಾನಂದ ಭಾರತೀ ಸ್ವಾಮೀಜಿ ಮಾತನಾಡಿದರು. ಹೈಕೋರ್ಟ್‌ ನ್ಯಾಯಾಮೂರ್ತಿ ವಿ. ಶ್ರೀಶಾನಂದ,  ಸಭಾ ಅಧ್ಯಕ್ಷ ಎಚ್‌.ಎಸ್‌‍. ಮಂಜುನಾಥ ಮೂರ್ತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎಚ್‌.ಎಸ್‌‍.ಸಚ್ಚಿದಾನಂದಮೂರ್ತಿ ಭಾಗವಹಿಸಿದ್ದರು    

ಹಾಸನ: ‘ರಾಮಾಯಣ, ಮಹಾಭಾರತ ವೇದಗಳ ಸಾರವನ್ನೇ ಒಳಗೊಂಡಿವೆ.  ಮಕ್ಕಳಿಗೆ ಇಂಥ ಗ್ರಂಥಗಳನ್ನು ಓದುವ ಅಭಿರುಚಿ ಹೆಚ್ಚಿಸಬೇಕು.  ಓದು ಮನಸ್ಸಿನ ಏಕಾಗ್ರತೆಗೆ ನೆರವಾಗುತ್ತದೆ’ ಎಂದು ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ ಮಠಾಧಿಪತಿ ಅದ್ವೈತಾನಂದ ಭಾರತೀ ಸ್ವಾಮೀಜಿ ಹೇಳಿದರು. 

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಹಮ್ಮಿಕೊಂಡಿರುವ ಎರಡು ದಿನಗಳ ದ್ವಿತೀಯ ‘ಜಿಲ್ಲಾ ಬ್ರಾಹ್ಮಣ ಸಮ್ಮೇಳನ ಹಾಗೂ ಲೋಕ ಹಿತ ಕೋಟಿ ಗಾಯತ್ರಿ ಜಪಯಜ್ಞ ಸಮರ್ಪಣ, ದಶಲಕ್ಷ ಗಾಯತ್ರಿ ಹವನ, ವಿಶ್ವ ಹಿತಚಿಂತಕರ ಸಮಾವೇಶ’ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಋಷಿ ಮುನಿಗಳ ಬೀಡಾಗಿತ್ತು. ಆಧುನಿಕ ಕಾಲದ ವಿಜ್ಞಾನಿಗಳಂತೆ ಅಂದು ಅಂದು ಅವರು ಸಂಶೋಧನಾತ್ಮಕ ಕೆಲಸವನ್ನು  ಮಾಡುತ್ತಿದ್ದರು. ಗಾಯತ್ರಿ ಜಪ, ಸಂಧ್ಯಾವಂದನೆ, ಉಪನಯನ ಜೀವನದಲ್ಲಿ ಸದ್ಭಾವನೆ ಮೂಡಿಸುತ್ತವೆ. ಕಾಲದ ಹೊಡೆತದಿಂದ ಅಳಿದುಳಿದ ಅಲ್ಪಸ್ವಲ್ಪ ವೇದ ಜ್ಞಾನವನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ , ಸದೃಢ ರಾಷ್ಟ್ರ ನಿರ್ಮಿಸುವ ಕೆಲಸ  ಆಗಬೇಕಿದೆ. ವಿಪ್ರರು ಗಂಭೀರ ಚಿಂತನೆ ನಡೆಸಬೇಕು’ ಎಂದು ಹೇಳಿದರು‌.

ADVERTISEMENT

ಹೈಕೋರ್ಟ್‌ ನ್ಯಾಯಾಮೂರ್ತಿ ವಿ. ಶ್ರೀಶಾನಂದ  ಮಾತನಾಡಿ, 'ಸಮಾಜದಲ್ಲಿ ಬ್ರಾಹ್ಮಣರೆಂದರೆ ಭೋಜನ ಪ್ರಿಯರು ಎಂಬ ಅಪಭ್ರಂಶ ನಿವಾರಿಸಿ, ‘ಬಹುಜನ ಪ್ರಿಯರು’ ಎಂಬ ಉಕ್ತಿಯ ಅನುಷ್ಠಾನಕ್ಕೆ ಪಣತೊಡಬೇಕು' ಎಂದರು.

'ಯಾವುದೇ ಧರ್ಮ ಸದ್ವಿಚಾರ ಪ್ರತಿಪಾದಿಸುತ್ತಿದ್ದರೆ ಯಾವ ಅಳುಕಿಲ್ಲದೆ ಅದನ್ನು ಸ್ವೀಕರಿಸಬೇಕು. ಸಿ.ವಿ.ರಾಮನ್‌, ಅಬ್ದುಲ್‌ ಕಲಾಂ ನಮಗೆ ಆದರ್ಶರಾಗಬೇಕು. ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿದ್ದೇವೆಂಬ ಮಾತ್ರಕ್ಕೆ ಪುರಾತನ ಆಚಾರ ವಿಚಾರಗಳನ್ನು ಕಡೆಗಣಿಸುವುದು ಸರಿಯಲ್ಲ .ಗಾಯತ್ರಿ ಮಂತ್ರ ಪಠಣವನ್ನು ಶಾಸ್ತ್ರೋಕ್ತವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರದ್ದಾಗಿದೆ.  ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಯನ್ನು ಅನುಷ್ಠಾನ ಗೊಳಿಸಬೇಕು. ಪೂಜೆ-ಪುನಸ್ಕಾರಕ್ಕೆ ಸಮಯ ನೀಡಬೇಕು.  ಭಾರತೀಯ ಚಿಂತನೆಗಳನ್ನು ಅಳವಡಿಸಿಕೊಂಡರೆ ಮಾತ್ರ ವಿಶ್ವ ಹಿತ ಚಿಂತಕರಾಗಲು ಸಾಧ್ಯ ಎಂದರು.

ಸಂಘಟಿತರಾಗಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎಚ್‌.ಎಸ್‌‍. ಸಚ್ಚಿದಾನಂದಮೂರ್ತಿ ಮಾತನಾಡಿ, 'ಬ್ರಾಹ್ಮಣ ಸಮುದಾಯದಲ್ಲಿಯೂ ಬಡತನ ಮಿತಿ ಮೀರಿದೆ.  42 ಲಕ್ಷ ಜನಸಂಖ್ಯೆಯ ಬ್ರಾಹ್ಮಣರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗಬೇಕು. ಬ್ರಾಹಣ ಶಾಸಕರ ಸಂಖ್ಯೆ 21 ಇರಬೇಕು.   ಸಮುದಾಯ ಸಂಘಟಿತವಾಗಬೇಕು' ಎಂದರು.

ಶಿಲಾನ್ಯಾಸ: 30 ಗುಂಟೆ ಜಾಗದಲ್ಲಿ ನಿರ್ಮಿಸಲಿರುವ ಜಿಲ್ಲಾ ಬ್ರಾಹ್ಮಣ ಸಭಾ ಸಭಾ ಭವನಕ್ಕೆ ಶೃಂಗೇರಿ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ಟೀಂ ಮಂಗಳೂರು ಇಂಡಿಯಾ ತಂಡದಿಂದ ಗಾಳಿಪಟ ಹಾರಾಟ ಪ್ರದರ್ಶನ, ಮಹಿಳೆಯರ ಕೈಗಳಿಗೆ ಮಹೆಂದಿ ಚಿತ್ರಣ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬ್ರಾಹ್ಮಣ ಸಮುದಾಯದವರು ಭಾಗವಹಿಸಿದ್ದರು.

ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್‌.ಎಸ್‌‍. ಮಂಜುನಾಥಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಪಿ.ಎಸ್‌‍.ವೆಂಕಟೇಶ್‌, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಆಡಳಿತ ಸಮಿತಿ ಅಧ್ಯಕ್ಷ ಆರ್‌.ಟಿ.ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಜಗದೀಶ್‌ ಚೌಡಳ್ಳಿ, ಶಂಕರಮಠದ ಧರ್ಮಾಧಿಕಾರಿ ಶ್ರೀಂಕಠಯ್ಯ, ಶ್ರೀನಿವಾಸಮೂರ್ತಿ, ಕೃಷ್ಣಾನಂದ ಭಾಗವಹಿಸಿದ್ದರು.

‘ಆಕ್ರಮಣದಿಂದ ಸಂಪತ್ತು ವಿದ್ಯೆ ನಾಶ’ ‘ಆಕ್ರಮಣಕಾರರು ನಮ್ಮ ಸಂಪತ್ತು ಮಾತ್ರವಲ್ಲದೆ ವಿದ್ಯೆಯನ್ನೂ ನಾಶ ಮಾಡಿದರು. ನಳಂದಾ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿದಾಗ ಅದು 4 ತಿಂಗಳು ಉರಿಯಿತು' ನಳಂದ ವಿಶ್ವವಿದ್ಯಾಲಯಕ್ಕೆ ಬೆಂಕಿ ಹಚ್ಚಿದಾಗ ತಾಳೆಗರಿಯಲ್ಲಿ ಬರೆದ ವೇದದ ವಿಚಾರಗಳು ಸಂಪೂರ್ಣ ನಾಶವಾದವು. ವೇದ ಜ್ಞಾನವನ್ನು ಆಕ್ರಮಣಕಾರರು ಸಂಪೂರ್ಣ ನಾಶ ಮಾಡಿದ್ದಾರೆ. ಅಲ್ಲಿ ಇಲ್ಲಿ ಸ್ವಲ್ಪ ಉಳಿದ ವೇದಗಳನ್ನು ಓದದೆ ನಾವು ನಾಶ ಮಾಡುತ್ತಿದ್ದೇವೆ’ ಎಂದು’ ಅದ್ವೈತಾನಂದ ಭಾರತೀ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.