ADVERTISEMENT

ಟ್ಯಾಂಕರ್‌ ನೀರು ಪೂರೈಕೆ ಪರಿಸ್ಥಿತಿ ಇಲ್ಲ: ಹಾಸನ ತಹಶೀಲ್ದಾರ್‌ ಶ್ರೀನಿವಾಸಯ್ಯ

’ಜಾನುವಾರು ಮೇವಿಗೆ ಕೊರತೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 10 ಮೇ 2019, 12:13 IST
Last Updated 10 ಮೇ 2019, 12:13 IST
ಹಾಸನ ತಾಲ್ಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹಾಸನ ತಾಲ್ಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.   

ಹಾಸನ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ ಎಂದು ತಹಶೀಲ್ದಾರ್‌ ಶ್ರೀನಿವಾಸಯ್ಯ ಸ್ಪಷ್ಟಪಡಿಸಿದರು.

ತಾಲ್ಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿದೆ. ಜನ, ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಮೇವಿನ ಕೊರತೆಯೂ ಇಲ್ಲ. ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಮುಂಗಾರಿನಲ್ಲಿ ತಾಲ್ಲೂಕಿನಾದ್ಯಂತ ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ನೆರವಾಗಲು ಕಂಟ್ರೋಲ್‌ ರೂಂ ಸ್ಥಾಪಿಸಿದ್ದು, ದೂ. 260393 ಸಂಪರ್ಕಿಸಬಹುದು. ಈ ದೂರವಾಣಿ ದಿನದ 24 ತಾಸು ಕಾರ್ಯ ನಿರ್ವಹಿಸಲಿದೆ ಎಂದರು.

ADVERTISEMENT

ತಾಲ್ಲೂಕು ಮಟ್ಟದ ಅಧಿಕಕಾರಿಗಳು ಮತ್ತು ನೋಡಲ್‌ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿದ್ದು, ತಾಲ್ಲೂಕಿನ ಸಮಗ್ರ ಮಾಹಿತಿ ತಿಳಿಸಬೇಕು. ಜೊತೆಗೆ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ತಿಳಿಸಬಹುದು ಎಂದು ವಿವರಿಸಿದರು.

ಒಣಗಿದ ಮರ ಅಥವಾ ಬೀಳುವಂತಹ ಮರಗಳನ್ನು ಗುರುತಿಸಿ ಕಡಿಯಲು ತೀರ್ಮಾನಿಸಲಾಗಿದೆ. ಮಳೆ ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾದಲ್ಲಿ 24 ಗಂಟೆಯೊಳಗೆ ವಿದ್ಯುತ್ ಮಾರ್ಗ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲೇರಿಯಾ, ಡೆಂಗಿ, ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾವಹಿಸಬೇಕು. ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳು ನಡೆಯಬೇಕು. ತಾಲ್ಲೂಕು ಮಟ್ಟದಲ್ಲಿ ಹೋಬಳಿ ವಾರು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಹೋಬಳಿ ಮಟ್ಟದಲ್ಲಿ ಸಭೆ ನಡೆಯಬೇಕು ಎಂದು ತಿಳಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.