ADVERTISEMENT

ಹಾಸನ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ

ಕೇಂದ್ರ ಜಲಶಕ್ತಿ ಅಭಿಯಾನದ ಅಧಿಕಾರಿ ವರ್ಮಾ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:34 IST
Last Updated 26 ಜುಲೈ 2022, 6:34 IST
ಕೇಂದ್ರ ಜಲಶಕ್ತಿ ಅಭಿಯಾನದ ಅಧಿಕಾರಿ ಪುರುಷೋತ್ತಮ್‌ ವರ್ಮಾ ಅವರು ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದರು.
ಕೇಂದ್ರ ಜಲಶಕ್ತಿ ಅಭಿಯಾನದ ಅಧಿಕಾರಿ ಪುರುಷೋತ್ತಮ್‌ ವರ್ಮಾ ಅವರು ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದರು.   

ಹಾಸನ: ಜಿಲ್ಲೆಯಾದ್ಯಂತ ಹಲವಾರು ಯೋಜನೆಗಳನ್ನು ಕೈಗೊಂಡು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಪುರುಷೋತ್ತಮ್‌ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಲ ಸಂರಕ್ಷಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲೆಯಾದ್ಯಂತ ಅಮೃತ್ ಸರೋವರ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಅರಣ್ಯಕ್ಕೆ ಸಂಬಂಧಿಸಿದ ರಸ್ತೆ ಬದಿಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನೂ ನೆಟ್ಟು ಅರಣ್ಯ ಪ್ರಮಾಣವನ್ನು ವಿಸ್ತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಲ ಸಂಕ್ಷಣೆಗೆ ಸಂಬಂಧಿಸಿದ ಅಂಕಿ ಅಂಶಗಳ ಮಾಹಿತಿ ಪರಿಶೀಲಿಸಿದ ಅವರು, 399 ಚೆಕ್ ಡ್ಯಾಂ, 3707 ಕೆರೆ ಹೂಳೆತ್ತುವ ಕಾಮಗಾರಿ, 701 ಕೆರೆ ಸಂರಕ್ಷಣೆ, 701 ತೆರೆಗೆ ಬಾವಿ, 114 ಮಳೆ ನೀರು ಸಂಗ್ರಹ, 35 ಕಲ್ಯಾಣಿ, 2222 ಕೊಳವೆಬಾವಿ, 5782 ಸೋಕ್ ಪಿಟ್ ಸೇರಿದಂತೆ ವಿವಿಧ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳು ಕೂಡ ಜಿಲ್ಲೆಯಾದ್ಯಂತ ಉತ್ತಮ ಕೆಲಸ ನಿರ್ವಹಿಸಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಮೂಲಗಳಾದ ಕೆರೆಗಳ ಸಂರಕ್ಷಣೆ, ಕಲ್ಯಾಣಿ ಪುನಶ್ಚೇತನಕ್ಕೆ ವಿಶೇಷ ಒತ್ತನ್ನು ನೀಡಲಾಗುತ್ತಿದ್ದು, ಇದರಿಂದ ಕೃಷಿಗೆ ಸಹಾಯವಾಗಲಿದೆ. ಅಮೃತ್ ಮಹೋತ್ಸವ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆರೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರ ಜಲ ಶಕ್ತಿ ಅಭಿಯಾನದ ವಿಜ್ಞಾನಿ ಡಾ.ರಘುಚಂದ್ರ ಗರಿಮೆಲ್ಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್, ಉಪ ಕಾರ್ಯದರ್ಶಿಗಳಾದ ಡಾ. ಪುನೀತ್, ಡಾ.ಚಂದ್ರಶೇಖರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ರೈತರೊಂದಿಗೆ ಸಂವಾದ: ಜಿಲ್ಲಾ ಪಂಚಾಯಿತಿಯ ಜಲ ಶಕ್ತಿ ಅಭಿಯಾನ ಕೇಂದ್ರಕ್ಕೆ ಭೇಟಿ ನೀಡಿದ ಪುರುಷೋತ್ತಮ್‌ ವರ್ಮಾ, ನೀರಿನ ಸಂರಕ್ಷಣೆ ಮಾಡುವ ಬಗ್ಗೆ ರೈತರ ಜೊತೆ ಸಂವಾದ ನಡೆಸಿದರು. ಅವರಿಗೆ ಹಲವು ರೀತಿಯ ವೈಜ್ಞಾನಿಕ ಸಲಹೆ ನೀಡಿದರು.

ನೀರಿನ ಮೂಲಗಳಾದ ಕಲ್ಯಾಣಿ, ಚೆಕ್ ಡ್ಯಾಂ, ಕೆರೆಗಳ ರಕ್ಷಣೆ ಮಾಡುವ ಮೂಲಕ ಕೃಷಿ, ತೋಟಗಾರಿಕೆ, ಅರಣ್ಯ,ರೇಷ್ಮೆ ಕ್ಷೇತ್ರ ಸೇರಿದಂತೆ ವಿವಿಧ ಇಲಾಖೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಒದಗಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.