ಹಾವೇರಿ: ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯಲ್ಲಿ (ಸಿಆರ್‌ಪಿಎಫ್) ಸುದೀರ್ಘ 38 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ವಾಪಸಾದ ಹೊಸರಿತ್ತಿಯ ಯೋಧ ಪ್ರಭಾಕರ ವೀರಪ್ಪ ಕರಿಶೆಟ್ಟರ ಅವರನ್ನು ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಮೈಲಾರ ಮಹದೇವಪ್ಪ ರೈಲು ನಿಲ್ದಾಣಕ್ಕೆ ಬಂದ ಪ್ರಭಾಕರ ಅವರನ್ನು ಮಾಜಿ ಸೈನಿಕರು ಹಾಗೂ ಜನರು, ಹೂಗುಚ್ಛ ನೀಡಿ ಮಾಲಾರ್ಪಣೆ ಮಾಡಿ ಸ್ವಾಗತಿಸದರು. ನಂತರ, ತೆರೆದ ವಾಹನದಲ್ಲಿ ರೈಲು ನಿಲ್ದಾಣದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೂ ಭವ್ಯ ಮೆರವಣಿಗೆ ನಡೆಸಲಾಯಿತು.
ಪ್ರಭಾಕರ ಅವರು ತಮ್ಮ ಕುಟುಂಬದವರ ಜೊತೆಯಲ್ಲಿ ತೆರೆದ ವಾಹನದಲ್ಲಿ ನಿಂತು, ಜನರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು. ‘ಭಾರತ ಮಾತಾಕೀ ಜೈ’, ‘ಜೈ ಜವಾನ್ ಜೈ ಕಿಸಾನ್’, ‘ವಂದೇ ಮಾತರಂ’ ಸೇರಿದಂತೆ ಹಲವು ರಾಷ್ಟ್ರಪ್ರೇಮದ ಘೋಷಣೆಗಳು ಮೆರವಣಿಗೆಯಲ್ಲಿ ಕೇಳಿಸಿದವು.
ಮಾರುಕಟ್ಟೆ ಮಾರ್ಗವಾಗಿ ಸಾಗಿದ ಮೆರವಣಿಗೆ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾಪ್ತಗೊಂಡಿತು. ರಸ್ತೆಯುದ್ದಕ್ಕೂ ನೆರೆದಿದ್ದ ಜನರು, ಯೋಧನಿಗೆ ಸೆಲ್ಯೂಟ್ ಮಾಡಿ ಗೌರವ ವಂದನೆ ಸಲ್ಲಿಸಿದರು. 38 ವರ್ಷ ಸೇವೆ ಸಲ್ಲಿಸಿದ ಯೋಧವನ್ನು ಹೊಗಳಿದರು.
ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಯೋಧನಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖಂಡರು, ವಿವಿಧ ಸಂಘಟನೆ ಪದಾಧಿಕಾರಿಗಳು ಹಾಗೂ ಇತರರು, ಹೂವಿನ ಹಾರ ಹಾಕಿ ಶಾಲು ಹೂದಿಸಿ ಸನ್ಮಾನಿಸಿದರು.
ಯೋಧನಿಗೆ ಸನ್ಮಾನಿಸಿ ಮಾತನಾಡಿದ ಮುಖಂಡರಾದ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ಸಿದ್ದರಾಜ ಕಲಕೋಟಿ, ‘ದೇಶ ಕಾಯುವ ಅವಕಾಶ ಎಲ್ಲರಿಗೂ ಸೇರುವುದಿಲ್ಲ. ಇಂದಿನ ಯುವಕರು ದೇಶಪ್ರೇಮ ಬೆಳೆಸಿಕೊಳ್ಳಬೇಕು. 38 ವರ್ಷ ಸೇವೆ ಸಲ್ಲಿಸಿದ ಪ್ರಭಾಕರ ಅವರ ಸೇವೆ ಶ್ಲಾಘನೀಯ’ ಎಂದರು.
ಹೊಸರಿತ್ತಿಯಲ್ಲೂ ಭವ್ಯ ಮೆರವಣಿಗೆ:
ಯೋಧ ಪ್ರಭಾಕರ ಅವರ ಸ್ವಂತ ಊರಾದ ಹಾವೇರಿ ತಾಲ್ಲೂಕಿನ ಹೊಸರಿತ್ತಿಯಲ್ಲಿಯೂ ಮಂಗಳವಾರ ಮಧ್ಯಾಹ್ನ ಭವ್ಯ ಮೆರಣಿಗೆ ನಡೆಯಿತು. ಹಾವೇರಿಯಿಂದ ಗ್ರಾಮಕ್ಕೆ ಆಗಮಿಸಿದ ಯೋಧ ಪ್ರಭಾಕರ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ನಂತರ ಸಭಾ ಕಾರ್ಯಕ್ರಮ ನಡೆಸಿ ಯೋಧನನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಪ್ರಭಾಕರ ‘ನಾನು ಇದೇ ಊರಿನಲ್ಲಿ ಓದಿ ಬೆಳೆದು ಯೋಧನಾಗಿ 38 ವರ್ಷ ಕೆಲಸ ಮಾಡಿದ್ದೇನೆ. ಸೇನೆಯಲ್ಲಿ ಹೆಚ್ಚು ಅವಕಾಶಗಳಿವೆ. ಯುವಕರು ಸೇನೆ ಸೇರಿ ದೇಶ ಸೇವೆ ಮಾಡಬೇಕು’ ಎಂದರು. ‘38 ವರ್ಷದಲ್ಲಿ ನಾನು ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ್ದೇನೆ. 18 ವರ್ಷ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.