ADVERTISEMENT

ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಜ.14ರಿಂದ

ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಶರಣ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 13:35 IST
Last Updated 11 ಜನವರಿ 2022, 13:35 IST
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ 
ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ    

ಹಾವೇರಿ:ನಿಜಶರಣ ಅಂಬಿಗರ ಚೌಡಯ್ಯನವರ 4ನೇ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥ ಮಹಾರಥೋತ್ಸವ ಹಾಗೂ ಅಂಬಿಗರ ಚೌಡಯ್ಯನವರ 902ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನುತಾಲ್ಲೂಕಿನ ಸುಕ್ಷೇತ್ರ ನರಸೀಪುರದಲ್ಲಿ ಜ.14 ಮತ್ತು 15ರಂದು ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಸಲಾಗುವುದು ಎಂದು ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಂತಮುನಿ ಸ್ವಾಮೀಜಿಗಳ 6ನೇ ಸ್ಮರಣೋತ್ಸವ ಮತ್ತು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳ 5ನೇ ಪೀಠಾರೋಹಣ ವಾರ್ಷಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಕೋವಿಡ್‌ 19 ಮಾರ್ಗಸೂಚಿ ಅನ್ವಯ ಎಲ್ಲ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸದೇ ಸರಳವಾಗಿ ಆಚರಿಸಲಾಗುವುದು. ಈ ಅವಧಿಯಲ್ಲಿ ಪೂಜ್ಯರ ದರ್ಶನಾಶೀರ್ವಾದಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್‌ ಬಳಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ADVERTISEMENT

ಈ ಬಾರಿ ನಡೆಯಬೇಕಿದ್ದ ಸಾಮೂಹಿಕ ವಿವಾಹ ಮತ್ತು ಧರ್ಮಸಭೆ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.ಭಕ್ತರು ತಮ್ಮ ಮನೆಗಳಲ್ಲಿ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕೋರಿದರು.

ಗುರುಪೀಠದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ₹31 ಕೋಟಿ ಬಿಡುಗಡೆಯಾಗಿದ್ದು, ತಾಂತ್ರಿಕ ಕಾರಣಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಅಂಬಿಗರ ಚೌಡಯ್ಯನವರ ಜನ್ಮಸ್ಥಳ ಮತ್ತು ಐಕ್ಯಸ್ಥಳ ಚೌಡಯ್ಯದಾನಪುರವಾಗಿದ್ದು, ನರಸೀಪುರ ವಿದ್ಯಾಕೇಂದ್ರವಾಗಿದೆ. ಕೂಡಲಸಂಗಮದ ಮಾದರಿಯಲ್ಲೇ ಚೌಡಯ್ಯಪೀಠದ ಗದ್ದುಗೆ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ ವಡ್ನಿಕೊಪ್ಪ, ಪ್ರಭು ಸುಣಗಾರ, ಬಸವರಾಜ ಸಪ್ಪನಗೋಳ, ಮಂಜುನಾಥ ಭೋವಿ, ಜಿತೇಂದ್ರ ಸುಣಗಾರ, ಶಂಕರ ಸುತಾರ, ಅಶೋಕ ವಾಲೀಕಾರ, ಕರಬಸಪ್ಪ ಹಳದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.