ADVERTISEMENT

ಹಾವೇರಿ: ಅಂಗನವಾಡಿ ಅಧೋಗತಿ, ಆತಂಕದಲ್ಲೇ ಅಆಇಈ...

ಧರೆಗುರುಳಿದ ಕೇಂದ್ರಗಳು; ನವೀಕರಣಕ್ಕೆ ಮೀನಮೇಷ; ದೇವಸ್ಥಾನಗಳಲ್ಲಿ ಆಟ–ಪಾಠ

ಎಂ.ಸಿ.ಮಂಜುನಾಥ
Published 24 ಅಕ್ಟೋಬರ್ 2019, 19:30 IST
Last Updated 24 ಅಕ್ಟೋಬರ್ 2019, 19:30 IST
ಶಿವಾಜಿನಗರದ ಅಂಗನವಾಡಿ ಬಳಿ ಗೇಟ್ ಹಿಡಿದು ನಿಂತಿದ್ದ ಮುಗ್ಧ ಮಕ್ಕಳು
ಶಿವಾಜಿನಗರದ ಅಂಗನವಾಡಿ ಬಳಿ ಗೇಟ್ ಹಿಡಿದು ನಿಂತಿದ್ದ ಮುಗ್ಧ ಮಕ್ಕಳು   

ಹಾವೇರಿ: ಶಿವಾಜಿನಗರ 3ನೇ ಅಡ್ಡರಸ್ತೆಯಲ್ಲಿ ಕಂಡಿದ್ದು ನಾಲ್ಕು ದಶಕಗಳಷ್ಟು ಹಳೆಯದಾದ ಅಂಗನವಾಡಿ ಕೇಂದ್ರ. ಅಲ್ಲಿ ಕಬ್ಬಿಣದ ಗೇಟ್ ಹಿಡಿದು ನಿಂತಿದ್ದ ಮುಗ್ಧ ಮಕ್ಕಳು. ಆಳೆತ್ತರಕ್ಕೆ ಬೆಳೆದು ನಿಂತಿದ್ದ ಗಿಡ–ಗಂಟಿಗಳು. ಅವುಗಳ ಮಧ್ಯೆ ನುಸುಳಿಕೊಂಡೇ ಒಳ ಹೋಗುತ್ತಿದ್ದ ಕೆಲವು ಪುಟಾಣಿಗಳು.

ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ ಸಿಕ್ಕಿದ್ದು ವಿಜಯನಗರದ ಅಂಗನವಾಡಿ. ಸುತ್ತಲೂ ಮಳೆ ನೀರು ನಿಂತು ಆ ಕೇಂದ್ರ ನಡುಗಡ್ಡೆಯಂತಾಗಿತ್ತು. ಪಾಲಕರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡುಕೆರೆಯಂತಿದ್ದ ಆವರಣವನ್ನು ದಾಟಿ ಬಂದುಅಂಗನವಾಡಿಗೆ ಬಿಟ್ಟು ಹೋದರು.

ಇನ್ನೂ ಚೂರು ಮುಂದೆ ಸಾಗಿ ರಾಘವೇಂದ್ರ ಮಠದ ಬಳಿ ತೆರಳಿದಾಗ, ಅಲ್ಲಿ ಕಲ್ಮೇಶ್ವರ ದೇವಸ್ಥಾನವೇ ಅಂಗನವಾಡಿ ಕೇಂದ್ರವಾಗಿ ಹೋಗಿತ್ತು. ಸ್ವಂತ ಕಟ್ಟಡ ಇಲ್ಲದ ಕಾರಣ ಸಹಾಯಕಿಯರು ದೇವಸ್ಥಾನದ ಪ್ರಾಂಗಣದಲ್ಲೇ ಮಕ್ಕಳನ್ನು ಕೂರಿಸಿ ಅ,ಆ,ಇ,ಈ ಹೇಳಿಕೊಡುತ್ತಿದ್ದರು!

ADVERTISEMENT

ನಗರದಲ್ಲಿ ಗುರುವಾರ (ಅ.17) ಒಂದು ಸುತ್ತು ಹಾಕಿದಾಗ ಅಂಗನವಾಡಿ ಕೇಂದ್ರಗಳ ಬಳಿ ಕಣ್ಣಿಗೆ ರಾಚಿದ ದೃಶ್ಯಗಳಿವು. ಕೆಲವು ಕಡೆ ಕಟ್ಟಡಗಳು ಶಿಥಿಲಗೊಂಡಿದ್ದು, ಗೋಡೆ ಪಕ್ಕಕ್ಕೆ ಸರಿಯಲು ಹೇಳಿದರೆ ಆತಂಕದಿಂದ ಉಗುಳು ನುಂಗುತ್ತಿವೆ.ನೆಲದ ಕಲ್ಲು ಕಿತ್ತು ಹೋಗಿದ್ದು, ಇರುವೆಗಳು ಮೇಲೇಳುತ್ತಿವೆ. ಮಕ್ಕಳು ಹಾಗೂ ಸಹಾಯಕಿಯರ ಈ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ಇರುವ 283 ಅಂಗನವಾಡಿಗಳ ಪೈಕಿ, ಅರ್ಧಕ್ಕಿಂತ ಹೆಚ್ಚು ಕೇಂದ್ರಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಇನ್ನು ಆಗಸ್ಟ್ ತಿಂಗಳ ಪ್ರವಾಹಕ್ಕೆ ನೆಲಕ್ಕುರುಳಿದ ನಗರದ 30ಕ್ಕೂ ಹೆಚ್ಚು ಅಂಗನವಾಡಿಗಳು ಇನ್ನೂ ಎದ್ದು ನಿಂತಿಲ್ಲ. ಇಲ್ಲಿದ್ದ ಮಕ್ಕಳನ್ನು ಈಗ ದೇವಸ್ಥಾನಗಳಲ್ಲೋ, ಇನ್ನಾವುದೋ ಕಟ್ಟಡಗಳಲ್ಲೋ ಕೂರಿಸಿ ಆಟ–ಪಾಠ ಹೇಳಿಕೊಡಲಾಗುತ್ತಿದೆ.

‘ನೆರೆ ಹೋಗಿ ಮೂರು ತಿಂಗಳು ಕಳೆದರೂ, ಅಂಗನವಾಡಿಗಳನ್ನು ರಿಪೇರಿ ಮಾಡಿಸುವ ಸಣ್ಣ ಪ್ರಯತ್ನವೂ ಆಗಿಲ್ಲ.ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿವಿಧ ಯೋಜನೆಗಳ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿರುವ ಸರ್ಕಾರ,ಅಂಗನವಾಡಿಕಟ್ಟಡಗಳ ನಿರ್ಮಾಣಕ್ಕೆ ಹಾಗೂ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳದಿರುವುದು ಬೇಸರದ ವಿಚಾರ’ ಎನ್ನುತ್ತಿದ್ದಾರೆ ಪೋಷಕರು.

‘ವಿಜಯನಗರದ ಕೇಂದ್ರಕ್ಕೆ 25ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದವು. ಈಗ ಕೇಂದ್ರದ ಪಕ್ಕ ನಿಂತಿರುವ ನೀರನ್ನು ಕಂಡು ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಈಗ ನಾಲ್ಕು ಮಕ್ಕಳಷ್ಟೇ ಬಂದು ಹೋಗುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯರು.

ಇನ್ನು ಅಕ್ಕಮಹಾದೇವಿ ಹೊಂಡ ಸಮೀಪದ ಅಂಗನವಾಡಿಯ ರಿಪೇರಿ ಕಾರ್ಯ ನಡೆಯುತ್ತಿದ್ದು, ಮಕ್ಕಳನ್ನು ಅಯ್ಯಪ್ಪಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಕೂರಿಸಲಾಗುತ್ತಿದೆ. ‘ಶಿವಯೋಗೇಶ್ವರನಗರದ ಅಂಗನವಾಡಿ ಕೇಂದ್ರ ವಾರದಲ್ಲಿ ಎರಡು ದಿನ ತೆರೆದರೇ ಹೆಚ್ಚು ಎನ್ನುತ್ತಾರೆ’ ಅಲ್ಲಿನ ನಿವಾಸಿ ರಮೇಶಪ್ಪ ಬಣಕಾರ.

‘ಇದು ಸುಮಾರು 30 ವರ್ಷದಷ್ಟು ಹಳೆ ಕಟ್ಟಡ. ಮಳೆ ನೀರಿನಿಂದ ಚಾವಣಿ ಕುಸಿಯುವ ಹಂತ ತಲುಪಿದೆ. ಆಗಾಗ್ಗೆ ಮಣ್ಣು ಉದುರಿ ಮೈಮೇಲೆ ಬೀಳುತ್ತಿರುತ್ತದೆ.ಮಳೆ ಬಂದರೆ, ನೀರು ಗೋಡೆಯಿಂದ ಇಳಿದು ಇಡೀ ಕೊಠಡಿಯೇ ರಾಡಿಯಾಗಿ ಬಿಡುತ್ತದೆ. ಹೀಗಾಗಿ, ಸಹಾಯಕಿಯರು ದಾಖಲಾತಿಗಳು ಹಾಳಾಗಬಾರದೆಂದು ಕೇಂದ್ರದ ಪಕ್ಕದ ಮನೆಯಲ್ಲಿ ಇಟ್ಟಿದ್ದಾರೆ’ ಎಂದು ನಾಗೇಂದ್ರನಮಟ್ಟಿಯ ದಾದುಸಾಬ್ ಮರ್ದಾನ್‌ಸಾಬ್ ನದಾಫ್ ವಿವರಿಸಿದರು.

ನಗರದ ಲಾಲ್‌ಬಹದ್ದೂರ ಶಾಸ್ತ್ರಿ ತರಕಾರಿ ಮಾರುಕಟ್ಟೆ ಸಮೀಪ ಮದ್ಯದ ಅಂಗಡಿ ಪಕ್ಕದಲ್ಲಿ ಅಂಗನವಾಡಿಕೇಂದ್ರವಿದೆ. ಇದು ಮಕ್ಕಳ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಲ್ಲದೇ, ಮದ್ಯಪಾನಿಗಳು, ಮಾರುಕಟ್ಟೆಗೆ ಆಗಮಿಸುವವರು ಕೇಂದ್ರದ ಮುಂಭಾಗದಲ್ಲಿರುವ ಜಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಸೊಳ್ಳೆಗಳ ಕಾಟ, ದುರ್ನಾತದ ನಡುವೆಯೇ ಮಕ್ಕಳ ಕಲಿಕೆ ನಡೆಯುತ್ತಿದೆ ಎನ್ನುತ್ತಾರೆ ವ್ಯಾಪಾರಿ ಚಮನ್‌ಸಾಬ್‌

ಮಧ್ಯಾಹ್ನಕ್ಕೇ ಮುಗೀತಿವೆ:‘ತಾಯಂದಿರು ಕೂಲಿಗೆ ಹೋಗುವ ಸಮಯದಿಂದ ಅವರು ವಾಪಸ್ ಬರುವವರೆಗೆ, ಅಂದರೆ ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಅಂಗನವಾಡಿ ಇರಬೇಕು ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹೇಳುತ್ತದೆ. ಆದರೆ,ಬಹುತೇಕ ಅಂಗನವಾಡಿಗಳು ಮಧ್ಯಾಹ್ನದವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ’ ಎಂದು ಹಸೀನಾ ಹೆಡಿಯಾಲ ದೂರಿದರು.

‘ಅಧಿಕಾರಿಗಳು ವಾರಕ್ಕೊಮ್ಮೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂಬ ನಿಯಮವಿದ್ದರೂ, ಯಾರೂ ಪಾಲಿಸುತ್ತಿಲ್ಲ. ನಗರದ ಭೂವೀರಾಪುರ ಅಂಗನವಾಡಿಯಲ್ಲಿ ಮಕ್ಕಳಿಗೆ ಕೊಡುವ ಆಹಾರವನ್ನೂ ಲೂಟಿ ಹೊಡೆಯುತ್ತಿದ್ದಾರೆ. ಅಲ್ಲದೇ,‌ಶಾಲಾಪೂರ್ವ ಶಿಕ್ಷಣದಲ್ಲಿ ಮಕ್ಕಳಿಗೆ ಮಾಡಿಸಬೇಕಾದ ಒಳಾಂಗಣ ಆಟ, ಹೊರಾಂಗಣ ಆಟ, ಎಣಿಕೆ, ಪೋಣಿಕೆ, ಶುದ್ಧ ಅಕ್ಷರ, ಸ್ನಾಯುಗಳ ಬೆಳವಣಿಗೆ... ಇವ್ಯಾವ ಚಟುವಟಿಕೆಗಳೂ ಆಗುತ್ತಿಲ್ಲ’ ಎಂದರು.

ಹಂದಿ–ನಾಯಿಗಳ ಮಧ್ಯೆ ಆಟ:ಶಿವಾಜಿನಗರದ ಅಂಗನವಾಡಿ ಕಟ್ಟಡ ಬಣ್ಣ ಕಂಡು ದಶಕವೇ ಕಳೆದಿದೆ. ಗೋಡೆಗಳ ಮೇಲೆ ಬಿದ್ದಿರುವ ಬಿರುಕುಗಳು ಆ ಮಕ್ಕಳ ಕಣ್ಣಿಗೇ ಎದ್ದು ಕಾಣಿಸುತ್ತಿದ್ದರೂ, ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು ಕುರುಡರಾಗಿದ್ದಾರೆ.

‘ಎಲ್ಲ ಕಡೆ ಸಾಮಾನ್ಯವಾಗಿ ಮಕ್ಕಳು ಹೊರಗೆ ಹೋಗಬಾರದೆಂದು ಅಂಗನವಾಡಿ ಕೇಂದ್ರದ ಆವರಣದ ಗೇಟ್ ಬಂದ್ ಮಾಡುತ್ತಾರೆ. ಆದರೆ ಇಲ್ಲಿ, ಹಂದಿಗಳು ಒಳಗೆ ನುಗ್ಗಬಾರದೆಂದು ಗೇಟ್ ಸದಾ ಮುಚ್ಚಲಾಗಿರುತ್ತದೆ. ಇನ್ನು ಮಕ್ಕಳಿಗೆ ಆಟವಾಡಲು ಸ್ವಚ್ಛ ವಾತಾವಾರಣವಿಲ್ಲದೆ, ಹಂದಿ–ನಾಯಿಗಳ ನಡುವೆಯೇ ಕಾಲ ಕಳೆಯುವಂತಾಗಿದೆ’ ಎಂದು ಶಿವಾಜಿನಗರದ ಬಸವಣ್ಣೆಪ್ಪ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಆಟಿಕೆಗಳನ್ನು ಹಿಡಿದು ಆಡಬೇಕಾದ ಮಕ್ಕಳು, ಕೇಂದ್ರದೊಳಗೆ ಕಾಣಿಸಿಕೊಳ್ಳುವ ಹಾವು, ಚೇಳು... ಇನ್ನಿತರೆ ವಿಷ ಜಂತುಗಳ ಜತೆ ಹೋರಾಡುತ್ತಿವೆ. ಶಿಥಿಲಗೊಂಡಿರುವ ಗೋಡೆಗಳು, ಅಂಗನವಾಡಿ ಸಹಾಯಕಿಯರನ್ನು ಹಾಗೂ ಪಾಲಕರನ್ನು ಆತಂಕಕ್ಕೆ ದೂಡಿವೆ.

ಇರುವೆ– ಗೊದ್ದ ಮೆತ್ತಿಕೊಳ್ಳುತ್ತವೆ!
‘ಇರುವೆ–ಗೊದ್ದಗಳು ಮಕ್ಕಳ ಮೈಯನ್ನು ಮೆತ್ತಿಕೊಳ್ಳುತ್ತವೆ. ಮೂಲಸೌಕರ್ಯ ಮರೀಚಿಕೆಯಾಗಿದೆ. ಬಾಡಿಗೆ ಕಟ್ಟಡ ಪಡೆಯೋಣ ಎಂದರೆ ಸಮೀಪದಲ್ಲಿ ಒಂದು ಮನೆಯೂ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಕೊಠಡಿ ಕೇಳಿದರೆ, ‘ನಮಗೆ ಕೊಠಡಿಗಳಿಲ್ಲ. ಎಲ್ಲಿಂದ ಕೊಡೋದು’ ಎಂಬ ಉತ್ತರ ಬರುತ್ತದೆ. ಮಕ್ಕಳಿಕೆ ಕಲಿಕೆ ಹೇಳಿಕೊಡುವುದಕ್ಕಿಂತ, ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಂಗನವಾಡಿ ಸಹಾಯಕಿಯೊಬ್ಬರು.

ಮೊಟ್ಟೆಯನ್ನೇ ಕೊಡುತ್ತಿಲ್ಲ
ಹಾವೇರಿ ನಗರದ ರೈಲ್ವೆ ನಿಲ್ದಾಣದ ಬಳಿ ಒಂದು ಅಂಗನವಾಡಿ ಇದೆ. ಅದು ಕಳ್ಳಿಹಾಳ ಗ್ರಾಮ ಪಂಚಾಯ್ತಿಗೆ ಸೇರುತ್ತದೆ. ಅಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿರಲಿಲ್ಲ. ನಾನು ಹೋಗಿ ವಿಚಾರಿಸಿದಾಗ, ‘ಬಜೆಟ್ ಬಂದಿಲ್ಲ ಮೇಡಂ’ ಎಂದರು. ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಮೊಬೈಲ್ ತೆಗೆದಾಗ, ಆ ಸಹಾಯಕಿ ಕ್ಷಮೆಯಾಚಿಸಿದರು. ಇವರು ಈ ರೀತಿ ವರ್ತಿಸುವ ಮೂಲಕ ಅಂಗನವಾಡಿ ಮಕ್ಕಳು ಕಾನ್ವೆಂಟ್ ಸೇರಲು ಪ್ರೇರೇಪಿಸುತ್ತಿದ್ದಾರೆ ಎಂದು ಹಸೀನಾ ಹೆಡಿಯಾಲ ಬೇಸರ ವ್ಯಕ್ತಪಡಿಸಿದರು.

ಅಂಗನವಾಡಿ ಸ್ಥಿತಿಗತಿ

1,918:ಜಿಲ್ಲೆಯಲ್ಲಿರುವ ಅಂಗನವಾಡಿ

283: ಹಾವೇರಿ ನಗರದಲ್ಲಿರುವ ಕೇಂದ್ರಗಳು

ಸುಮಾರು 2,700:ಕೇಂದ್ರಗಳಿಗೆ ಹೋಗುತ್ತಿರುವ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.