ADVERTISEMENT

ಬೆಳಗಾವಿ ಪ್ರಕರಣದಲ್ಲಿ ಸರ್ಕಾರವೇ ಬೆತ್ತಲೆಯಾಗಿದೆ: ಬಿ.ಸಿ.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 8:23 IST
Last Updated 17 ಡಿಸೆಂಬರ್ 2023, 8:23 IST
ಬಿ.ಸಿ.ಪಾಟೀಲ, ಮಾಜಿ ಸಚಿವ 
ಬಿ.ಸಿ.ಪಾಟೀಲ, ಮಾಜಿ ಸಚಿವ    

ಹಾವೇರಿ: ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಬೆತ್ತಲೆ ಆಗಿಲ್ಲ, ಇಡೀ ಕಾಂಗ್ರೆಸ್ ಸರ್ಕಾರವೇ ಬೆತ್ತಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.‌

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿವೆ. ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದರೂ ಕಾಂಗ್ರೆಸ್‌ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಲೂಟಿ ಹೊಡೆಯುವಲ್ಲಿ ಪೈಪೋಟಿಗಿಳಿದಿದ್ದಾರೆ. ಅಭಿವೃದ್ಧಿಯಂತೂ ರಾಜ್ಯದಲ್ಲಿ ಶೂನ್ಯವಾಗಿದೆ. ಇಂಥ ಸರ್ಕಾರಕ್ಕೆ ಧಿಕ್ಕಾರ ಹಾಕಿ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. 

ರೈತರ ಬಗ್ಗೆ ಕಾಳಜಿಯಿಲ್ಲ:

ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಬಡ್ಡಿ ಬದಲು ಅಸಲು ಮನ್ನಾ ಮಾಡಬೇಕಿತ್ತು. ರೈತರಿಗೆ ಭಿಕ್ಷೆ ಕೊಟ್ಟ ರೀತಿ ಎಕರೆಗೆ ₹2 ಸಾವಿರ ಕೊಡ್ತೀವಿ ಎಂದಿದ್ದಾರೆ. ನಮ್ಮ ಸರ್ಕಾರ ₹23 ಸಾವಿರದವರೆಗೆ ಪರಿಹಾರ ಕೊಟ್ಟಿತ್ತು. ಸ್ಪಿಂಕ್ಲರ್‌ ಉಪಕರಣಗಳ ದರ ದುಪ್ಪಟ್ಟಾಗಿದ್ದು, ರೈತರಿಗೆ ಬರೆ ಹಾಕಿದಂತಾಗಿದೆ. ಸರ್ಕಾರಕ್ಕೆ ಕಿಂಚಿತ್ತೂ ರೈತರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. 

ADVERTISEMENT

ದೇಹ ಇಲ್ಲಿ, ಮನಸು ಅಲ್ಲಿ:

ಶಾಸಕರಾದ ಎಸ್.ಟಿ. ಸೋಮಶೇಖರ್, ವಿಶ್ವನಾಥ್, ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ ಆ ಮೂವರಿಗೆ ಬಿಜೆಪಿ ಪಕ್ಷದಿಂದ ನೋಟಿಸ್‌ ಕೊಟ್ಟಿದ್ದಾರೆ. ದೇಹ ಇಲ್ಲಿ, ಮನಸ್ಸು ಅಲ್ಲಿ ಅಂದರೆ ಆಗಲ್ಲ, ಇದು ದುರದೃಷ್ಟಕರ. ಪಕ್ಷಕ್ಕೂ ಇದರಿಂದ ಮುಜುಗರ. ಅವರು ಒಂದು ನಿರ್ಧಾರ ಮಾಡಬೇಕು. ಹೋಗೋದಿದ್ದರೆ ಹೋಗಬೇಕು, ಇರೋದಿದ್ದರೆ ಇರಬೇಕು ಎಂದು ಕುಟುಕಿದರು. 

‘ನಾನು ಲೋಕಸಭೆ ಚುನಾವಣೆಯ ಟಿಕೆಟ್‍ಗೆ ಲಾಬಿ ನಡೆಸಲು ದೆಹಲಿಗೆ ಹೋಗಿಲ್ಲ, ಪಕ್ಷ ತೀರ್ಮಾನ ಮಾಡಿ ಟಿಕೆಟ್ ಕೊಟ್ಟರೆ ಚುನಾವಣೆಗೆ ಸ್ಪರ್ಧೆಸಿಲು ಸಿದ್ಧ ಎಂದು ಈ ಹಿಂದೆಯೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.