
ಹಾನಗಲ್: ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ತಾಲ್ಲೂಕಿನ ಕಾಮನಹಳ್ಳಿ ಭಾಗದ ತೋಟಗಳಿಗೆ ಕರಡಿಗಳು ದಾಳಿ ಮಾಡುತ್ತಿದ್ದು, ರಾತ್ರಿ ವೇಳೆ ಕೃಷಿ ಚಟುವಟಿಕೆಗಳಿಗೆ ತೆರಳಲು ರೈತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣಗೊಂಡಿದೆ.
ಒಂದು ವಾರದಿಂದ ಈ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತಿನಲ್ಲಿ ಕರಡಿಗಳು ಓಡಾಡುತ್ತಿದ್ದು, ತೋಟಗಳಲ್ಲಿ ಅಳವಡಿಕೆಯಾದ ಜೇನು ಸಾಕಾಣಿಕೆ ಪೆಟ್ಟಿಗೆ ಗುರಿಯಾಗಿಸಿಕೊಂಡು ದಾಳಿ ಮಾಡಿ ಜೇನು ಸವಿಯುತ್ತಿವೆ. ಚಿಕ್ಕು, ಬಾಳೆ ಬೆಳೆಗಳನ್ನು ಹಾಳು ಮಾಡುತ್ತಿವೆ. ತೋಟದಲ್ಲಿ ಹೆಜ್ಜೆ ಗುರುತು ನೋಡಿ ಇದು ಕರಡಿಗಳ ದಾಳಿ ಎಂದು ರೈತರು ಅಂದಾಜಿಸುತ್ತಿದ್ದಾರೆ. ಪಾಳಾ ಮಾರ್ಗವಾಗಿ ಶಿವಪೂರ ಅರಣ್ಯದಿಂದ ಕರಡಿಗಳು ಆಗಮಿಸುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ.
ಈ ಭಾಗದ ಮುತ್ತಣ್ಣ ಪೂಜಾರ ಅವರ ತೋಟದಲ್ಲಿ ಅಳವಡಿಸಲಾದ ಜೇನು ಸಾಕಾಣಿಕೆ ಪೆಟ್ಟಿಗೆಗಳು ನಾಲ್ಕೈದು ದಿನಗಳಿಂದ ಹಾನಿಗೊಳ್ಳುತ್ತಿವೆ. ಜೇನು ನೊಣಗಳು ಸಾವನ್ನಪ್ಪಿವೆ. ಪೆಟ್ಟಿಗೆ ಒಡೆದುಕೊಂಡಿವೆ. ಜೇನು ತುಪ್ಪ ಖಾಲಿಯಾಗಿದೆ. ತೋಟದಲ್ಲಿನ ಚಿಕ್ಕು ಗಿಡಗಳ ರೆಂಬೆಗಳು ಮುರಿದಿವೆ. ಹಣ್ಣುಗಳು ಕರಡಿಗಳ ಪಾಲಾಗುತ್ತಿವೆ.
ಮೂರು ವರ್ಷಗಳ ಹಿಂದೆ ಇದೇ ರೀತಿ ಕರಡಿಗಳು ದಾಳಿ ಮಾಡಿದ್ದವು. ಆಗ ಅರಣ್ಯ ಇಲಾಖೆ ವತಿಯಿಂದ ಬೋನು ಇಟ್ಟು ಕರಡಿಗಳ ಸೆರೆಗೆ ಪ್ರಯತ್ನ ಮಾಡಲಾಗಿತ್ತು. ಆ ಬಳಿಕ ಜೇನು ಸಾಕಣೆ ಕೈಬಿಟ್ಟಿದ್ದೆ. ಈ ವರ್ಷ ಮತ್ತೆ ಜೇನು ಪೆಟ್ಟಿಗೆ ಅಲ್ಲಲ್ಲಿ ಅಳವಡಿಸಿದ್ದೇನೆ. ಮೂರು ಬಾರಿ ಜೇನು ತುಪ್ಪ ತೆಗೆದಿದ್ದೇನೆ. ಜೇನು ವಾಸನೆ ಅರಸಿ ಕರಡಿಗಳು ಬರುತ್ತಿವೆ. ಜೇನು ಸಾಕಾಣಿಕೆ ಸಹವಾಸ ಸಾಕು ಎನ್ನುವಂತಾಗಿದೆ ಎಂದು ಮುತ್ತಣ್ಣ ಪೂಜಾರ ತಿಳಿಸಿದ್ದಾರೆ.
‘ಹಾನಗಲ್ ಅರಣ್ಯ ವ್ಯಾಪ್ತಿಯಲ್ಲಿ ಕರಡಿಗಳು ಇವೆ. ಆಗಾಗ್ಗೆ ಜನವಸತಿ ಪ್ರದೇಶ, ತೋಟಗಳಿಗೆ ಬರುತ್ತವೆ. ಕರಡಿಗಳ ದಾಳಿ ಬಗ್ಗೆ ಕೃಷಿಕರು ಮಾಹಿತಿ ನೀಡಿದರೆ, ಕ್ರಮ ಕೈಗೊಳ್ಳಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಗಣೇಶ ಶೆಟ್ಟರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.