
ರಾಣೆಬೆನ್ನೂರು: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯನ್ನು ಜಾರಿಗೊಳಿಸಬಾರದೆಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ತಹಶೀಲ್ದಾರ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮುಖಂಡ ಅರುಣಕುಮಾರ ಪೂಜಾರ ಮಾತನಾಡಿ, ‘ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುತ್ತಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವುದರಿಂದ ಸಂವಿಧಾನ ವಿರೋಧಿಯಾಗಿದೆ’ ಎಂದು ಹೇಳಿದರು.
‘ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ರೈತರ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಪಕ್ಷವನ್ನು ನಾಮಾಶೇಷ ಮಾಡುವ ಸಮಯ ದೂರವಿಲ್ಲ. ಭ್ರಷ್ಟ ಆಡಳಿತ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲು ಸರ್ಕಾರವು ಈ ಮಸೂದೆ ಮೂಲಕ ಯತ್ನಿಸುತ್ತಿದೆ. ಅನ್ಯಾಯ ಅಥವಾ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದರೆ ಭಾವನಾತ್ಮಕ ಹಾನಿ ಎಂಬುದಾಗಿ ಬಿಂಬಿಸಿ, ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ’ ಎಂದು ಆರೋಪಿಸಿದರು.
‘ಪತ್ರಕರ್ತರ ತನಿಖಾ ವರದಿಗಳು ಸಹ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಈ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು ಹಾಗೂ ಮಾಧ್ಯಮದವರ ಮೇಲೆ ನಿಯಂತ್ರಣ ಹೇರಲಿದೆ. ಅವರನ್ನು ಹೆದರಿಸುತ್ತದೆ. ಈ ಮಸೂದೆ ಜಾರಿಗೆ ಅವಕಾಶ ನೀಡಿಬಾರದು. ನೀಡಿದ್ದೇ ಆದಲ್ಲಿ ಬೃಹತ್ ಪ್ರತಿಭಟನೆ ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ನಗರ ಮಂಡಲ ಅಧ್ಯಕ್ಷ ಮಂಜುನಾಥ ಕಾಟಿ, ಕೆ. ಶಿವಲಿಂಗಪ್ಪ, ಭಾರತಿ ಜಂಬಗಿ, ಸಿದ್ದು ಚಿಕ್ಕಬಿದರಿ, ಶಿವಕುಮಾರ ಹಾರಕನಾಳ, ಎ.ಬಿ. ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಪ್ರಭುಲಿಂಗಸ್ವಾಮಿ ಕರ್ಜಗಿಮಠ, ನಿಂಗರಾಜ ಕೋಡಿಹಳ್ಳಿ, ಪ್ರಕಾಶ ಪೂಜಾರ, ಪಾರ್ವತಿ ಹೊಸಮನಿ, ಚೆನ್ನಮ್ಮ ಗುರುಪಾದೇವರಮಠ ಇದ್ದರು.
‘ರಾಜ್ಯದ ಸಾಲದ ಹೊರೆ ಏರಿಕೆ’
‘ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ ಎಂಬುದಾಗಿ ಭರವಸೆ ನೀಡಿದ್ದ ಸರ್ಕಾರ ಇದೀಗ 3ರಿಂದ 6 ತಿಂಗಳಿಗೊಮ್ಮೆ ಹಣ ಹಾಕುತ್ತ ಬಡ ಮಹಿಳೆಯರನ್ನು ಬ್ಯಾಂಕಿಗೆ ಎಡತಾಕುವಂತೆ ಮಾಡಿದೆ. ಸುಳ್ಳು ಹೇಳುವುದರಲ್ಲೇ ಕಾಂಗ್ರೆಸ್‌ನವರು ಕಾಲಹರಣ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ರಾಜ್ಯದ ಮೇಲೆ ಸಾಲದ ಹೊರೆ ಏರಿಸುತ್ತಿರುವುದೇ ಕಾಂಗ್ರೆಸ್ ಸರ್ಕಾರದ ಮಹತ್ತರ ಸಾಧನೆಯಾಗಿದೆ’ ಎಂದು ಅರುಣಕುಮಾರ ಪೂಜಾರ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.