ADVERTISEMENT

ಹಾವೇರಿ: ಕರ್ತವ್ಯಕ್ಕೆ ಗೈರು; ಸಿಬ್ಬಂದಿ ವಿರುದ್ಧ ದೂರು

2ನೇ ದಿನವೂ ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರು ಹೈರಾಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 13:22 IST
Last Updated 8 ಏಪ್ರಿಲ್ 2021, 13:22 IST
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಾವೇರಿ ನಗರದಲ್ಲಿ ಗುರುವಾರ ಪ್ರಯಾಣಿಕರು ಮ್ಯಾಕ್ಸಿಕ್ಯಾಬ್‌ ಮೂಲಕ ಸಂಚರಿಸಿದರು 
ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಾವೇರಿ ನಗರದಲ್ಲಿ ಗುರುವಾರ ಪ್ರಯಾಣಿಕರು ಮ್ಯಾಕ್ಸಿಕ್ಯಾಬ್‌ ಮೂಲಕ ಸಂಚರಿಸಿದರು    

ಹಾವೇರಿ: ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿರುವ ಸಾರಿಗೆ ನೌಕರರು ಎರಡನೇ ದಿನವೂ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರವನ್ನು ಮುಂದುವರಿಸಿದರು.

ಸಾರಿಗೆ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದ ಕಾರಣ, ಮುಷ್ಕರದ ನಡುವೆಯೂ ನಗರ ಮತ್ತು ಪಟ್ಟಣಗಳಿಗೆ ಬಂದ ಸಾರ್ವಜನಿಕರು ಊರುಗಳಿಗೆ ತೆರಳಲು ವಾಹನ ಸೌಲಭ್ಯವಿಲ್ಲದೆ ಪರದಾಡಿದರು. ಮ್ಯಾಕ್ಸಿಕ್ಯಾಬ್‌ಗಳು ಬಸ್‌ ದರಕ್ಕಿಂತ ದುಬಾರಿ ದರವನ್ನು ನಿಗದಿಪಡಿಸಿದ್ದವು. ಪ್ರಯಾಣಿಕರು ಅನಿವಾರ್ಯವಾಗಿ ದುಪ್ಪಟ್ಟು ಹಣ ತೆತ್ತು ದಾವಣಗೆರೆ, ಹುಬ್ಬಳ್ಳಿ, ಗದಗ, ಶಿರಸಿ ಕಡೆಯತ್ತ ಸಂಚರಿಸಿದರು.

ದೂರು ಸಲ್ಲಿಕೆ:

ADVERTISEMENT

ಹಾವೇರಿ ವಿಭಾಗದ 6 ಡಿಪೋಗಳ ವ್ಯವಸ್ಥಾಪಕರು ಕರ್ತವ್ಯಕ್ಕೆ ಗೈರು ಹಾಜರಾದ ಸಿಬ್ಬಂದಿಗಳ ವಿರುದ್ಧ ತಮ್ಮ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ದೂರು ಸಲ್ಲಿಸಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ‘ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ’ಯಾಗಿದ್ದು, ಕರ್ನಾಟಕ ಅತ್ಯವಶ್ಯಕ ಸೇವಾ ನಿರ್ವಹಣಾ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

₹90 ಲಕ್ಷ ನಷ್ಟ:

‘6 ಡಿಪೋಗಳಿಂದ ಸುಮಾರು 100ರಿಂದ 120ಚಾಲಕರು ಮತ್ತು ನಿರ್ವಾಹಕರನ್ನು ಕರೆತರಲು ಬೈಕ್‌ನಲ್ಲಿ ಸಿಬ್ಬಂದಿ ಕಳುಹಿಸಿದ್ದೆವು. ಆದರೆ, ಯಾರೊಬ್ಬರೂ ಕರ್ತವ್ಯಕ್ಕೆ ಹಾಜರಾಗಲು ಮುಂದೆ ಬಂದಿಲ್ಲ. ಎರಡು ದಿನಗಳಿಂದ ಹಾವೇರಿ ವಿಭಾಗಕ್ಕೆ ₹90 ಲಕ್ಷ ನಷ್ಟವಾಗಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರಿಗೆ ಸಿಬ್ಬಂದಿಗೆ ಸನ್ಮಾನ

ಹಾವೇರಿಯಿಂದ ಗುತ್ತಲ ಮಾರ್ಗವಾಗಿ ಹಾವೇರಿ ಡಿಪೋದ ಒಂದು ಬಸ್‌ ಗುರುವಾರ ಸಂಚರಿಸಿತು. ಚಾಲಕ ರಾಮಣ್ಣ ಕುಂಕಮಗಾರ ಮತ್ತು ನಿರ್ವಾಹಕ ಆರ್‌.ವಿ. ಕೋಟಗಾರ ಕರ್ತವ್ಯಕ್ಕೆ ಹಾಜರಾದರು.

ಮುಷ್ಕರದ ನಡುವೆಯೂ ಸಾರ್ವಜನಿಕರ ಸೇವೆಗೆ ಮುಂದಾದ ಚಾಲಕ ಮತ್ತು ನಿರ್ವಾಹಕರನ್ನು ಬಸಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನೀಲಪ್ಪ ಕಂಬಳಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಂಗಯ್ಯ ಹಿರೇಮಠ, ಪರಮೇಶ ಮುಳ್ಳಳ್ಳಿ, ಸಣ್ಣಪ್ಪ ಮೇಲ್ಮಿರಿ, ಯಲ್ಲಪ್ಪ ಹಲಗೆಚ್ಚಣ್ಣನವರ, ಲಚ್ಚಪ್ಪ ಹುಲ್ಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.