ADVERTISEMENT

ಹಾವೇರಿ | ಸಿಎಸ್‌ಆರ್ ನಿಧಿ ಕೈ ಕೊಟ್ಟ ಕಂಪನಿ: 16 ಶಾಲೆಗಳ ಅಭಿವೃದ್ಧಿಗೆ ಅಡ್ಡಿ

ಸಂತೋಷ ಜಿಗಳಿಕೊಪ್ಪ
Published 7 ಜೂನ್ 2025, 13:24 IST
Last Updated 7 ಜೂನ್ 2025, 13:24 IST
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯ ದುಃಸ್ಥಿತಿ 
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯ ದುಃಸ್ಥಿತಿ    

ಹಾವೇರಿ: ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿ ನಂಬಿಕೊಂಡು ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಚಿಸಿದ್ದ ಜಿಲ್ಲಾಡಳಿತ, ಕಂಪನಿಯಿಂದ ನಿಗದಿಯಂತೆ ಹಣ ಬಾರದಿದ್ದರಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದೆ.

ಜಿಲ್ಲೆಯ 16 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿದ್ದ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ, ಅದಕ್ಕೆ ಅಗತ್ಯವಿರುವ ಹಣವನ್ನು ಸಿಎಸ್‌ಆರ್‌ ನಿಧಿಯಡಿ ಪಡೆಯಲು ಪ್ರಕ್ರಿಯೆ ಆರಂಭಿಸಿತ್ತು. ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸುವುದಾಗಿ ಸರ್ಕಾರಕ್ಕೆ ಹೇಳಿದ್ದ ‘ಬ್ರಿಗೇಡ್ ಎಂಟರ್‌ಪ್ರೈಸಸ್ ಆ್ಯಂಡ್ ವೆಂಕಟೇಶ್ವರ ಹ್ಯಾಚರೀಸ್ ಕಂಪನಿ’, ಸಿಎಸ್‌ಆರ್‌ ನಿಧಿಯಡಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು.

ಮಾತು ಕೊಟ್ಟು ವರ್ಷವಾದರೂ ಕಂಪನಿಯಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಇದದಿಂದ ಅಸಮಾಧಾನಗೊಂಡಿರುವ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ‘ಸಿಎಸ್‌ಆರ್‌ ನಿಧಿಯಡಿ ಹಣ ಬಾರದಿದ್ದರಿಂದ, 16 ಶಾಲೆಗಳ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಕಂಪನಿಯವರು ಮಾತು ತಪ್ಪಿದ್ದಾರೆ’ ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

ADVERTISEMENT

ರಾಜ್ಯದಲ್ಲಿ ವ್ಯವಹಾರ ನಡೆಸುತ್ತಿರುವ ಕಂಪನಿಗಳು, ಸಿಎಸ್‌ಆರ್‌ ನಿಧಿಯಡಿ ಸಾಮಾಜಿಕ ಕೆಲಸಗಳಿಗೆ ಹಣ ನೀಡಬೇಕೆಂಬ ನಿಯಮವಿದೆ. ಪ್ರತಿ ವರ್ಷವೂ ರಾಜ್ಯ ಸರ್ಕಾರದ ಮುಂದಾಳತ್ವದಲ್ಲಿ ಕಂಪನಿಗಳ ಮೂಲಕ ಆಯಾ ಜಿಲ್ಲೆಗಳಿಗೆ ನೇರವಾಗಿ ಹಣ ಪಾವತಿಯಾಗುತ್ತದೆ. ಯಾವ ಜಿಲ್ಲೆಗೆ ಯಾವ ಕಂಪನಿ ಹಣ ನೀಡಬೇಕೆಂಬುದನ್ನು ಸರ್ಕಾರವೇ ತೀರ್ಮಾನಿಸುತ್ತದೆ.

ಅದೇ ರೀತಿ ಹಾವೇರಿ ಜಿಲ್ಲೆಗೆ ಸಿಎಸ್‌ಆರ್‌ ನಿಧಿಯಡಿ ಹಣ ನೀಡುವಂತೆ ‘ಬ್ರಿಗೇಡ್ ಎಂಟರ್‌ಪ್ರೈಸಸ್ ಆ್ಯಂಡ್ ವೆಂಕಟೇಶ್ವರ ಹ್ಯಾಚರೀಸ್’ ಕಂಪನಿಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಕಂಪನಿಯವರು ಜಿಲ್ಲೆಗೆ ಯಾವುದೇ ಹಣ ನೀಡದೇ ಜವಾಬ್ದಾರಿಯಿಂದ ನುಣಚಿಕೊಂಡಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ದೂರಿದರು.

‘2024ರ ಆಗಸ್ಟ್ 19ರಿಂದ 2025ರ ಮೇ 15ರ ವರೆಗೆ ಸಿಎಸ್‌ಆರ್ ನಿಧಿಯಡಿ ನೀಡಬೇಕಿದ್ದ ಹಣದ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗಿದೆ. ಜಿಲ್ಲೆಯ 16 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿಯಡಿ ಹಣ ನೀಡುವುದಾಗಿ ‘ಬ್ರಿಗೇಡ್ ಎಂಟರ್‌ಪ್ರೈಸಸ್ ಆ್ಯಂಡ್ ವೆಂಕಟೇಶ್ವರ ಹ್ಯಾಚರೀಸ್’ ಕಂಪನಿ ಹೇಳಿತ್ತು. ಒಂದೂ ಶಾಲೆಗೂ ಅವರು ಹಣ ಕೊಟ್ಟಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸರ್ಕಾರದ ಹಲವು ಸಭೆಗಳಲ್ಲಿ ಸಿಎಸ್‌ಆರ್ ನಿಧಿ ಬಗ್ಗೆ ಪ್ರತಿ ಬಾರಿಯೂ ಚರ್ಚಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಂಪನಿಯವರು ಯಾವುದೇ ಹಣ ನೀಡಿಲ್ಲವೆಂದೇ ನಾವು ವರದಿ ನೀಡುತ್ತಿದ್ದೇವೆ. ಸಿಎಸ್‌ಆರ್ ನಿಧಿ ವಿಚಾರದಲ್ಲಿ ಶೂನ್ಯ ಸಾಧನೆಯಾಗಿದೆ’ ಎಂದರು.

ಕಂಪನಿಗಳ ಕಳ್ಳಾಟ:

‘ಸರ್ಕಾರದ ನಿಯಮಗಳನ್ನು ಕಾಟಾಚಾರಕ್ಕೆ ಪಾಲಿಸುತ್ತಿರುವ ಕಾರ್ಪೋರೇಟ್ ಕಂಪನಿಗಳು, ಹಣ ನೀಡದೇ ಕಳ್ಳಾಟ ನಡೆಸುತ್ತಿವೆ. ಈ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ವಿಚಾರದಲ್ಲೂ ಯಾವುದೇ ಹಣ ನೀಡದೇ ಕಂಪನಿಯವರು ಮಾತು ತಪ್ಪಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸಿಎಸ್‌ಆರ್ ನಿಧಿಯಡಿ ಹಣ ಬರುವ ನಿರೀಕ್ಷೆಯಲ್ಲಿ, 16 ಶಾಲೆಗಳ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಆಯಾ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಇತರರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಹಣ ಬರುತ್ತಿದ್ದಂತೆ ಕೆಲಸ ಆರಂಭವಾಗಬೇಕಿತ್ತು. ಆದರೆ, ಹಣ ಬಾರದಿದ್ದರಿಂದ ಎಲ್ಲ ಪ್ರಕ್ರಿಯೆ ಸ್ಥಗಿತಗೊಂಡಿದೆ. ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಇತರರು ಎಲ್ಲರೂ ಬೇಸರಗೊಂಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೂಲಕ ಮಾಹಿತಿ:

‘ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಭಿವೃದ್ಧಿ ಕಾರ್ಪೋರೇಟ್‌ ಕಂಪನಿಗಳಿಂದ ಬಂದ ಹಣದ ಬಗ್ಗೆ ಸರ್ಕಾರ ಮಾಹಿತಿ ಕೇಳಿತ್ತು. ಕಂಪನಿ ಹಣ ನೀಡಿಲ್ಲವೆಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಇತ್ತೀಚೆಗೆ ಮಾಹಿತಿ ಕಳುಹಿಸಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಹಾವೇರಿ ಮಾತ್ರವಲ್ಲದೇ ಹಲವು ಜಿಲ್ಲೆಗಳಲ್ಲಿ ಇದೇ ಸ್ಥಿತಿಯಿದೆ. ಅಲ್ಲಿಯೂ ಸಿಎಸ್‌ಆರ್‌ ನಿಧಿಯಡಿ ಹಣ ನೀಡುವಲ್ಲಿ ಕಂಪನಿಗಳು ನಿರ್ಲಕ್ಷ್ಯ ವಹಿಸಿವೆ. ಹಣ ನೀಡದ ಕಂಪನಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಷಯ’ ಎಂದು ಹೇಳಿದರು.

ಸಿಎಸ್‌ಆರ್‌ ನಿಧಿ ನೀಡದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬ್ರಿಗೇಡ್ ಎಂಟರ್‌ಪ್ರೈಸಸ್ ಆ್ಯಂಡ್ ವೆಂಕಟೇಶ್ವರ ಹ್ಯಾಚರೀಸ್ ಕಂಪನಿ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ಸುರೇಶ ಹುಗ್ಗಿ
‘ಮಹಾನಗರಗಳಿಗೆ ಸಿಎಸ್‌ಆರ್ ನಿಧಿ ಸೀಮಿತ’
‘ಬೆಂಗಳೂರು ಮಂಗಳೂರು ಹುಬ್ಬಳ್ಳಿ–ಧಾರವಾಡ ಮೈಸೂರು ಹಾಗೂ ಇತರೆ ಮಹಾನಗರಗಳಿಗೆ ಮಾತ್ರ ಸಿಎಸ್‌ಆರ್‌ ನಿಧಿ ಸೀಮಿತವಾಗಿರುವಂತೆ ಕಾಣುತ್ತಿದೆ. ಈ ನಗರಗಳಲ್ಲಿ ಸಿಎಸ್‌ಆರ್‌ ನಿಧಿಯಡಿ ಹಲವು ಕೆಲಸಗಳು ನಡೆದಿದೆ. ಅದೇ ಹಿಂದುಳಿದ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಸಿಗುತ್ತಿಲ್ಲ’ ಎಂದು ಹಾವೇರಿಯ ನಿವಾಸಿ ಲಕ್ಷ್ಮಣ ಕಂಬಾಳಿ ಹೇಳಿದರು. ‘ಹಾವೇರಿ ಜಿಲ್ಲೆಯ ಸರ್ಕಾರಿ ಶಾಲೆ–ಕಾಲೇಜು ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿ ಕಾರ್ಪೋರೇಟ್ ಕಂಪನಿಗಳ ಸಿಎಸ್‌ಆರ್‌ ನಿಧಿ ಅಗತ್ಯವಿದೆ. ನಿಗದಿಯಂತೆ ಹಣ ಮಂಜೂರು ಮಾಡುವಂತೆ ಸಂಬಂಧಪಟ್ಟ ಕಂಪನಿ ಮೇಲೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಒತ್ತಡ ಹಾಕಬೇಕು’ ಎಂದು ಕೋರಿದರು.
ಸಿಎಸ್‌ಆರ್ ನಿಧಿ ನಿರೀಕ್ಷೆಯಲ್ಲಿದ್ದ ಶಾಲೆಗಳು
ಬ್ಯಾಡಗಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಾಲ್ಲೂಕಿನ ದೇವರಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರವಾಡಿ ಸರ್ಕಾರಿ ಪ್ರೌಢಶಾಲೆ ದೇವಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1 ಕುರುಬಗೊಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1 ಹಿರೇಕೆರೂರು ತಾಲ್ಲೂಕಿನ ಅರಳಿಕಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 1 ಹಿರೇಬೂದಿಹಾಳದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ. 1 ರಟ್ಟೀಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಗುಂಡಗಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ರಾಣೆಬೆನ್ನೂರು ತಾಲ್ಲೂಕಿನ ಕೆರೂರು ಸರ್ಕಾರಿ ಮಾದರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ ಹಾವೇರಿ ತಾಲ್ಲೂಕಿನ ಕಡಕೋಳದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿಮತ್ತೂರಿನ ಸರ್ಕಾರಿ ಪ್ರೌಢಶಾಲೆ ಶಿಗ್ಗಾವಿ ತಾಲ್ಲೂಕಿನ ಹಿರೇಬೆಂಡಿಗೇರಿಯ ಸರ್ಕಾರಿ ಪ್ರೌಢಶಾಲೆ ಹೊಸೂರಿನ ಸರ್ಕಾರಿ ಪ್ರೌಢಶಾಲೆ ಹಾನಗಲ್‌ ತಾಲ್ಲೂಕಿನ ಅರಳೇಶ್ವರದ ಪ್ರೌಢಶಾಲೆ ಬೆಳಗಾಲಪೇಟೆಯ ಸರ್ಕಾರಿ ಪ್ರೌಢಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.