ADVERTISEMENT

ಮಳೆಯಲ್ಲೇ ಪ್ರತಿಭಟನೆ: ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಡಿಕೆಶಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 10:47 IST
Last Updated 4 ಸೆಪ್ಟೆಂಬರ್ 2019, 10:47 IST
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು   

ಹಾವೇರಿ: ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಘಟಕದಿಂದ ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೇರಿದ್ದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಳೆಯಲ್ಲೇಪ್ರತಿಭಟನೆ ನಡೆಸಿದರು. ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ವಾಹನಗಳ ಸಂಚಾರವನ್ನು ತಡೆದರು.

ಕಾಂಗ್ರೆಸ್‌ ಮುಖಂಡ ರುದ್ರಪ್ಪ ಲಮಾಣಿ ಮಾತನಾಡಿ, ‘ಡಿ.ಕೆ. ಶಿವಕುಮಾರ್‌ ಅವರ ₹8.59 ಕೋಟಿ ಹಣದ ಕುರಿತು ಇ.ಡಿ ಅಧಿಕಾರಿಗಳು ತನಿಖೆ ನಡೆಸಬೇಕು. ಆದರೆ ಮಾನಸಿಕ ಹಿಂಸೆ ನೀಡಬಾರದು. ಹಬ್ಬದ ದಿನದಲ್ಲೂ ತನಿಖೆ ನಡೆಸಿರುವುದು ಖಂಡನೀಯ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಹಿಂದೆ ಬಿಜೆಪಿ ಪಕ್ಷದಲ್ಲಿಯೂ ಕೋಟಿ ಕೋಟಿ ಹಗರಣ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಈಗ ಮತ್ತೆ ಮುಖ್ಯ ಮಂತ್ರಿಯಾಗಿದ್ದಾರೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿದೆ. ಬಡವರ ಪರ ಕೆಲಸ ಮಾಡಲು ಇವರಿಗೆ ಆಗುತ್ತಿಲ್ಲ. ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಒಳ್ಳೆಯ ಆಡಳಿತ ನೀಡುವುದನ್ನು ಬಿಟ್ಟು ವಿರೋಧ ಪಕ್ಷವೇ ಇರದಂತೆ ಮಾಡಲು ಮುಂದಾಗಿದೆ. ಹೀಗೆ ಮಾಡುತ್ತಿರುವ ಬಿಜೆಪಿಯ ನಿಲುವನ್ನು ಖಂಡಿಸುತ್ತೇವೆ’ ಎಂದರು.

ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಜಿಲ್ಲಾ ಪಂಚಾಯ್ತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ.ಮೈದೂರ, ಪ್ರೇಮಾ ಪಾಟೀಲ, ಸತೀಶ ಈಳಿಗೇರ, ಬಸವರಾಜ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.