ADVERTISEMENT

ಹಾವೇರಿ: ರೈತರ ಕೈಹಿಡಿಯದ ‘ಪುಷ್ಪ ಕೃಷಿ’!

ಕಾಲು ಎಕರೆ ಹೂವಿನಗಿಡ ನಾಶಪಡಿಸಿದ ಬೆಳೆಗಾರ: ಬಿಡಿಸಿದ ಹೂಗಳು ಮಣ್ಣುಪಾಲು

ಸಿದ್ದು ಆರ್.ಜಿ.ಹಳ್ಳಿ
Published 10 ಏಪ್ರಿಲ್ 2020, 19:45 IST
Last Updated 10 ಏಪ್ರಿಲ್ 2020, 19:45 IST
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೂವು ಖರೀದಿಸುವವರೇ ಇಲ್ಲದಂತಾದ ಕಾರಣ ಹಾವೇರಿ ತಾಲ್ಲೂಕು ಗಣಜೂರು ಗ್ರಾಮದಲ್ಲಿ 10 ಗುಂಟೆಯಲ್ಲಿ ಬೆಳೆದಿದ್ದ ಹೂವಿನ ಗಿಡಗಳನ್ನು ಟ್ರಾಕ್ಟರ್‌ ಮೂಲಕ ನಾಶಪಡಿಸುತ್ತಿರುವುದು 
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೂವು ಖರೀದಿಸುವವರೇ ಇಲ್ಲದಂತಾದ ಕಾರಣ ಹಾವೇರಿ ತಾಲ್ಲೂಕು ಗಣಜೂರು ಗ್ರಾಮದಲ್ಲಿ 10 ಗುಂಟೆಯಲ್ಲಿ ಬೆಳೆದಿದ್ದ ಹೂವಿನ ಗಿಡಗಳನ್ನು ಟ್ರಾಕ್ಟರ್‌ ಮೂಲಕ ನಾಶಪಡಿಸುತ್ತಿರುವುದು    

ಹಾವೇರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ, ತಾಲ್ಲೂಕಿನ ಗಣಜೂರು ಗ್ರಾಮದ ಹಲವಾರು ರೈತರ ಪಾಲಿಗೆ ‘ಪುಷ್ಪ ಕೃಷಿ’ಯೇ ಮುಳುವಾಗಿದೆ.

ತಾಲ್ಲೂಕಿನ ಗಣಜೂರು ಸೇರಿದಂತೆ ಹನುಮನಹಳ್ಳಿ, ಕಲ್ಲಾಪುರ, ಬಸಾಪುರ ಮುಂತಾದ ಗ್ರಾಮಗಳಲ್ಲಿ ಗಲಾಟೆ ಹೂಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ನೋಡಲು ಸೇವಂತಿಗೆಯಂತೆ ಕಾಣುವ ಈ ಹೂವುಗಳಿಗೆ ಜಿಲ್ಲೆಯಲ್ಲಿ ಭಾರಿ ಬೇಡಿಕೆಯಿದೆ. ಹಾವೇರಿ ನಗರದ ಹೂವಿನ ಮಾರುಕಟ್ಟೆಯಿಂದ ಹಾನಗಲ್‌, ಅಕ್ಕಿಆಲೂರು, ಬ್ಯಾಡಗಿ, ದೇವರಗುಡ್ಡ, ಹಿರೇಕೆರೂರು, ಶಿರಸಿ ಮುಂತಾದ ಕಡೆಗೆ ಹೂಗಳನ್ನು ಖರೀದಿದಾರರು ಕೊಂಡೊಯ್ಯುತ್ತಾರೆ.

10 ಗುಂಟೆ ಹೂ ಮಣ್ಣುಪಾಲು:‌‘ಧಾರವಾಡದಿಂದ ಹೂವಿನ ಸಸಿ ತರಿಸಿ ಮೂರು ತಿಂಗಳ ಹಿಂದೆ ನಾಟಿ ಮಾಡಿದ್ದೆ. ಎರಡು ಬಾರಿ ಕೊಯ್ಲು ಮಾಡಿ ಕೆ.ಜಿ.ಗೆ ₹30ರಂತೆ ಮಾರಾಟ ಮಾಡಿದ್ದೆ. ಯುಗಾದಿ ಹಬ್ಬಕ್ಕೆ ದರ ಏರಿಕೆಯಾಗಿ ಲಾಭದ ನಿರೀಕ್ಷೆಯಲ್ಲಿದ್ದೆ. ಆದರೆ, ಲಾಕ್‌ಡೌನ್‌ ಘೋಷಣೆಯಾದ ಪರಿಣಾಮ ಮಾರುಕಟ್ಟೆಯೇ ಬಂದ್‌ ಆಯಿತು. ಕೀಟಗಳು ಬಿದ್ದು ಗಿಡ ಹಾಳಾದವು. ದಿಕ್ಕೇ ತೋಚದೆ ಟ್ರಾಕ್ಟರ್‌ ಮೂಲಕ ಗಿಡಗಳನ್ನು ನಾಶಪಡಿಸಿದೆ’ ಎಂದರು ಗಣಜೂರಿನ ರೈತ ಷಣ್ಮುಖಪ್ಪ ಅಣಜಿ.

ADVERTISEMENT

‘ಹೂವಿನ ಸಸಿಗಳಿಗೆ ಒಟ್ಟು ₹17 ಸಾವಿರ ಖರ್ಚು ಮಾಡಿದ್ದೆ. ಸಿಕ್ಕಿದ್ದು ಬರೀ ₹5 ಸಾವಿರ. ನಮ್ಮ ಹಣ, ಸಮಯ, ಶ್ರಮ ಎಲ್ಲವೂ ಮಣ್ಣುಪಾಲಾಗಿದೆ. ಕೊರೊನಾ ನಮ್ಮ ಬದುಕಿಗೆ ಕೊಳ್ಳಿ ಇಟ್ಟಿದೆ’ ಎಂದು ದುಃಖ ವ್ಯಕ್ತಪಡಿಸಿದರು.

ಹೊಲದಲ್ಲೇ ಹೂ ಸುರಿದ ರೈತ:ಆರೇಳು ವರ್ಷಗಳಿಂದ ಪುಷ್ಪ ಕೃಷಿ ಮಾಡುತ್ತಿದ್ದೇನೆ. ಪ್ರತಿ ವರ್ಷ ₹2 ಲಕ್ಷದವರೆಗೆ ಆದಾಯ ಸಿಗುತ್ತಿತ್ತು. ಈ ಬಾರಿ ₹ 25 ಸಾವಿರ ಖರ್ಚು ಮಾಡಿ ಅರ್ಧ ಎಕರೆಯಲ್ಲಿ ಗಲಾಟೆ ಹೂ ಬೆಳೆದಿದ್ದೇನೆ. ಆದರೆ ಕೇಳುವವರೇ ಗತಿಯಿಲ್ಲ. ಮಧ್ಯವರ್ತಿಗಳು 50 ಕೆ.ಜಿ. ಹೂವಿನ ಚೀಲವನ್ನು ಬರೀ ₹ 150ಕ್ಕೆ ಕೇಳುತ್ತಿದ್ದಾರೆ. ಸಾಗಣೆ ವೆಚ್ಚವೂ ಸಿಗಲ್ಲ. ಹೀಗಾಗಿ ಬಿಡಿಸಿದ ಹೂಗಳನ್ನು ಹೊಲದಲ್ಲೇ ಸುರಿದಿದ್ದೇನೆ’ ಎಂದು ಗಣಜೂರಿನ ರೈತ ನಾಗರಾಜ ಅಂಗಡಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.