ಹಾವೇರಿ: ಜಿಲ್ಲೆಯ ಬ್ಯಾಡಗಿಯಲ್ಲಿರುವ ಏಷ್ಯಾದ ನಂಬರ್ ಒನ್ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ ನಡೆಯುತ್ತಿದ್ದದ್ದನ್ನು ಪತ್ತೆ ಮಾಡಿದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು, ಮಾರುಕಟ್ಟೆ ಕಾರ್ಯದರ್ಶಿ ಶೈಲಜಾ ಎಂ.ವಿ. ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ದಿಢೀರ ಭೇಟಿ ನೀಡಿದ ವೀರಪ್ಪ, ತೂಕದ ಯಂತ್ರಗಳನ್ನು ಪರಿಶೀಲಿಸಿದರು.
ಪ್ರತಿ ಮಳಿಗೆಗೂ ಭೇಟಿ ನೀಡಿದ ಅವರು, ತೂಕದಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದರು. ಬಿಲ್ ಪುಸ್ತಕದಲ್ಲೂ ಲೋಪ ಇರುವುದು ಪತ್ತೆಯಾಯಿತು.
ಅಧಿಕಾರಿಗಳ ವಿರುದ್ಧ ಗರಂ ಆದ ವೀರಪ್ಪ, 'ಏಷ್ಯಾದ ನಂಬರ್ ಒನ್ ಮಾರುಕಟ್ಟೆ ಎಂದು ಹೇಳುತ್ತೀರಾ. ಇಲ್ಲಿ ನೋಡಿದರೆ ತೂಕದ ಯಂತ್ರವೇ ಸರಿ ಇಲ್ಲ. ನಿಮಗೂ ಒಂದೊಂದು ಮೆಣಸಿನಕಾಯಿ ಪಾಲು ಬರುತ್ತಾ' ಎಂದರು.
ವೀರಪ್ಪ ಅವರ ಪ್ರಶ್ನೆಗೆ ಉತ್ತರಿಸಲು ಅಧಿಕಾರಿಗಳು ತಡವರಿಸಿದರು.
ಎಪಿಎಂಸಿ ಕಚೇರಿಯಲ್ಲಿಯ ತೂಕದ ಯಂತ್ರದಲ್ಲೂ ವ್ಯತ್ಯಾಸ ಕಂಡುಬಂತು. ಕಾರ್ಯದರ್ಶಿ ಹಾಗೂ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ವೀರಪ್ಪ ಸೂಚಿಸಿದರು. ತೂಕ ಮತ್ತು ಮಾಪನ ಇಲಾಖೆಯ ನಿರೀಕ್ಷಕಿ ಲಲಿತಾ ಅವರು ತೂಕದ ಯಂತ್ರ ಜಪ್ತಿ ಮಾಡಿದರು. ಪ್ರಕರಣ ದಾಖಲಿಸಿ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ವೀರಪ್ಪ, 'ಹಾವೇರಿ ಜಿಲ್ಲೆ ಎಂದರೆ ನಾನು ಏನೇನು ಅಂದುಕೊಂಡಿದ್ದೆ. ಆದರೆ, ಇಲ್ಲಿ ಎಲ್ಲವೂ ಸರಿ ಇಲ್ಲ. ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೂಲ ಸೌಕರ್ಯವಿಲ್ಲ. ತೂಕದಲ್ಲೂ ಮೋಸ ಮಾಡುತ್ತಿದ್ದಾರೆ. ದೇಶದ ಬೆನ್ನೆಲುಬು ರೈತನ ಬೆನ್ನು ಮೂಳೆಯನ್ನೇ ಮುರಿಯುತ್ತಿದ್ದಾರೆ. ಎಲ್ಲದರ ಬಗ್ಗೆ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.