
ಹಾನಗಲ್: ಧರ್ಮಾ ಜಲಾಶಯದ ಕಾಲುವೆ ಮತ್ತು ಕೆರೆಗಳ ದುರಸ್ತಿಯ ಕಾರಣಕ್ಕಾಗಿ ಈ ಬಾರಿಯ ಸಂಕ್ರಾಂತಿ ಪುಣ್ಯಸ್ನಾನಕ್ಕೆ ಧರ್ಮಾ ನದಿಯಲ್ಲಿ ನೀರು ಲಭ್ಯವಾಗುವುದು ವಿರಳ ಎಂಬ ಸ್ಥಿತಿ ಇದೆ.
ಪ್ರತಿ ವರ್ಷ ಜನವರಿ ಆರಂಭದಲ್ಲಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವುದು ಪದ್ಧತಿಯಾಗಿತ್ತು. ಕಾಲುವೆಯ ನೀರು ಅಲ್ಲಲ್ಲಿ ನದಿಗೆ ಸೇರಿಕೊಂಡು ಸಂಕ್ರಾಂತಿ ಸಮಯದಲ್ಲಿ ಜನರು ಸ್ನಾನ ಮಾಡುವಷ್ಟಾದರೂ ನದಿಯಲ್ಲಿ ನೀರು ಇರುತ್ತಿತ್ತು. ಧರ್ಮಾ ನದಿ ತಟಕ್ಕೆ ಹೊಂದಿಕೊಂಡು ಅಲ್ಲಲ್ಲಿ ದೇವಸ್ಥಾನ ಆವರಣದಲ್ಲಿ ಮಕರ ಸಂಕ್ರಾಂತಿಗೆ ಜಾತ್ರೆಗಳು ಮೇಳೈಸುತ್ತವೆ. ಈ ಸ್ಥಳದಲ್ಲಿ ಜನರು ಸಂಕ್ರಾಂತಿ ಪುಣ್ಯಸ್ನಾನ ಮಾಡುವುದು ವಾಡಿಕೆ.
ಆದರೆ 15 ದಿನಗಳ ಹಿಂದೆ ಸವಣೂರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದಿದ್ದ ರೈತರು ಮತ್ತು ಅಧಿಕಾರಿಗಳ ಸಭೆಯಲ್ಲಿ ₹50 ಕೋಟಿ ವೆಚ್ಚದಲ್ಲಿ ಜಲಾಶಯದ ಕಾಲುವೆಗಳ ಸದೃಢತೆ ಮತ್ತು ಕಾಲುವೆ ವ್ಯಾಪ್ತಿಯ ಕೆರೆಗಳ ದುರಸ್ತಿಗಾಗಿ ಜನವರಿ ಮೊದಲ ವಾರದಿಂದ ಕಾಮಗಾರಿ ಆರಂಭಿಸುವ ನಿರ್ಣಯ ಮಾಡಲಾಗಿತ್ತು.
ಕಾಮಗಾರಿಗೆ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ಕಾಲುವೆಗೆ ನೀರು ಹರಿಸುವುದು ಬಂದ್ ಇಡುವ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಕಾಮಗಾರಿ ಆರಂಭಕ್ಕೆ ಸಿದ್ಧತೆಗಳು ನಡೆದಿದ್ದು, ಧರ್ಮಾ ಜಲಾಶಯ ಭರ್ತಿಯಾಗಿದ್ದರೂ, ಕಾಲುವೆಗೆ ನೀರು ಹರಿಯುತ್ತಿಲ್ಲ.
ಕಾಲುವೆ ಆರಂಭಗೊಳ್ಳುವ ಸ್ಥಳವಾದ ಶ್ರೀಂಗೇರಿ ಪಿಕಪ್ ತನಕ ಸದ್ಯ ಜಲಾಶಯದ ನೀರು ನದಿ ಮೂಲಕ ಹರಿಸುವ ಬಗ್ಗೆ ಧರ್ಮಾ ಪ್ರಾಜೆಕ್ಟ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದರ ಸಮೀಪದ ಮಂತಗಿ ಭಾಗದಲ್ಲಿ ನದಿಯಲ್ಲಿ ನೀರು ಸಂಗ್ರಹವಾಗಲಿದೆ. ಹೀಗಾಗಿ ಇಲ್ಲಿ ನಡೆಯುವ ಸಂಕ್ರಾಂತಿ ಜಾತ್ರೆಗೆ ನದಿಯಲ್ಲಿ ನೀರಿನ ಕೊರತೆಯಾಗದು. ಶ್ರೀಂಗೇರಿ ಪಿಕಪ್ ಭಾಗದಲ್ಲಿ ನದಿಯ ಏರಿ ಒಡೆದುಕೊಂಡಿದೆ. ಇಲ್ಲಿ ಬೃಹತ್ ಪ್ರಮಾಣದಲ್ಲಿ ಕಾಮಗಾರಿ ಕೈಗೊಳ್ಳಬೇಕಾಗಿದೆ. ಸದ್ಯ ಇಲ್ಲಿಯ ತನಕ ಜಲಾಶಯದಿಂದ ನೀರು ಹರಿದು ಬರುವ ಅಂಗವಾಗಿ ನೀರು ಪೋಲಾಗದಂತೆ ಮರಳು ಚೀಲಗಳ ತಾತ್ಕಾಲಿಕ ತಡೆಗೊಡೆ ನಿರ್ಮಿಸಲಾಗುತ್ತಿದೆ ಎಂದು ಧರ್ಮಾ ಪ್ರಾಜೆಕ್ಟ್ ಎಂಜನಿಯರ್ ರಾಕೇಶ ಎಲ್.ಜಿ ತಿಳಿಸಿದ್ದಾರೆ.
ಧರ್ಮಾ ನದಿಗೆ ಹೊಂದಿಕೊಂಡು ನಡೆಯುವ ಹಾನಗಲ್, ಕಂಚಿನೆಗಳೂರ ಮತ್ತಿತರ ಭಾಗದ ಜಾತ್ರೆಗಳಿಗೆ ಅಲ್ಲಲ್ಲಿ ಚೆಕ್‌ಡ್ಯಾಮ್‌ಗಳಲ್ಲಿ ಸಂಗ್ರಹಿತ ನೀರು ನದಿಗೆ ಬಳಕೆಯಾಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.