ADVERTISEMENT

‘ನನ್ನವರು ಯಾರೂ ಇಲ್ಲ’ ನಾಟಕ ನಾಳೆಯಿಂದ

ಕೋವಿಡ್‌ ಮಾರ್ಗಸೂಚಿ ಅನ್ವಯ ದಿನಕ್ಕೆ 2 ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 19:30 IST
Last Updated 17 ಜನವರಿ 2022, 19:30 IST
ದಯಾನಂದ ಬೀಳಗಿ, ಕಲಾವಿದ 
ದಯಾನಂದ ಬೀಳಗಿ, ಕಲಾವಿದ    

ಹಾವೇರಿ: ಕೋವಿಡ್‌ ಮಾರ್ಗಸೂಚಿ ಅನ್ವಯ ಇಲ್ಲಿನ ವೀರಭದ್ರ ದೇವಸ್ಥಾನದ ಆವರಣದಲ್ಲಿ ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ‘ನನ್ನವರು ಯಾರೂ ಇಲ್ಲ’ ಎಂಬ ನಾಟಕ ಜ.19ರಿಂದ ಪ್ರದರ್ಶನಗೊಳ್ಳಲಿದ್ದು, ಜಿಲ್ಲೆಯ ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದು ಕಲಾವಿದ ದಯಾನಂದ ಬೀಳಗಿ ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಟುಂಬ ಸಮೇತರಾಗಿ ಆಗಮಿಸಿ ನೋಡುವ ನಾಟಕ ಇದಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಅಂತರ ಕಾಯ್ದುಕೊಂಡು ಕುರ್ಚಿಗಳನ್ನು ಅಳವಡಿಸಿದ್ದೇವೆ. ನಾಟಕದ ಟೆಂಟ್ 700 ಆಸನಗಳ ಸಾಮರ್ಥ್ಯ ಹೊಂದಿದ್ದರೂ, ನಾವು 200 ಆಸನಗಳನ್ನು ಹಾಕಿದ್ದೇವೆ. ಮಾಸ್ಕ್, ಸ್ಯಾನಿಟೈಸರ್‌ ಅನ್ನು ಪ್ರೇಕ್ಷಕರಿಗೆ ಕೊಡುತ್ತೇವೆ ಎಂದರು.

ಹಾವೇರಿ ನಗರದಲ್ಲಿ 2021ರ ನ.12ರಿಂದ ‘ಮಂಗಳೂರು ಹುಡುಗ– ಹುಬ್ಬಳ್ಳಿ ಹುಡುಗಿ’, ‘ಕುಂಟ ಕೋಣ– ಮೂಕ ಜಾಣ’ ಸೇರಿದಂತೆ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಗಿದ್ದು, ಜಿಲ್ಲೆಯ ಕಲಾಭಿಮಾನಿಗಳು ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ಬಾದಾಮಿಯ ಬನಶಂಕರಿ ದೇವಿ ಜಾತ್ರೆಯಲ್ಲಿ ನಾಟಕ ಪ್ರದರ್ಶಿಸುವ ಉದ್ದೇಶದಿಂದ ಟೆಂಟ್ ಕೀಳಲು ಆರಂಭಿಸಿದ್ದೇವು. ಆದರೆ, ಕೊರೊನಾ 3ನೇ ಅಲೆ ಪ್ರಾರಂಭವಾಗಿದ್ದರಿಂದ ಸರ್ಕಾರದ ಆದೇಶದಂತೆ ಅನೇಕ ದೊಡ್ಡ ಜಾತ್ರೆಗಳು ರದ್ದಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ವಾರಾಂತ್ಯ ಕರ್ಫ್ಯೂ’ ಜಾರಿಯಲ್ಲಿರುವ ಕಾರಣ ಶನಿವಾರ ಮತ್ತು ಭಾನುವಾರ ನಾಟಕ ಪ್ರದರ್ಶನ ಸಾಧ್ಯವಿಲ್ಲ. ಹೀಗಾಗಿ ಕಲಾವಿದರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.ಫೆ. 28ರವರೆಗೂ ನಾಟಕ ಪ್ರದರ್ಶಿಸಲು ನಾವು ಪರವಾನಗಿ ಪಡೆದುಕೊಂಡಿದ್ದೇವೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಮಧ್ಯಾಹ್ನ 3 ಹಾಗೂ ಸಂಜೆ 6ಕ್ಕೆ ಎರಡು ಪ್ರದರ್ಶನಗಳು ನಡೆಯಲಿವೆ’ ಎಂದರು.

ಹಿರಿಯ ಕಲಾವಿದರಾದ ಹನುಮಂತಪ್ಪ ಬಾಗಲಕೋಟ, ಬಸವೇಗೌಡ ಮಾತನಾಡಿ, ‘ನಾಟಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ. ನಮ್ಮ ಕಂಪನಿಯಲ್ಲಿ 20 ಜನ ಕಲಾವಿದರು, 12 ಜನ ಕಾರ್ಮಿಕರು ಸೇರಿ 32 ಜನ ಕೆಲಸ ಮಾಡುತ್ತಿದ್ದು, ಕೊರೊನಾದಿಂದ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ವೇತಾ ಬೀಳಗಿ, ಚಿಕ್ಕೇಶ ಕಲ್ಲೂರ, ಪ್ರಭಯ್ಯ ಹಿರೇಮಠ, ರಮೇಶ ಕರೆಗಾರ, ಮೀನಾಕ್ಷಿ ಮುಧೋಳ, ರಮೇಶ ಮುದ್ದೇಬಿಹಾಳ, ಬಾಬಣ್ಣ ಬನ್ನೂರ, ಚಂದ್ರು ಮೈಲಾರ, ಚೇತನ ಬಿಜಾಪುರ, ಮಲ್ಲು ಅಥಣಿ, ಪ್ರಜ್ವಲ್ ಬಿಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.