ADVERTISEMENT

ಹಾವೇರಿ: ಉಗುಳಿದರೆ, ಮಾಸ್ಕ್‌ ಧರಿಸದಿದ್ದರೆ ದಂಡ

​ಪ್ರಜಾವಾಣಿ ವಾರ್ತೆ
Published 2 ಮೇ 2020, 11:26 IST
Last Updated 2 ಮೇ 2020, 11:26 IST
ಹಾವೇರಿ ನಗರದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ನಗರಸಭೆಯಿಂದ ದಂಡ ಹಾಕುವ ಪ್ರಕ್ರಿಯೆ ಆರಂಭಗೊಂಡಿತು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಇದ್ದಾರೆ
ಹಾವೇರಿ ನಗರದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ನಗರಸಭೆಯಿಂದ ದಂಡ ಹಾಕುವ ಪ್ರಕ್ರಿಯೆ ಆರಂಭಗೊಂಡಿತು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಇದ್ದಾರೆ   

ಹಾವೇರಿ: ಕೋವಿಡ್ ಸೋಂಕಿನ ಕಟ್ಟುನಿಟ್ಟಿನ ನಿಯಂತ್ರಣದಿಂದ ಹಸಿರುವ ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಕೆಲವೊಂದು ವ್ಯಾಪಾರ ವಹಿವಾಟು, ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ ಸಾರ್ವಜನಿಕರಿಗೆ ಅವಶ್ಯ ಸೇವೆಗಳ ಪೂರೈಕೆ, ವಲಸೆ ಕಾರ್ಮಿಕರಿಗೆ ವಸತಿ, ಸುರಕ್ಷತೆ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ನಿಗಾವಹಿಸುವುದು ಸೇರಿದಂತೆ ನಿಷೇಧಾಜ್ಞೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಹಾಗೂ ರಿಯಾಯಿತಿಯಿಂದ ರೋಗ ಹರಡದಂತೆ ತಡೆಯಲು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.

ಗ್ರಾಮೀಣ ಮತ್ತು ನಗರ ವಲಯದಲ್ಲಿ ಕೋವಿಡ್ ಸೋಂಕು ತಡೆಯುವ ನಿಟ್ಟಿನಲ್ಲಿ ನಿಯಮಗಳ ಪಾಲನೆಯ ನಿಗಾಕ್ಕೆ ನಗರ ವಲಯಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಹಾಗೂ ಗ್ರಾಮೀಣ ವಲಯಕ್ಕೆ ಜಿಲ್ಲಾ ಪಂಚಾಯಿತಿಯ ಡಿ.ಆರ್.ಡಿ.ಎ. ಯೋಜನಾ ನಿರ್ದೇಶಕರನ್ನು ನೇಮಕ ಮಾಡಲಾಗಿದೆ ಹಾಗೂ ತಾಲ್ಲೂಕುವಾರು ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿ ಈಗಾಗಲೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಾಸ್ಕ್‌ ಕಡ್ಡಾಯ:

ADVERTISEMENT

ಸರ್ಕಾರದ ನಿರ್ದೇಶನದಂತೆ ಹಸಿರು ವಲಯದಲ್ಲಿ ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಅಂಗಡಿ ಮಾಲೀಕರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಐದು ಜನಕ್ಕಿಂತ ಹೆಚ್ಚು ಜನ ಒಂದೆಡೆ ಸೇರಬಾರದು. ಸಾರ್ವಜನಿಕರು ಅಂಗಡಿಯ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಒಂದು ಮೀಟರ್ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಉಗುಳದಂತೆ ಕ್ರಮ ಕೈಗೊಳ್ಳಬೇಕು. ಅಂಗಡಿ ಮಾಲೀಕರು ಕಡ್ಡಾಯವಾಗಿ ಸಾರ್ವಜನಿಕರು ಅಂಗಡಿಗಳ ಒಳಬರುವ ಪೂರ್ವದಲ್ಲಿ ಜ್ವರ ಪರೀಕ್ಷೆ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳುವುದು, ಅಂತರ ಕಾಪಾಡದ ಅಂಗಡಿ ಮಾಲೀಕರ ಲೈಸನ್ಸ್ ರದ್ದುಪಡಿಸಿ ದಂಡವಿಧಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ವಿಡಿಯೊಗ್ರಫಿ:

ಪ್ರತಿನಿತ್ಯ ಜನಜಂಗುಳಿ ಇರುವ ಅಂಗಡಿಗಳ ವಿಡಿಯೊಗ್ರಫಿ ಮಾಡಿ ಡಿವಿಡಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಪ್ರತಿನಿತ್ಯ ಸೆಕ್ಟರ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಮೇಲ್ಕಂಡ ನಿಯಮ ಪಾಲನೆ ಕುರಿತಂತೆ ಛಾಯಾಚಿತ್ರದೊಂದಿಗೆ ವರದಿ ಸಲ್ಲಿಸಬೇಕು. ಈ ಕುರಿತಂತೆ ನಿರ್ದೇಶನ ಪಾಲಿಸದೇ ಇದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದುಎಚ್ಚರಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಕ್ರಮ:

ಮೇಲಿನ ನಿಯಮಗಳನ್ನು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪಾಲಿಸದೇ ಇದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಂತೆ ದಂಡ ವಿಧಿಸಲು ಅವಕಾಶವಿದೆ. ಮೊದಲನೇ, ಎರಡನೇ ಹಾಗೂ ಮೂರನೇ ಉಲ್ಲಂಘನೆ ಪ್ರಕರಣಗಳಿಗೆ ತಲಾ ₹100 ಹಾಗೂ ನಂತರದ ಪದೇ ಪದೇ ಉಲ್ಲಂಘನೆ ಮುಂದುವರಿಸಿದರೆ ವಿಪತ್ತು ನಿರ್ವಹಣೆ ಕಾಯ್ದೆ ಕಲಂ 51ರಂತೆ ಪ್ರಕರಣಗಳನ್ನು ದಾಖಲಿಸಲು ಕೋವಿಡ್ ಸಾಂಕ್ರಾಮಿಕ ರೋಗ ತಡೆಯ ಜಿಲ್ಲಾ ನೋಡಲ್ ಅಧಿಕಾರಿಗಳಾದ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಯೋಗೇಶ್ವರ ಅವರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.