ಹಾವೇರಿ: ರಾಜ್ಯಕ್ಕೆ ಹೆಸರುವಾಸಿಯಾಗಿದ್ದ ನಗರದ ಹತ್ತಿ ಮಾರುಕಟ್ಟೆ, ಇತ್ತೀಚಿನ ದಿನಗಳಲ್ಲಿ ತನ್ನ ವರ್ಚಸ್ಸು ಕಳೆದುಕೊಂಡಿದೆ. ಎಪಿಎಂಸಿ ಅಧೀನದ ಈ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಕಮಿಷನ್ ದಂಧೆ ಹಾಗೂ ದಲ್ಲಾಳಿಗಳ ಹಾವಳಿಯಿಂದ ಬೇಸತ್ತ ರೈತರು, ಖಾಸಗಿ ವ್ಯಾಪಾರಿಗಳತ್ತ ಮುಖ ಮಾಡುತ್ತಿದ್ದಾರೆ. ನಿಗದಿತ ಪ್ರಮಾಣದಲ್ಲಿ ಹತ್ತಿ ಪೂರೈಕೆಯಾಗದಿದ್ದರಿಂದ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿ ಆಗಿದೆ.
ಜಿಲ್ಲೆಯ ಬಹುಪಾಲು ಜಮೀನಿನಲ್ಲಿ ಹತ್ತಿ ಬೆಳೆಯುತ್ತಿದ್ದ ಕಾಲವಿತ್ತು. ನಗರದ ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿ ಮಳಿಗೆಗಳಲ್ಲಿ ಹತ್ತಿ ಮಾರಾಟವೂ ಜೋರಾಗಿತ್ತು. ರಸ್ತೆಯ ಅಕ್ಕ– ಪಕ್ಕದ ಸ್ಥಳದಲ್ಲೂ ಸಾಲು ಸಾಲು ಹತ್ತಿಯ ಹಂಡಿಗೆಗಳು ಕಾಣಸಿಗುತ್ತಿದ್ದವು. ಆದರೆ, ಈಗ ಹತ್ತಿ ಬೆಳೆಯುವ ಪ್ರದೇಶವೂ ಕಡಿಮೆಯಾಗಿದೆ. ಮಾರುಕಟ್ಟೆಯೂ ಹತ್ತಿ ಇಲ್ಲದೇ ಭಣಗುಡುತ್ತಿದೆ.
ಹತ್ತಿ ಬೆಳೆಯಲು ಅಧಿಕ ವೆಚ್ಚ ತಗಲುತ್ತಿದ್ದು, ಕಾರ್ಮಿಕರ ಅಭಾವವೂ ಕಾಡುತ್ತಿದೆ. ಜೊತೆಗೆ, ಬೆಳೆದ ಹತ್ತಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಇದರಿಂದ ನೊಂದ ರೈತರು, ಹತ್ತಿ ಬೆಳೆಯುವ ಸ್ಥಳಗಳಲ್ಲಿ ಗೋವಿನ ಜೋಳ ಹಾಗೂ ಜೋಳದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲ ರೈತರಂತೂ ಹತ್ತಿ ಬೆಳೆಯೆಂದರೆ, ಸಹವಾಸವೇ ಬೇಡವೆಂದು ಕೈ ಮುಗಿಯುತ್ತಿದ್ದಾರೆ.
ಮೊದಲಿನಿಂದಲೂ ಹತ್ತಿ ಬೆಳೆಯುತ್ತಿರುವ ಕೆಲ ರೈತರು ಮಾತ್ರ, ಬೆಳೆ ಮುಂದುವರಿಸಿದ್ದಾರೆ. ಆದರೆ, ಅವರು ಬೆಳೆದ ಹತ್ತಿಗೆ ಇಂದಿಗೂ ಸೂಕ್ತ ಬೆಲೆ ಸಿಗುತ್ತಿಲ್ಲವೆಂಬುದು ಬೇಸರದ ಸಂಗತಿ. ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಸವಣೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹತ್ತಿ ಬೆಳೆಯಲಾಗಿದೆ.
ಬಿತ್ತನೆ, ನಿರ್ವಹಣೆ ಹಾಗೂ ಕೂಲಿ ಕಾರ್ಮಿಕರಿಗಾಗಿ ರೈತರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಎಕರೆಗೆ 5 ಕ್ವಿಂಟಲ್‌ನಿಂದ 10 ಕ್ವಿಂಟಲ್‌ವರೆಗೂ ಹತ್ತಿ ಬೆಳೆಯುವ ರೈತರಿದ್ದಾರೆ. ಇಷ್ಟಾದರೂ ಹಾವೇರಿಯ ಗುತ್ತಲ ರಸ್ತೆಯಲ್ಲಿರುವ ಮಾರುಕಟ್ಟೆಗೆ ಹತ್ತಿ ಬರುತ್ತಿಲ್ಲ. ಮಾರುಕಟ್ಟೆಯಲ್ಲಿರುವ ಕಮಿಷನ್ ದಂಧೆ ಹಾಗೂ ದಲ್ಲಾಳಿಗಳ ಹಾವಳಿಯೇ ಇದಕ್ಕೆ ಕಾರಣವೆಂದು ರೈತರು ದೂರುತ್ತಿದ್ದಾರೆ.
‘ಅಜ್ಜನ ಕಾಲದಿಂದಲೂ ಹಿಂಗಾರಿನಲ್ಲಿ ಹತ್ತಿ ಬೆಳೆಯುತ್ತಿದ್ದೇವೆ. ಮುಂಗಾರಿನಲ್ಲಿ ಬೆಳೆ ಪರಿವರ್ತನೆ ಇರುತ್ತದೆ. ಹಿಂಗಾರಿನಲ್ಲಿ ಹತ್ತಿ ಬೆಳೆದರೂ ಸೂಕ್ತ ಬೆಲೆ ಸಿಗುತ್ತಿಲ್ಲ. ಹಾವೇರಿಯ ಮಾರುಕಟ್ಟೆಗೆ ಹೋದರೆ, ಅಲ್ಲಿಯ ದಲ್ಲಾಳಿಗಳೇ ಹೆಚ್ಚು ಹಣ ಪಡೆಯುತ್ತಾರೆ. ಹತ್ತಿ ಬೆಳೆಯಲು ತಗುಲಿದ ವೆಚ್ಚವೂ ಸಿಗುವುದಿಲ್ಲ. ಇದೇ ಕಾರಣಕ್ಕೆ ಮಾರುಕಟ್ಟೆಗೆ ಹೋಗುವುದನ್ನೇ ಬಂದ್ ಮಾಡಿದ್ದೇವೆ’ ಎಂದು ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ರೈತ ಮಹಾಲಿಂಗಪ್ಪ ಕೆಂಚಣ್ಣನವರ ಹೇಳಿದರು.
‘ಈ ಮೊದಲು ಹಾವೇರಿ ಮಾರುಕಟ್ಟೆಗೆ ಹತ್ತಿ ತೆಗೆದುಕೊಂಡು ಹೋಗುತ್ತಿದ್ದೆವು. ₹100ಕ್ಕೆ ₹6 ಕಮಿಷನ್ ಕೊಡಬೇಕಿತ್ತು. ಜೊತೆಗೆ, ದಲ್ಲಾಳಿಗಳು ಪ್ರತ್ಯೇಕ ಕಮಿಷನ್ ಪಡೆಯುತ್ತಿದ್ದರು. ಹಮಾಲಿಗಳಿಗೂ ಪ್ರತ್ಯೇಕವಾಗಿ ಹಣ ನೀಡಬೇಕಿತ್ತು. ಎಲ್ಲರಿಗೂ ಕೊಟ್ಟ ನಂತರ ನಮಗೆ ಏನು ಉಳಿಯುತ್ತಿರಲಿಲ್ಲ. ಹೀಗಾಗಿ, ಮಾರುಕಟ್ಟೆ ಸಹವಾಸವನ್ನೇ ಬಿಟ್ಟಿದ್ದೇವೆ’ ಎಂದು ತಿಳಿಸಿದರು.
ಕಾರ್ಖಾನೆಗಳಿಗೆ ಸರಬರಾಜು: ತಾವು ಬೆಳೆದ ಹತ್ತಿಯನ್ನು ರೈತರು ಮಾರುಕಟ್ಟೆಗೆ ಕೊಂಡೊಯ್ದು ದಲ್ಲಾಳಿಗಳಿಗೆ ಮಾರುತ್ತಿದ್ದಾರೆ. ಅದೇ ದಲ್ಲಾಳಿಗಳು, ಹತ್ತಿಯನ್ನು ಕಾರ್ಖಾನೆಗಳಿಗೆ ಕಳುಹಿಸುತ್ತಿದ್ದರು. ತಮ್ಮ ಬೆಳೆಗೆ ದಲ್ಲಾಳಿಗಳ ಅಗತ್ಯವಿಲ್ಲವೆಂಬುದನ್ನು ಮನಗಂಡ ರೈತರು, ಈಗ ನೇರವಾಗಿ ಕಾರ್ಖಾನೆಗಳತ್ತ ಮುಖ ಮಾಡುತ್ತಿದ್ದಾರೆ. ಹೊಲದಲ್ಲಿ ಬೆಳೆದ ಹತ್ತಿಯನ್ನು ತಕ್ಕಮಟ್ಟಿಗೆ ಸಂಸ್ಕರಣೆ ಮಾಡಿ ದಲ್ಲಾಳಿಗಳ ಕಾಟವಿಲ್ಲದೇ ಕಾರ್ಖಾನೆಗೆ ಕಳುಹಿಸುತ್ತಿದ್ದಾರೆ. ಜೊತೆಗೆ, ಮಾರುಕಟ್ಟೆಯ ದರಕ್ಕೆ ತಕ್ಕಂತೆ ಕಮಿಷನ್ ಮುಕ್ತವಾಗಿ ಹಣ ಪಡೆದುಕೊಳ್ಳುತ್ತಿದ್ದಾರೆ.
‘ರೈತರು ಹೊಲದಲ್ಲಿ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದಾರೆ. ಆದರೆ, ದಲ್ಲಾಳಿಗಳು ಮಾರುಕಟ್ಟೆಯಲ್ಲಿ ಕುಳಿತು ರೈತರ ಸುಲಿಗೆ ಮಾಡುತ್ತಿದ್ದಾರೆ. ಇದರಿಂದಲೇ ರೈತರು ಬೆಳೆದ ಬೆಳೆಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. ಹತ್ತಿ ಮಾರುಕಟ್ಟೆಯಲ್ಲಿ ಆಗುತ್ತಿದ್ದ ಅನ್ಯಾಯಕ್ಕೆ ಸೆಡ್ಡು ಹೊಡೆದಿರುವ ರೈತರು, ಮಾರುಕಟ್ಟೆಯನ್ನೇ ಬಹಿಷ್ಕಾರ ಮಾಡಿದ್ದಾರೆ. ಕಾರ್ಖಾನೆಗಳಿಗೆ ಹತ್ತಿ ಕಳುಹಿಸಿ ತಕ್ಕಮಟ್ಟಿಗೆ ಲಾಭ ಪಡೆಯುತ್ತಿದ್ದಾರೆ’ ಎಂದು ಕೂಡಲ ಗ್ರಾಮದ ರೈತ ಬಸವಂತಪ್ಪ ಹೇಳಿದರು.
‘ಹಾವೇರಿ ಮಾರುಕಟ್ಟೆಗೆ ಯಾವುದೇ ರೈತರು ಹೋಗುತ್ತಿಲ್ಲ. ಹೊರ ಜಿಲ್ಲೆಯ ಮಾರುಕಟ್ಟೆಗೂ ಕೆಲವರು ಹತ್ತಿ ಕಳುಹಿಸುತ್ತಿದ್ದಾರೆ. ಉಳಿದವರು ಗೌರಾಪುರ ಸೇರಿದಂತೆ ವಿವಿಧೆಡೆ ಇರುವ ಕಾರ್ಖಾನೆಗಳಿಗೆ ನೇರವಾಗಿ ಹತ್ತಿ ಮಾರುತ್ತಿದ್ದಾರೆ’ ಎಂದು ತಿಳಿಸಿದರು.
₹100ಕ್ಕೆ ₹6 ಕಮಿಷನ್ ಎಕರೆಗೆ 5 ಕ್ವಿಂಟಲ್‌ನಿಂದ 10 ಕ್ವಿಂಟಲ್ ಹತ್ತಿಯಿಂದ ರೈತರು ವಿಮುಖ
ಖರ್ಚು ಹೆಚ್ಚಿದ್ದರೂ ಹತ್ತಿ ಬೆಳೆಯುತ್ತಿದ್ದೇವೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಕೃಷಿ ಉತ್ಪನ್ನಗಳಿಗೆ ಕಮಿಷನ್ ಮುಕ್ತ ವ್ಯವಹಾರ ನಡೆಯಬೇಕುಕುತುಬುದ್ದೀನ್ ಅಲ್ಲಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.