ಹಾವೇರಿ: ಜಿಲ್ಲೆಯಾದ್ಯಂತ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಜನರು ಮೂರ್ತಿಗಳ ದರುಶನ ಪಡೆಯುತ್ತಿದ್ದಾರೆ.
ಜಿಲ್ಲಾ ಕೇಂದ್ರ ಹಾವೇರಿ ನಗರದ ಹಲವು ಕಡೆಗಳಲ್ಲಿ ವಿಷಯಾಧಾರಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಂಜೆಯಿಂದ ರಾತ್ರಿಯವರೆಗೂ ಕುಟುಂಬ ಸಮೇತ ನಗರದಲ್ಲಿ ಸುತ್ತಾಡುತ್ತಿರುವ ಜನರು, ಮೂರ್ತಿಗಳ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಮಹಾಮಂಡಳದ ಸದಸ್ಯರು ಮೂರ್ತಿಗಳಿಗೆ ತಕ್ಕಂತೆ ಅಲಂಕಾರ ಮಾಡಿದ್ದಾರೆ. ವಿದ್ಯುತ್ ಅಲಂಕಾರವೂ ಅಂದವನ್ನು ಹೆಚ್ಚಿಸುತ್ತಿದೆ. ಮೂರ್ತಿಗಳು ಹಾಗೂ ಪೆಂಡಾಲ್ ಎದುರು ಜನರು ಫೋಟೊ ತೆಗೆಸಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನಗರದ ವಿಶೇಷತೆ ಪಟ್ಟಿಯಲ್ಲಿರುವ ಹಿಂದೂ ಮಹಾಗಣಪತಿ ಹಾಗೂ ಸುಭಾಷ್ ವೃತ್ತದ ಗಣಪತಿ ಮೂರ್ತಿಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಅವರ ಜೊತೆಯಲ್ಲಿ ಮಕ್ಕಳು ಆಗಮಿಸಿ, ‘ಗಣೇಶ ಮಹಾರಾಜಕೀ ಜೈ’ ಘೋಷಣೆ ಕೂಗುತ್ತಿದ್ದಾರೆ.
ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ವಿಶೇಷತೆಯುಳ್ಳ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲಿಯೂ ಜನರು, ಪೆಂಡಾಲ್‌ನಿಂದ ಪೆಂಡಾಲ್‌ಗೆ ಓಡಾಡಿ ಮೂರ್ತಿಗಳ ದರುಶನ ಪಡೆಯುತ್ತಿದ್ದಾರೆ.
ಜಿಲ್ಲೆಯಾದ್ಯಂತ ಐದು, ಏಳು, ಒಂಭತ್ತು, ಹನ್ನೊಂದು... ಹೀಗೆ ನಿಗದಿತ ದಿನದಂದು ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ. ತಮ್ಮ ಅವಧಿಯಲ್ಲಿ ವಿಸರ್ಜನೆ ಮೆರವಣಿಗೆ ನಡೆಸಲು ಮಹಾಮಂಡಳದವರು ಅದ್ಧೂರಿ ತಯಾರಿ ಮಾಡಿಕೊಂಡಿದ್ದಾರೆ.
ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗಳನ್ನು ವಿಸರ್ಜನೆ ಮಾಡಲು ಸ್ಥಳೀಯ ಆಡಳಿತ ಸಂಸ್ಥೆಗಳು ವ್ಯವಸ್ಥೆ ಮಾಡಿವೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಕೆರೆ, ಬಾವಿಗಳು ತುಂಬಿವೆ. ಅಲ್ಲಿಯೂ ಹಲವರು ಮೂರ್ತಿ ವಿಸರ್ಜನೆ ಮಾಡಲಿದ್ದಾರೆ.
ಜನರನ್ನು ಆಕರ್ಷಿಸಿದ ಕಲಾತ್ಮಕ ಗಣೇಶ ಮೂರ್ತಿ ಜಾಲತಾಣದಲ್ಲಿ ಹರಿದಾಡಿದ ಗಣೇಶ ಎದುರು ಸೆಲ್ಫಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.