ADVERTISEMENT

ಹಾವೇರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 15:46 IST
Last Updated 21 ಡಿಸೆಂಬರ್ 2025, 15:46 IST
   

ಹಾವೇರಿ: ತಾಲ್ಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಆಹಾರ ಸೇವಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡಿದ್ದು, ಹಾವೇರಿಯ ವೀರಾಪೂರ ಆಸ್ಪತ್ರೆಗೆ ಭಾನುವಾರ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಹಳೇ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಇಜಾರಿಲಕಮಾಪುರದಲ್ಲಿರುವ ‘ತಂಡೂರು ರೆಸಿಡೆನ್ಶಿ’ ಬಹುಮಹಡಿ ಕಟ್ಟಡದಲ್ಲಿ ಹಾಸ್ಟೆಲ್‌ ನಡೆಸಲಾಗುತ್ತಿತ್ತು. ಇಲ್ಲಿಂದಲೇ ವಿದ್ಯಾರ್ಥಿನಿಯರು ನಿತ್ಯವೂ ದೇವಗಿರಿಯಲ್ಲಿರುವ ಕಾಲೇಜಿಗೆ ಹೋಗಿಬರುತ್ತಿದ್ದಾರೆ.

ಹಾಸ್ಟೆಲ್‌ನಲ್ಲಿ ಶನಿವಾರ ರಾತ್ರಿ ಊಟ ಮಾಡಿದ್ದ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ, ಭಾನುವಾರ ಬೆಳಿಗ್ಗೆಯಿಂದ ಏರುಪೇರು ಕಾಣಿಸಿಕೊಂಡಿತ್ತು. ಬೆಳಿಗ್ಗೆ ಪುನಃ ವಿದ್ಯಾರ್ಥಿನಿಯರು ಬಿಳಿ ಹೋಳಿಗೆ ಹಾಗೂ ಚಟ್ನಿ ಆಹಾರ ಸೇವಿಸಿದ್ದರು. ಇದಾದ ನಂತರ, ಕೆಲವರಿಗೆ ವಾಂತಿ–ಭೇದಿ, ಹೊಟ್ಟೆ ನೋವು, ಸುಸ್ತು ಸೇರಿ ವಿವಿಧ ರೀತಿಯ ಸಮಸ್ಯೆ ಉಂಟಾಗಿತ್ತು.

ADVERTISEMENT

ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ವಿದ್ಯಾರ್ಥಿನಿಯರೇ ಒಬ್ಬೊಬ್ಬರಾಗಿ ಆಟೊದಲ್ಲಿಯೇ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. ವೀರಾಪೂರ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯ ವೇಳೆಗೆ 15 ವಿದ್ಯಾರ್ಥಿನಿಯರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದರ ಜೊತೆಯಲ್ಲಿ ಬೇರೆ ಆಸ್ಪತ್ರೆಗಳಲ್ಲಿಯೂ ವಿದ್ಯಾರ್ಥಿನಿಯರು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.

ಕೊಪ್ಪಳ, ಗದಗ, ಹಾವೇರಿ ಜಿಲ್ಲೆಯ ವಿವಿಧ ಊರುಗಳ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದಾರೆ. ಭಾನುವಾರ ಸಂಜೆಯೇ ಪೋಷಕರಿಗೆ ವಿಷಯ ಗೊತ್ತಾಗಿದೆ. ಸ್ಥಳೀಯ ವಿದ್ಯಾರ್ಥಿಗಳ ಪೋಷಕರು ಆಸ್ಪತ್ರೆಗೆ ಬಂದಿದ್ದಾರೆ. ದೂರದ ಊರಿನ ಪೋಷಕರು, ಸೋಮವಾರ ಆಸ್ಪತ್ರೆಗೆ ಬರಲಿದ್ದಾರೆ.

‘ಹಾಸ್ಟೆಲ್‌ನಲ್ಲಿ ಸುಮಾರು 40 ವಿದ್ಯಾರ್ಥಿನಿಯರಿದ್ದಾರೆ. ರಾಜರಾಜೇಶ್ವರಿ ಕ್ಯಾಟರಿಂಗ್ ಏಜೆನ್ಸಿಯವರು ಸಿದ್ಧ ಆಹಾರ ಪೂರೈಕೆಗಾಗಿ ಟೆಂಡರ್ ಪಡೆದುಕೊಂಡಿದ್ದಾಎರೆ.‌ ಶನಿವಾರ ರಾತ್ರಿ ಚಪಾತಿ, ಜೀರಾ ರೈಸ್ ಊಟಕ್ಕೆ ನೀಡಿದ್ದರು. ಜೀರಾ ರೈಸ್ ಹಳಸಿದ ವಾಸನೆ ಬರುತ್ತಿತ್ತು. ಆದರೆ, ಅನಿವಾರ್ಯವಾಗಿ ಅದನ್ನೇ ತಿಂದೆವು. ಭಾನುವಾರ ಬೆಳಿಗ್ಗೆಯೇ ಹೊಟ್ಟೆ ನೋವು ಆರಂಭವಾಗಿತ್ತು. ಚಳಿಯಿಂದ ಆಗಿರಬಹುದೆಂದು ಸುಮ್ಮನಾದೆವು. ಬೆಳಿಗ್ಗೆ ಬಿಳಿ ಹೋಳಿಗೆ ಸಹ ತಿಂದೆವು. ಮಧ್ಯಾಹ್ನ ಹೊಟ್ಟೆ ನೋವು ತೀವ್ರಗೊಂಡು ಸುಸ್ತು ಹೆಚ್ಚಾಯಿತು. ವಾಂತಿಯೂ ಆಯಿತು. ಭಯವಾಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದೇವೆ’ ಎಂದು ವಿದ್ಯಾರ್ಥಿನಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಾರ್ಡನ್ ನಾಪತ್ತೆ: ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ರಾಣೆಬೆನ್ನೂರಿನ ಸುಧಾ ಎಂಬುವವರನ್ನು ವಾರ್ಡನ್ ಆಗಿ ಮಾಡಲಾಗಿದೆ. ಆದರೆ, ಅವರು ವಾರಕ್ಕೊಮ್ಮೆ ಮಾತ್ರ ಹಾಸ್ಟೆಲ್‌ಗೆ ಬಂದು ಹೋಗುತ್ತಿದ್ದಾರೆ. ಭಾನುವಾರ ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥವಾದರೂ ಯಾರೊಬ್ಬರೂ ಆರೋಗ್ಯ ವಿಚಾರಿಸಿಲ್ಲ. ವಾರ್ಡನ್ ಸಹ ಹಾಸ್ಟೆಲ್‌ನಲ್ಲಿ ಇರದೇ ನಾಪತ್ತೆಯಾಗಿದ್ದರು. ಸಹಾಯಕ ವಾರ್ಡನ್ ಶೈಲಾ ಮಾತ್ರ ಆಸ್ಪತ್ರೆಗೆ ಬಂದು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು.

‘ವಾರ್ಡನ್ ಅಪರೂಪಕ್ಕೆ ಬರುತ್ತಾರೆ. 40 ವಿದ್ಯಾರ್ಥಿನಿಯರ ಪೈಕಿ 15 ವಿದ್ಯಾರ್ಥಿನಿಯರು ಆಸ್ಪತ್ರೆಗೆ ಹೋಗಿದ್ದಾರೆ. ಆಹಾರದಲ್ಲಿ ವ್ಯತ್ಯಾಸವಾಗಿರುವುದಾಗಿ ಹೇಳುತ್ತಿದ್ದಾರೆ. ಏನು ಎಂಬುದು ಪರೀಕ್ಷೆಯಿಂದಲೇ ಗೊತ್ತಾಗಬೇಕು’ ಎಂದು ಹಾಸ್ಟೆಲ್‌ ಸಿಬ್ಬಂದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.