
ಹಾವೇರಿ: ಯುದ್ಧ ಪೀಡಿತ ಯುಎಇಯ ಅಬುಧಾಬಿಯಲ್ಲಿ ಹಾವೇರಿಯ ಎಂಜಿನಿಯರ್ ರಾಘವೇಂದ್ರ ಕುದರಿ ಅವರ ಕುಟುಂಬ ಸಿಲುಕಿದ್ದು, ತಾವು ವಾಸವಿದ್ದ ಮನೆಯನ್ನು ಬಿಟ್ಟು ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ
ತಾಲ್ಲೂಕಿನ ಕನವಳ್ಳಿ ಗ್ರಾಮದ ರಾಘವೇಂದ್ರ ಕುದರಿ, ಉದ್ಯೋಗ ಅರಸಿ ಅಬುದಾಬಿಗೆ ಹೋಗಿದ್ದಾರೆ. ಅಲ್ಲಿಯ ಮೊಹಮ್ಮದ್ ಬಿನ್ ಜಾಯೆದ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ, ಮಕ್ಕಳ ಜೊತೆ ವಾಸವಿದ್ದಾರೆ.
ರಾಘವೇಂದ್ರ ವಾಸವಿದ್ದ ಮನೆ ಬಳಿಯೇ ಕ್ಷಿಪಣಿ ದಾಳಿ ನಡೆದಿದೆ. ಇದರಿಂದ ರಾಘವೇಂದ್ರ ಅವರ ಮನೆಗೂ ಹಾನಿಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವರು ಮನೆ ತೊರೆದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಅಬುದಾಬಿಯಲ್ಲಿನ ಪರಿಸ್ಥಿತಿ ಬಗ್ಗೆ ವಿಡಿಯೊ ಚಿತ್ರೀಕರಿಸಿ ಸಂಬಂಧಿಕರಿಗೆ ಕಳುಹಿಸಿದ್ದಾರೆ.
‘ನಾವು ನೆಲೆಸಿದ್ದ ಸ್ಥಳದಿಂದ 15 ಕಿ.ಮೀ. ದೂರದಲ್ಲಿ ಅಮೆರಿಕ ಸೇನಾ ನೆಲೆಯಿದೆ. ಅದನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಯುತ್ತಿದೆ. ನಾವು ಸುರಕ್ಷಿತ ಎಂಬ ಭಾವನೆಯಿದೆ’ ಎಂದೂ ಹೇಳಿದ್ದಾರೆ.
ಕುದರಿ ಕುಟುಂಬ ಸುರಕ್ಷಿತ: ‘ಕುದರಿ ಕುಟುಂಬದವರನ್ನು ಸಂಪರ್ಕಿಸಿದ್ದೇವೆ. ಅವರು ಊರಿಗೆ ಬರಲು ಸಿದ್ಧರಿದ್ದರೆ, ವ್ಯವಸ್ಥೆ ಮಾಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.