ADVERTISEMENT

ಬೀದಿನಾಯಿ ಸೆರೆಗೆ ಕಸ ಸಂಗ್ರಹಗಾರರ ನಿಯೋಜನೆ

ವಾರದಿಂದ ಕಸ ಸಂಗ್ರಹ ಸ್ಥಗಿತ | ಮನೆಗಳಲ್ಲಿ ದುರ್ನಾಸನೆ; ನಿವಾಸಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 9:58 IST
Last Updated 27 ಫೆಬ್ರುವರಿ 2026, 9:58 IST
ಎಚ್‌. ಕಾಂತರಾಜು
ಎಚ್‌. ಕಾಂತರಾಜು   

ಹಾವೇರಿ: ನಗರದಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ಕೆಲಸ, ಐದು ದಿನಗಳಿಂದ ಸ್ಥಗಿತಗೊಂಡಿದೆ. ಕಸ ವಿಲೇವಾರಿ ಮಾಡುತ್ತಿದ್ದ ಸಿಬ್ಬಂದಿಯನ್ನು, ಬೀದಿನಾಯಿ ಸೆರೆಹಿಡಿಯಲು ನಿಯೋಜಿಸುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿರುವುದಾಗಿ ನಿವಾಸಿಗಳು ದೂರುತ್ತಿದ್ದಾರೆ. ನಗರಸಭೆಯ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರಹಾಕುತ್ತಿದ್ದಾರೆ.

ನಗರದಲ್ಲಿ ಮನೆಗಳಿಂದ, ಹೋಟೆಲ್‌ಗಳಿಂದ ಹಾಗೂ ಇತರೆ ಸ್ಥಳಗಳಿಂದ ಕಸ ಸಂಗ್ರಹಿಸಿ, ವಿಲೇವಾರಿ ಘಟಕಕ್ಕೆ ಸಾಗಿಸಲು ವಾಹನಗಳಿವೆ. ಅದರ ಚಾಲಕರು ಹಾಗೂ ಸಹಾಯಕರು, ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಸ್ಥಳಕ್ಕೆ ತೆರಳಿ ಕಸ ಸಂಗ್ರಹಿಸುತ್ತಿದ್ದರು. ಈಗ ಅವರನ್ನು ನಾಯಿ ಸೆರೆಹಿಡಿಯುವ ಕೆಲಸಕ್ಕೆ ನಿಯೋಜಿಸಲಾಗಿದ್ದು, ಇದರಿಂದಾಗಿ ಕಸ ಸಂಗ್ರಹ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ನಾಯಿಗಳನ್ನು ಸೆರೆಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಹಳೇ ಎಪಿಎಂಸಿ ಬಳಿ ನಗರಸಭೆಯಿಂದ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ಈಗಾಗಲೇ 80ಕ್ಕೂ ಹೆಚ್ಚು ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ADVERTISEMENT

ಶಸ್ತ್ರಚಿಕಿತ್ಸೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲು ನಗರಸಭೆ ಸಿದ್ಧತೆ ನಡೆಸುತ್ತಿದೆ. ಆದರೆ, ಇದುವರೆಗೂ ಯಾರೊಬ್ಬರೂ ನಾಯಿ ಸೆರೆಹಿಡಿಯುವ ಕೆಲಸಕ್ಕೆ ಬಂದಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು, ಚಾಲಕರು, ಲೋಡರ್ಸ್‌ಗಳನ್ನೇ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ನಾಯಿಗಳು ಇಲ್ಲದಿದ್ದರಿಂದ ಕೆಲ ದಿನ ಕೇಂದ್ರವನ್ನು ಬಂದ್ ಮಾಡಲಾಗಿತ್ತು. ಕಸ ಸಂಗ್ರಹಿಸುವ ವಾಹನಗಳಲ್ಲಿಯೇ ಸಂಚರಿಸಿದ ಸಿಬ್ಬಂದಿ, ಬೀದಿನಾಯಿಗಳನ್ನು ಹಿಡಿದು ಕೇಂದ್ರಕ್ಕೆ ಬಿಟ್ಟಿದ್ದಾರೆ.

ಅಶ್ವಿನಿನಗರ, ಶಿವಾಜಿನಗರ, ವಿದ್ಯಾನಗರ, ಬಸವೇಶ್ವರನಗರ, ಇಜಾರಿ ಲಕಮಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮನೆಗಳಿಂದ ಐದು ದಿನಗಳಿಂದ ಕಸ ಸಂಗ್ರಹಿಸಿಲ್ಲ. ಮನೆ ಬಾಗಿಲಿಗೆ ವಾಹನಗಳು ಬಾರದಿದ್ದರಿಂದ ಕೆಲ ನಿವಾಸಿಗಳು, ಕಸವನ್ನು ನಿರ್ಜನ ಪ್ರದೇಶ ಹಾಗೂ ನಗರದ ಹೊರವಲಯದಲ್ಲಿ ಎಸೆಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕಸ ಸಂಗ್ರಹಿಸುವ ಸಿಬ್ಬಂದಿಯನ್ನು ನಾಯಿ ಸೆರೆಹಿಡಿಯಲು ಬಳಸಿಕೊಳ್ಳುತ್ತಿರುವ ಅಧಿಕಾರಿಗಳ ವರ್ತನೆ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

‘ನಿತ್ಯವೂ ಮನೆಗೆ ಹೋಗಿ ಕಸ ಸಂಗ್ರಹ ಮಾಡುತ್ತಿದ್ದೆವು. ಈಗ ನಮ್ಮನ್ನು ಬೀದಿನಾಯಿ ಸೆರೆಹಿಡಿಯಲು ಕಳುಹಿಸುತ್ತಿದ್ದಾರೆ. ಹೀಗಾಗಿ, ವಾರದಿಂದ ಮನೆಗಳಿಗೆ ಹೋಗಿಲ್ಲ. ಕಸ ಸಂಗ್ರಹಿಸಿಲ್ಲ. ಅಧಿಕಾರಿಗಳು ಯಾವಾಗ ಕಸ ಸಂಗ್ರಹಿಸಲು ಕಳುಹಿಸುತ್ತಾರೆಯೋ ಅವಾಗಲೇ ಮನೆಗಳಿಗೆ ಹೋಗುತ್ತೇವೆ’ ಎಂದು ಕಸ ಸಂಗ್ರಹ ವಾಹನದ ಚಾಲಕರೊಬ್ಬರು ಹೇಳಿದರು.

ಕಸ ನಿರ್ವಹಣೆಯಲ್ಲಿ ಲೋಪ: ‘ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸ ಹೊರಗೆ ಎಸೆಯಲು ಮನಸ್ಸಾಗುತ್ತಿಲ್ಲ. ನಾಯಿ ಸೆರೆಹಿಡಿಯಲು ಅನುಭವಿ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು. ಸ್ವಚ್ಛತೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು, ಅವರ ಕೆಲಸ ಮಾಡಲು ಬಿಡಬೇಕು’ ಎಂದು ಇಜಾರಿಲಕಮಾಪುರ ನಿವಾಸಿ ರಾಮಣ್ಣ ಹೇಳಿದರು.

ಹಾವೇರಿಯಲ್ಲಿ ಸಂಚರಿಸುವ ಕಸ ಸಂಗ್ರಹ ವಾಹನ

‘ವಾರದಲ್ಲಿ ಒಂದು ದಿನ ಬಳಕೆ‘ ‘ಬೀದಿನಾಯಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೇಂದ್ರದ ನಿರ್ವಹಣೆಯ ಗುತ್ತಿಗೆ ಪಡೆದವರು ಇನ್ನೂ ಬಂದಿಲ್ಲ. ಹೀಗಾಗಿ ನಮ್ಮ ಸಿಬ್ಬಂದಿ ಮೂಲಕವೇ ಕೇಂದ್ರ ನಡೆಸುತ್ತಿದ್ದೇವೆ. ಸಿಬ್ಬಂದಿ ಬಳಸಿಕೊಂಡು ವಾರದಲ್ಲಿ ಒಂದು ದಿನ ಮಾತ್ರ ಬೀದಿನಾಯಿಗಳನ್ನು ಸೆರೆಹಿಡಿಯುತ್ತಿದ್ದೇವೆ’ ಎಂದು ನಗರಸಭೆಯ ಪೌರಾಯುಕ್ತ ಎಸ್. ಕಾಂತರಾಜು ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕಸ ಸಂಗ್ರಹದಲ್ಲಿ ವ್ಯತ್ಯಯವಾದ ಬಗ್ಗೆ ಜನರು ದೂರು ನೀಡಿಲ್ಲ. ಎಲ್ಲಿಯಾದರೂ ಸಮಸ್ಯೆಯಾಗಿದ್ದರೆ ತಕ್ಷಣ ಕ್ರಮ ಕೈಗೊಳ್ಳುವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.