ಹಾವೇರಿ: ಜಿಲ್ಲೆಯ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ನೀಡುತ್ತಿರುವ ಜೋಳವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಪತ್ತೆ ಮಾಡಿದ್ದು, ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪಡಿತರದಾರರಿಗೆ ಅಕ್ಕಿಯ ಜೊತೆಯಲ್ಲಿ ಜೋಳ ನೀಡಲಾಗುತ್ತಿದೆ. ಇಂಥ ಜೋಳವನ್ನು ಕಡಿಮೆ ದರಕ್ಕೆ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
‘ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂಗ್ರಹಿಸಿದ್ದ ಜೋಳದ ಚೀಲಗಳನ್ನು ಲಾರಿಯಲ್ಲಿ ತುಂಬಿಕೊಂಡು ರಾಣೆಬೆನ್ನೂರು ಮಾರ್ಗವಾಗಿ ಸಾಗಿಸಲಾಗುತ್ತಿತ್ತು. ಠಾಣೆ ಬಳಿಯ ರಸ್ತೆಯಲ್ಲಿ ಭಾನುವಾರ (ಜುಲೈ 20) ಗಸ್ತಿನಲ್ಲಿದ್ದ ಸಿಬ್ಬಂದಿ, ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಜೋಳದ ಚೀಲಗಳು ಪತ್ತೆಯಾಗಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಜೋಳದ ಚೀಲಗಳ ಸಮೇತ ಲಾರಿಯನ್ನು ಠಾಣೆಗೆ ತಂದಿದ್ದ ಪೊಲೀಸರು, ಆಹಾರ ಇಲಾಖೆಯ ನಿರೀಕ್ಷಕರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದಿದ್ದ ನಿರೀಕ್ಷಕರು ಹಾಗೂ ಸಿಬ್ಬಂದಿ, ಜೋಳವನ್ನು ಪರಿಶೀಲಿಸಿದ್ದರು. ಚೀಲದಲ್ಲಿರುವ ಜೋಳ, ಪಡಿತರದಾರರಿಗೆ ನೀಡಿದ್ದ ಜೋಳವೆಂಬುದನ್ನು ಖಾತ್ರಿಪಡಿಸಿದರು’ ಎಂದು ತಿಳಿಸಿದರು.
ಇಬ್ಬರ ವಿರುದ್ಧ ಪ್ರಕರಣ: ‘ಪಡಿತರ ಜೋಳ ಅಕ್ರಮ ಸಾಗಣೆ ಸಂಬಂಧ ಆಹಾರ ನಿರೀಕ್ಷಕ ಶಂಭುಲಿಂಗ ಸೋಮನಹಳ್ಳಿ ಅವರು ದೂರು ನೀಡಿದ್ದಾರೆ. ಆರೋಪಿಗಳಾದ ರಾಣೆಬೆನ್ನೂರಿನ ಕರಬಸಪ್ಪ ಶಿವಯೋಗೆಪ್ಪ ಹಾದರಹಳ್ಳಿ ಹಾಗೂ ಜಮಾಲ್ ಸಂಶುದ್ದೀನ್ ಸುನ್ನರ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜಿಲ್ಲೆಯಲ್ಲಿ ಪಡಿತರದಾರರಿಗೆ ಹಂಚಿಕೆ ಮಾಡಿದ್ದ ಜೋಳವನ್ನು ಆರೋಪಿಗಳು ಖರೀದಿಸಿ, ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದರು. ಅದೇ ಜೋಳವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಯೋಚಿಸಿದ್ದರೆಂಬುದು ಸದ್ಯಕ್ಕೆ ಗೊತ್ತಾಗಿದೆ. ಕೃತ್ಯದಲ್ಲಿ ಬೇರೆ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.