ADVERTISEMENT

ಹಾವೇರಿ | ವಸತಿಯುತ ಕಾಲೇಜು ಅವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:03 IST
Last Updated 3 ಸೆಪ್ಟೆಂಬರ್ 2025, 4:03 IST
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಸತಿಯುತ ಪದವಿ ಕಾಲೇಜಿಗೆ ಮೂಲ ಸೌಕರ್ಯ ಒದಗಿಸಬೇಕು’ ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಸತಿಯುತ ಪದವಿ ಕಾಲೇಜಿಗೆ ಮೂಲ ಸೌಕರ್ಯ ಒದಗಿಸಬೇಕು’ ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು    

ಹಾವೇರಿ: ‘ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ ವಸತಿಯುತ ಪದವಿ ಕಾಲೇಜುಗಳು ಅವ್ಯವಸ್ಥೆಯಿಂದ ಕೂಡಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ’ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಕಳ್ಳಿಹಾಳ ಗ್ರಾಮದ ಬಳಿ ಇರುವ ‘ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜು’ ಎದುರು ಸೋಮವಾರ ಸೇರಿದ್ದ ವಿದ್ಯಾರ್ಥಿಗಳು, ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

‘ರಾಜ್ಯದ 10 ಜಿಲ್ಲೆಗಳಲ್ಲಿ ಎಸ್‌.ಸಿ., ಎಸ್‌.ಟಿ., ವಸತಿಯುತ ಪದವಿ ಕಾಲೇಜುಗಳಿವೆ. ವಸತಿ, ಸಾರಿಗೆ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತವಾಗಿವೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು ಬಿದ್ದಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ, 2017–18ರಲ್ಲಿ ಈ ವಸತಿಯುತ ಕಾಲೇಜು ಆರಂಭಿಸಿದೆ. ಹಾವೇರಿ, ಕೊಪ್ಪಳ, ಕೋಲಾರ, ಚಿತ್ರದುರ್ಗ, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಚಾಮರಾಜನಗರ, ರಾಯಚೂರುಗಳಲ್ಲಿ ಈ ಕಾಲೇಜುಗಳಿವೆ. ಆರಂಭದ ದಿನಗಳಲ್ಲಿ ಪ್ರತಿ ಕಾಲೇಜಿಗೆ ₹ 25 ಕೋಟಿಯಂತೆ ₹ 250 ಕೋಟಿ ಅನುದಾನ ವಿನಿಯೋಗಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ’ ಎಂದರು.

‘ಹಾವೇರಿಯಲ್ಲಿ ಸುಸಜ್ಜಿತ ಕ್ಯಾಂಪಸ್‌ ನಿರ್ಮಿಸಿ, ತರಗತಿ ಆರಂಭಿಸಲಾಗಿದೆ. ಆದರೆ, ಏಳು ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆಯಾಗಿಲ್ಲ. ಭೂ ವೀರಾಪುರದಲ್ಲಿ ನಿರ್ಮಾಣವಾಗಿರುವ ಕಾಲೇಜು ಕ್ಯಾಂಪಸ್‌ನಲ್ಲಿ ಹಾಸ್ಟೆಲ್‌ ಕಟ್ಟಡಗಳು ಸಿದ್ಧವಾಗಿವೆ. ಆದರೆ, ನಿಯಮಗಳನ್ನು ರೂಪಿಸದಿದ್ದರಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸಿಕ್ಕಿಲ್ಲ’ ಎಂದು ದೂರಿದರು.

ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಸ್., ಮುಖಂಡ ಅರುಣ್ ನಾಗವತ್, ಐಶ್ವರ್ಯ ಬಾಳಿಗೇರಿ ಇದ್ದರು.

ವಿದ್ಯಾರ್ಥಿ ಕ್ಯಾಂಟೀನ್‌ ಆರಂಭಕ್ಕೆ ಒತ್ತಾಯ

‘2017–18ನೇ ಸಾಲಿನಲ್ಲಿ ಮಂಜೂರಾದ ಎಸ್‌.ಸಿ. ಎಸ್‌.ಟಿ. ವಸತಿಯುತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೀಘ್ರವಾಗಿ ವಸತಿ ಸೌಲಭ್ಯ ಪ್ರಾರಂಭಿಸಬೇಕು. ಅಗತ್ಯವಾದ ಮೂಲ ಸೌಕರ್ಯ ಒದಗಿಸಬೇಕು. ಪ್ರಾಂಶುಪಾಲರು ಉಪನ್ಯಾಸಕರು ಸಿಬ್ಬಂದಿಗಳನ್ನು ಕಾಯಂ ಆಗಿ ನೇಮಿಸಿಕೊಳ್ಳಬೇಕು. ರಾತ್ರಿ ಕಾವಲುಗಾರರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇ 60 ಹಿಂದುಳಿದ ವರ್ಗಗಳ ಶೇ 40 ಪ್ರವೇಶಾತಿ ಆದೇಶವನ್ನು ಸಡಿಲಗೊಳಿಸಿ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಬೇಕು. ಪ್ರತ್ಯೇಕವಾದ ಸುಸಜ್ಜಿತ ಪ್ರಯೋಗಾಲಯ ಗ್ರಂಥಾಲಯ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿ ಅದರ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಬೇಕು. ಕ್ಯಾಂಪಸ್‌ಗಳಲ್ಲಿ ಜೆರಾಕ್ಸ್ ಕೇಂದ್ರ ವಿದ್ಯಾರ್ಥಿ ಕ್ಯಾಂಟೀನ್ ಪ್ರಾರಂಭಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಸುರಕ್ಷತೆಗಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಆಟದ ಮೈದಾನ ಅಭಿವೃದ್ಧಿಪಡಿಸಬೇಕು. ತಡೆಗೋಡೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.