ADVERTISEMENT

ಹಾವೇರಿ: ಕ್ವಾರಂಟೈನ್‌ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಿ

ಕಾರ್ಯ ನಿರ್ವಹಣೆಯಲ್ಲಿ ಲೋಪವಾಗಬಾರದು: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

​ಪ್ರಜಾವಾಣಿ ವಾರ್ತೆ
Published 13 ಮೇ 2020, 15:03 IST
Last Updated 13 ಮೇ 2020, 15:03 IST
ಹಾವೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಹಶೀಲ್ದಾರ್‌ ಹಾಗೂ ಕ್ವಾರಂಟೈನ್ ಕೇಂದ್ರಗಳ ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು
ಹಾವೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಹಶೀಲ್ದಾರ್‌ ಹಾಗೂ ಕ್ವಾರಂಟೈನ್ ಕೇಂದ್ರಗಳ ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು   

ಹಾವೇರಿ: ಜಿಲ್ಲೆಯಲ್ಲಿ ತೆರೆಯಲಾದ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಗರಿಷ್ಠ ಎಚ್ಚರಿಕೆ ವಹಿಸಬೇಕು. ಪ್ರಾಮಾಣಿತ ಕಾರ್ಯಾಚರಣೆ ವಿಧಾನದಂತೆ (ಎಸ್.ಒ.ಪಿ.) ಸ್ವಚ್ಛತೆ ಇನ್ನಿತರ ಮುನ್ನೆಚ್ಚರಿಕೆ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಈ ಕೇಂದ್ರಗಳಿಂದ ಕೋವಿಡ್ ಸೋಂಕು ಹರಡದಂತೆ ಕಾಳಜಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ತಾಲ್ಲೂಕು ತಹಶೀಲ್ದಾರ್‌ ಹಾಗೂ ಕ್ವಾರಂಟೈನ್ ಕೇಂದ್ರಗಳ ನೋಡಲ್ ಅಧಿಕಾರಿಗಳೊಂದಿಗೆ ಬುಧವಾರ ವಿಡಿಯೊ ಸಂವಾದ ಮೂಲಕ ಚೆಕ್‍ಪೋಸ್ಟ್ ಹಾಗೂ ಕ್ವಾರಂಟೈನ್ ಕೇಂದ್ರಗಳ ಕಾರ್ಯವಿಧಾನದ ಮಾಹಿತಿ ಪಡೆದುಕೊಂಡರು.

ಪ್ರಯಾಣಿಕರನ್ನು ಸ್ಕ್ರೀನಿಂಗ್‌ ಮಾಡಿ:ಜಿಲ್ಲೆಯ ಗಡಿಭಾಗದ ಚೆಕ್‍ಪೋಸ್ಟ್‌ಗಳಲ್ಲಿ ಒಳಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್‌ ಮಾಡಬೇಕು. ತಪಾಸಣೆಯಲ್ಲಿ ಕೊಂಚ ಸಡಿಲವಾದರೂ ಕೋವಿಡ್ ಸೋಂಕು ಹರಡುವಿಕೆಯ ಅಪಾಯ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಡಲ್ ಅಧಿಕಾರಿಗಳು, ಸಿಬ್ಬಂದಿ ಪರಿಸ್ಥಿತಿ ಅರ್ಥೈಸಿಕೊಂಡು ಗಂಭೀರವಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿದರು.

ADVERTISEMENT

ವಿದೇಶದಲ್ಲಿ ನೆಲೆಸಿರುವ ರಾಜ್ಯದವರು ಮರಳಿ ರಾಜ್ಯಕ್ಕೆ ಕರೆತರುವ ಪ್ರಕ್ರಿಯೆ ನಡೆದಿದೆ. ಈ ಪೈಕಿ ಜಿಲ್ಲೆಗೆ ಬರುವವರನ್ನು ಹಾಗೆಯೇ ದೇಶದ ನಾನಾ ಭಾಗದಿಂದ ಜಿಲ್ಲೆಗೆ ಹಿಂತಿರುಗುತ್ತಿದ್ದಾರೆ. ಈ ಎಲ್ಲರನ್ನು ಎಸ್.ಒ.ಪಿ. ಮಾರ್ಗಸೂಚಿ ಅನುಸಾರ ಕ್ವಾರಂಟೈನ್‍ಗಳಲ್ಲಿ ಇರಿಸಬೇಕಾಗಿದೆ. ಈ ಸಂದರ್ಭ ಅತ್ಯಂತ ಸೂಕ್ಷ್ಮವಾಗಿದ್ದು, ಮುಂದಿನ 15 ದಿಗಳವರೆಗೆ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಸ್ವಚ್ಛತೆಗೆ ಆದ್ಯತೆ ನೀಡಿ:ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬರಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು, ಶುದ್ಧ ಕುಡಿಯುವ ನೀರು ಹಾಗೂ ಆಹಾರ ಪೂರೈಕೆ ಸೇರಿದಂತೆ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅನುದಾನದ ಅಗತ್ಯತೆ, ಆಹಾರ ಸಾಮಗ್ರಿ, ಹೆಚ್ಚುವರಿ ಸಿಬ್ಬಂದಿ, ಸ್ವಚ್ಛತಾ ಕಾರ್ಯದ ಸಿಬ್ಬಂದಿ ಒಳಗೊಂಡಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ವೈಯಕ್ತಿಕ ಗಮನಕ್ಕೆ ತರುವಂತೆ ತಿಳಿಸಿದರು.

ಕ್ವಾರಂಟೈನ್‌ ಕಡ್ಡಾಯ:ಹೊರ ದೇಶ ಹಾಗೂ ಹೊರರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಉಳಿಯಲು ಇಚ್ಛಿಸದೇ ಹೆಚ್ಚಿನ ಸೌಲಭ್ಯ ಬಯಸಿದರೆ ಅವರ ಇಚ್ಛಾನುಸಾರ ಪ್ರತ್ಯೇಕ ಹೋಟೆಲ್‍ನಲ್ಲಿ ಸ್ವಂತ ವೆಚ್ಚ ಭರಿಸಿ ಕ್ವಾರಂಟೈನ್ ಆಗಲು ಅವಕಾಶವಿದೆ. ಆರೋಗ್ಯ ತಪಾಸಣೆ ನಂತರ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಬಹುದು. ಈ ಉದ್ದೇಶಕ್ಕಾಗಿ ತಹಶೀಲ್ದಾರ್‌ಗಳು ಉತ್ತಮವಾದ ಮೂರ್ನಾಲ್ಕು ಹೋಟೆಲ್ ಗುರುತಿಸಿಕೊಂಡು 14 ದಿನಗಳ ಕ್ವಾರಂಟೈನ್ ಅವಧಿಯ ಕೊಠಡಿ ಬಾಡಿಗೆ, ಊಟ, ವಸತಿ ಸೇರಿ ಪ್ಯಾಕೇಜ್ ದರ ಅಥವಾ ಪ್ರತಿ ದಿನದ ದರ ನಿಗದಿಪಡಿಸಿ ಅಧಿಸೂಚನೆ ಹೊರಡಿಸಬೇಕು ಎಂದರು.

ಈ ಮಾಹಿತಿ ಪ್ರಯಾಣಿಕರಿಗೆ ನೀಡಬೇಕು ಕ್ವಾರಂಟೈನ್‍ಗೆ ಒಳಗಾದವರ ಆಯ್ಕೆ ಅನುಸಾರ ಹೋಟೆಲ್‍ಗೆ ಸ್ಥಳಾಂತರಿಸಬೇಕು. ಇವರ ಮೇಲೆ ನಿವಾಗವಹಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.