ಹಿರೇಕೆರೂರ: ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ನಿಲ್ಲಿಸುವಂತೆ ಆಗ್ರಹಿಸಿ ಸೋಮುವಾರ ತಾಲ್ಲೂಕು ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿ ತಾಲ್ಲೂಕಿನ ತಹಶೀಲ್ದಾರ್ ಎಂ.ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ‘ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೆ.25ರಂದು ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ ಮಾಡಿದ ಸಂಘಟನೆ 41 ಜನ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದರು.
‘ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಗಳಲ್ಲಿ ಮಾರ್ಗಸೂಚಿ ಫಲಕದಲ್ಲಿ ಹಿಂದಿ ಬಳಸಿರುವುದನ್ನು ಕರವೇ ತೀವ್ರವಾಗಿ ಖಂಡಿಸುತ್ತದೆ. ಇಲಾಖೆ ಅಧಿಕಾರಿಗಳು ತಕ್ಷಣ ಮಾರ್ಗಸೂಚಿ ನಾಮಫಲಕಗಳಲ್ಲಿ ಕನ್ನಡ ಅಳವಡಿಸಬೇಕು. ಹೊರ ರಾಜ್ಯದವರಿಗಾಗಿ ಇಂಗ್ಲಿಷ್ ಭಾಷೆಯ ಸಣ್ಣ ಅಕ್ಷರ ಹಾಕಬಹುದು. ರಾಜ್ಯದಲ್ಲಿ ಹಿಂದಿ ಭಾಷೆ ರಾರಾಜಿಸುವುದನ್ನು ಕರವೇ ಸಹಿಸುವುದಿಲ್ಲ. ನಗರದಲ್ಲಿ ಯಾವುದೇ ಬ್ಯಾಂಕ್, ಶಾಲಾ-ಕಾಲೇಜುಗಳು, ಅಂಚೆ ಕಚೇರಿಗಳಲ್ಲಿ ಹಿಂದಿ ಸಪ್ತಾಹ ಅಥವಾ ಹಿಂದಿ ದಿವಸ್ ಹೆಸರಲ್ಲಿ ಯಾವುದೇ ಕಾರ್ಯಕ್ರಮ ನಡೆಸಿದರೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಲಮಾಣಿ, ಜೈ ಕುಮಾರ ಉಪ್ಪಾರ್, ಮಾರುತಿ ಪೂಜಾರ, ಸತ್ಯವತಿ ಕಡೆರು, ಅನ್ನಪೂರ್ಣ, ರಮೇಶ್ ಬಾತಮ್ಮನವರ, ಬಿ. ಎಚ್. ಬಣಕಾರ್, ಕಿರಣ ಲಮಾಣಿ, ಹನುಮಂತ ಲಮಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.