ADVERTISEMENT

ಹಾವೇರಿ: ಲೋಕ ಅರಿಯುವ ಮುನ್ನ ಪ್ರಾಣ ಬಿಟ್ಟ 286 ಶಿಶು

* ಜಿಲ್ಲೆಯಲ್ಲಿ 444 ಸಹಜ ಗರ್ಭಪಾತ * ಹೊರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ 188 ಶಿಶು ಮರಣ * ವೈದ್ಯರು– ಸಿಬ್ಬಂದಿಯ ಅವಸರದ ನಿರ್ಧಾರ

ಸಂತೋಷ ಜಿಗಳಿಕೊಪ್ಪ
Published 27 ಜನವರಿ 2025, 5:48 IST
Last Updated 27 ಜನವರಿ 2025, 5:48 IST
   

ಹಾವೇರಿ: ಜಿಲ್ಲೆಯಲ್ಲಿ ಮಗುವಿನ ಆರೈಕೆಗೆ ಅಗತ್ಯವಿರುವ ಆರೋಗ್ಯ ಸೌಲಭ್ಯಗಳ ಕೊರತೆ ಹೆಚ್ಚಿದ್ದು, ಪರಿಣಾಮವಾಗಿ 2024ರ ಜನವರಿಯಿಂದ ನವೆಂಬರ್‌ವರೆಗಿನ ಅವಧಿಯಲ್ಲಿ 286 ಶಿಶುಗಳು ಮೃತಪಟ್ಟಿವೆ.

ಜಿಲ್ಲಾಸ್ಪತ್ರೆ ಹೊರತುಪಡಿಸಿದರೆ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಶಿಶುಗಳ ಆರೈಕೆಗೆ ವ್ಯವಸ್ಥಿತ ತುರ್ತು ಚಿಕಿತ್ಸಾ ಘಟಕವಿಲ್ಲ. ಇದ್ದರೂ ಬೆಡ್‌ಗಳ ಸಂಖ್ಯೆ ತೀರಾ ಕಡಿಮೆ. ಜನನದ ಸಂಖ್ಯೆಗೆ ತಕ್ಕಂತೆ ಬೆಡ್‌ಗಳು ಇಲ್ಲದಿದ್ದರಿಂದ, ಹಲವು ಆರೋಗ್ಯ ಸಮಸ್ಯೆಯಿಂದಾಗಿ ಶಿಶುಗಳು ಲೋಕ ನೋಡುವ ಮುನ್ನವೇ ಕಣ್ಣು ಮುಚ್ಚುತ್ತಿವೆ.

ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳ ಸಿಬ್ಬಂದಿಯಲ್ಲಿಯೇ ಆರೋಗ್ಯ ಜಾಗೃತಿ ಕೊರತೆಯಿದೆ. ಗರ್ಭಿಣಿಯರನ್ನು ಸೂಕ್ತ ಸಮಯಕ್ಕೆ ಯಾವ ಆಸ್ಪತ್ರೆಗೆ ಕಳುಹಿಸಬೇಕು, ಮಗುವಿನ ಆರೋಗ್ಯವನ್ನು ಕಾಪಾಡಲು ಯಾವ ಆಸ್ಪತ್ರೆ ಸೂಕ್ತ, ಗರ್ಭಿಣಿಯರಿಗೆ ತುರ್ತು ಚಿಕಿತ್ಸೆ ಅಗತ್ಯವಿದೆಯೋ ಇಲ್ಲವೋ ಎಂಬ ಬಗ್ಗೆ ಸಿಬ್ಬಂದಿಯಲ್ಲಿ ಗೊಂದಲವಿದೆ. ಇದೇ ಕಾರಣಕ್ಕೆ, ಶಿಶುಗಳ ಮರಣ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.

ADVERTISEMENT

ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಈ ಪ್ರಕಾರ, 2024ರ ಜನವರಿಯಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಜಿಲ್ಲೆಯ ನಿವಾಸಿಯಾಗಿದ್ದ ಮಹಿಳೆಯರ 286 ಶಿಶುಗಳು ಮರಣ ಹೊಂದಿವೆ. ಜಿಲ್ಲಾ ವ್ಯಾಪ್ತಿಯ ಆಸ್ಪತ್ರೆಯಲ್ಲಿ 98 ಶಿಶುಗಳು ಹಾಗೂ ಹೊರ ಜಿಲ್ಲೆಗಳ ಆಸ್ಪತ್ರೆಯಲ್ಲಿ 188 ಶಿಶುಗಳು ಮೃತಪಟ್ಟಿರುವುದು ದಾಖಲೆಯಿಂದ ಗೊತ್ತಾಗಿದೆ.

‘ಜನನವಾದ ಒಂದು ವರ್ಷದೊಳಗಿನ ಮಕ್ಕಳನ್ನು ಶಿಶುಗಳೆಂದು ಪರಿಗಣಿಸಲಾಗುತ್ತದೆ. ಶಿಶುಗಳ ಮರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆರೋಗ್ಯ ಸಮಸ್ಯೆ ಹಾಗೂ ನಾನಾ ಕಾರಣಗಳಿಂದ ಜಿಲ್ಲೆಯ 286 ಶಿಶುಗಳು ಮರಣ ಹೊಂದಿವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯರಿಂದ ವರದಿ ಪಡೆಯಲಾಗಿದೆ. ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಕ್ಕ–ಪಕ್ಕದ ಜಿಲ್ಲೆಗೆ ಹೋಲಿಸಿದರೆ, ಹಾವೇರಿ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇರುವುದು ಸಮಾಧಾನಕರ’ ಎಂದು ಹೇಳಿದರು.

ವೈದ್ಯರು– ಸಿಬ್ಬಂದಿಯ ಅವಸರದ ನಿರ್ಧಾರ: ಮಹಿಳೆ ಗರ್ಭಿಣಿ ಎಂಬುದು ಖಾತ್ರಿಯಾಗುತ್ತಿದ್ದಂತೆ, ಅವರ ಆರೈಕೆ ಶುರುವಾಗುತ್ತದೆ. ಸ್ಥಳೀಯ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಇತರರು, ಗರ್ಭಿಣಿಯವರ ನೋಂದಣಿ ಪ್ರಕ್ರಿಯೆ ಆರಂಭಿಸುತ್ತಾರೆ.

ಮೊದಲ ಸ್ಕ್ಯಾನಿಂಗ್‌ ಸಂದರ್ಭದಲ್ಲಿಯೇ ಸರ್ಕಾರದ ದಾಖಲೆಯಲ್ಲಿ ಗರ್ಭಿಣಿ ಎಂಬುದು ದಾಖಲಾಗುತ್ತದೆ. ಬಳಿಕ, ಗರ್ಭಿಣಿಗೆ ಅಗತ್ಯವಿರುವ ಸಲಹೆಗಳನ್ನು ಸರ್ಕಾರದ ಪ್ರತಿನಿಧಿಗಳು ನೀಡುತ್ತಿರುತ್ತಾರೆ. ಆದರೆ, ಹೆರಿಗೆ ಸಮೀಪದಲ್ಲಿರುವ ದಿನಗಳಲ್ಲಿ ಸರ್ಕಾರದ ಕೆಲ ಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ಸಲಹೆ ನೀಡಿ, ತಾಯಿ ಹಾಗೂ ಶಿಶುವಿನ ಪ್ರಾಣಕ್ಕೆ ಸಂಚಕಾರ ತರುತ್ತಿರುವ ಆರೋಪವಿದೆ.

‘ಹೆರಿಗೆ ನೋವು ಆರಂಭದ ಅಂದಾಜು ದಿನ ಮೊದಲೇ ಗೊತ್ತಿರುತ್ತದೆ. ಈ ದಿನದಂದು ಗರ್ಭಿಣಿಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಕೆಲ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ, ಶಿಶುಗಳ ಆರೈಕೆಗೆ ಸೌಲಭ್ಯ ಇಲ್ಲದಿದ್ದರೂ ಸ್ಥಳೀಯವಾಗಿ ಹೆರಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಜನನದ ನಂತರ ಶಿಶುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದಂತೆ ಜಿಲ್ಲಾಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ’ ಎಂದು ರಾಣೆಬೆನ್ನೂರು ತಾಲ್ಲೂಕಿನ ಮಹಿಳೆಯೊಬ್ಬರ ಸಂಬಂಧಿ ಹೇಳಿದರು.

‘ಶಿಶುವಿನ ಜೀವ ಉಳಿಸಲು ಪೋಷಕರು, ಜಿಲ್ಲಾಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗಳಿಗೆ ಸೇರಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಶಿಶುಗಳ ಆರೈಕೆಗೆ ಬೆಡ್ ಸಹ ಸಿಗುತ್ತಿಲ್ಲ. ವೆಂಟಿಲೇಟರ್ ಇರುವ ತೀವ್ರ ನಿಗಾ ಘಟಕದ (ಐಸಿಯು) ಕೊರತೆ ಇದೆ. ಇಂಥ ಹಲವು ಸಂದಿಗ್ಧ ಪರಿಸ್ಥಿತಿಯಿಂದಾಗಿ ಆರೋಗ್ಯ ಮತ್ತಷ್ಟು ಹದಗೆಟ್ಟು ಶಿಶುಗಳು ಮೃತಪಡುತ್ತಿವೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಶಿಶುಗಳ ಜನನ ಪ್ರಮಾಣ ಹೆಚ್ಚಿದೆ. ಆದರೆ, ಶಿಶುಗಳ ಆರೈಕೆಗೆ ಅಗತ್ಯದಷ್ಟು ಐಸಿಯು ಇಲ್ಲ. ಜೊತೆಗೆ, ಶಿಶುಗಳ ತಜ್ಞರ ಕೊರತೆಯೂ ಇದೆ. ಈ ಎಲ್ಲ ಕೊರತೆಗಳನ್ನು ನೀಗಿಸಲು ಸರ್ಕಾರ ಮುಂದಾಗಬೇಕು. ಲೋಕವನ್ನೇ ನೋಡದೇ ಕಣ್ಣು ಮುಚ್ಚುತ್ತಿರುವ ಶಿಶುಗಳ ಜೀವ ಉಳಿಸಬೇಕು’ ಎಂದು ಕೋರಿದ ಅವರು, ಸಂಬಂಧಿ ಮಹಿಳೆಯ ಶಿಶು ಮರಣದ ಘಟನೆಯನ್ನು ನೆನೆದು ಕಣ್ಣೀರಿಟ್ಟರು.

ಹಾನಗಲ್, ಬ್ಯಾಡಗಿ, ಶಿಗ್ಗಾವಿ, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ಸವಣೂರು ತಾಲ್ಲೂಕು ಆಸ್ಪತ್ರೆಗಳಲ್ಲಿ ಶಿಶುಗಳ ಆರೈಕೆಗೆ ಸೂಕ್ತ ಐಸಿಯು ಇಲ್ಲ. ತಜ್ಞ ವೈದ್ಯರ ಕೊರತೆಯೂ ಹೆಚ್ಚಿದೆ. ಕೊನೆ ಘಳಿಗೆಯಲ್ಲಿ ಮಹಿಳೆಯರನ್ನು ಜಿಲ್ಲಾಸ್ಪತ್ರೆ ಹಾಗೂ ಅಕ್ಕ–ಪಕ್ಕದ ಜಿಲ್ಲೆಗಳ ಆಸ್ಪತ್ರೆಗೆ ಕಳುಹಿಸುವ ಪದ್ಧತಿಯಿದೆ.

444 ಸಹಜ ಗರ್ಭಪಾತ: ಗರ್ಭ ಧರಿಸಿದ ನಂತರ ವಿವಿಧ ಕಾರಣಗಳಿಂದಾಗಿ ಜಿಲ್ಲೆಯ 444 ಮಹಿಳೆಯರಿಗೆ ಸಹಜ ಗರ್ಭಪಾತವಾಗಿದೆ. ಈ ಪೈಕಿ ಮೊದಲ ಬಾರಿ ಗರ್ಭ ಧರಿಸಿದ್ದವರ ಸಂಖ್ಯೆ ಹೆಚ್ಚಿದೆ.

‘ಗರ್ಭ ಧರಿಸಿದ್ದ ನಂತರ, ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಶೇ 10ರಷ್ಟು ಮಹಿಳೆಯರಿಗೆ ಅಪಾಯಗಳು ಹೆಚ್ಚು. ಕೆಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸಹಜ ಗರ್ಭಪಾತವಾಗುತ್ತಿದೆ’ ಎಂದು ವೈದ್ಯರೊಬ್ಬರು ಹೇಳಿದರು.

60 ಬೆಡ್‌ಗಳ ಐಸಿಯು ಅಗತ್ಯ
ಹಾವೇರಿ ಜಿಲ್ಲಾಸ್ಪತ್ರೆಯ ಶಿಶುಗಳ ಆರೈಕೆ ವಿಭಾಗದಲ್ಲಿ 10 ಬೆಡ್‌ಗಳು ಮಾತ್ರ ಇವೆ. ಉಳಿದಂತೆ, ಎಲ್ಲಿಯೂ ಆರೈಕೆ ವಿಭಾಗಗಳಿಲ್ಲ. ಕೆಲ ಖಾಸಗಿ ಆಸ್ಪತ್ರೆಯಲ್ಲಿ ಘಟಕಗಳಿದ್ದು, ಅವುಗಳು ಪರಿಣಾಮಕಾರಿಯಾಗಿಲ್ಲವೆಂದು ಜನರು ದೂರುತ್ತಿದ್ದಾರೆ. ‘ಮಗು ಜನಿಸುತ್ತಿದ್ದಂತೆ, ಅದಕ್ಕಿರುವ ಆರೋಗ್ಯ ಸಮಸ್ಯೆಯನ್ನು ತ್ವರಿತವಾಗಿ ಪತ್ತೆ ಮಾಡಬೇಕು. ಅದಕ್ಕೆ ತಕ್ಕಂತೆ ತ್ವರಿತ ಚಿಕಿತ್ಸೆ ನೀಡಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಐಸಿಯು ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ರಾಜೇಶ್ ಸುರಗಿಹಳ್ಳಿ, ‘ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿಶುಗಳ ಆರೈಕೆಗೆಂದು 60 ಬೆಡ್‌ಗಳ ಪ್ರತ್ಯೇಕ ಐಸಿಯು ಅಗತ್ಯವಿದೆ’ ಎಂದು ಹೇಳಿದರು. ‘ಕೆಲ ಆಸ್ಪತ್ರೆಯವರು, ಹೆರಿಗೆ ಬಳಿಕ ಶಿಶುಗಳನ್ನು ಏಕಾಏಕಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ. ಕಡಿಮೆ ಆರೋಗ್ಯ ಸಮಸ್ಯೆ ಇರುವ ಶಿಶುಗಳು ಬದುಕುತ್ತಿವೆ. ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಶಿಶುಗಳ ಪ್ರಾಣಕ್ಕೆ ಅಪಾಯ ಉಂಟಾಗುತ್ತಿದೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದರು.
ತಂದೆ– ತಾಯಿ ಕನಸು ಛಿದ್ರ
‘ತಂದೆ–ತಾಯಿ ತಮ್ಮ ಮಗುವಿನ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ. ಶಿಶು ಮರಣ ಹೊಂದಿದರೆ, ಅವರ ಕನಸು ಛಿದ್ರವಾಗುತ್ತಿದೆ. ಇಡೀ ಕುಟುಂಬ ದುಃಖದಿಂದ ಜೀವನಪೂರ್ತಿ ಕೊರಗುತ್ತದೆ’ ಎಂದು ಹಿರೇಕೆರೂರು ತಾಲ್ಲೂಕಿನ ಮಹಿಳೆಯೊಬ್ಬರು ಹೇಳಿದರು. ‘ಎರಡು ವರ್ಷದ ಹಿಂದೆ ನಮ್ಮ ಸಂಬಂಧಿ ಶಿಶು ಮೃತಪಟ್ಟಿದೆ. ಇಂಥ ಸಾವು ಯಾರಿಗೂ ಬರಬಾರದು. ಇಂದಿನ ಶಿಶುಗಳು, ಮುಂದೆ ಅಧಿಕಾರಿ ಆಗಬಹುದು ಅಥವಾ ಬೇರೆ ಕ್ಷೇತ್ರದಲ್ಲಿ ಮಿಂಚಬಹುದು. ಪ್ರತಿಯೊಂದು ಶಿಶು, ದೇಶದ ಆಸ್ತಿ ಇದ್ದಂತೆ. ಇಂಥ ಶಿಶುಗಳನ್ನು ಸರ್ಕಾರ ಉಳಿಸಬೇಕು. ಜಿಲ್ಲೆಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಶಿಶುಗಳ ಆರೈಕೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಸದ್ಯ 10 ಬೆಡ್‌ಗಳ ಐಸಿಯು ಇದ್ದು, ಬೆಡ್ ಸಂಖ್ಯೆಯನ್ನು 15ಕ್ಕೆ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಡಾ. ಪಿ.ಆರ್. ಹಾವನೂರು, ಜಿಲ್ಲಾ ಶಸ್ತ್ರ ಚಿಕಿತ್ಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.