ಹಾವೇರಿ: ಹೊಸ ರಸ್ತೆ ಮಾಡಿದ ಕೆಲವೇ ವರ್ಷಗಳಲ್ಲಿ ಕಿತ್ತುಹೋದ ಡಾಂಬರ್. ಜಲ್ಲಿ– ಮಣ್ಣು ಚೆಲ್ಲಾಪಿಲ್ಲಿಯಾಗಿ ಸೃಷ್ಟಿಯಾದ ಗುಂಡಿಗಳು. ಮಳೆ ಸುರಿಯುತ್ತಿದ್ದಂತೆ ನೀರು ನಿಂತು ಹೊಂಡವಾಗುವ ಮಾರ್ಗಗಳು. ಗುಂಡಿಗಳಲ್ಲಿ ಸಂಚರಿಸಲು ಭಯಪಡುವ ಜನ.
ಜಿಲ್ಲೆಯ ಹಲವು ಕಡೆಗಳಲ್ಲಿರುವ ರಸ್ತೆಗಳ ದುಃಸ್ಥಿತಿಯಿದು. ಹೊಸ ರಸ್ತೆಗಳು ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಹಾಳಾಗುತ್ತಿವೆ. ಇದರಿಂದಾಗಿ ಗುಂಡಿಗಳು ಬೀಳುತ್ತಿದ್ದು, ಜನರ ಸಂಚಾರ ಪ್ರಯಾಸವಾಗುತ್ತಿದೆ. ಕಾಲ ಕಾಲಕ್ಕೆ ರಸ್ತೆ ದುರಸ್ತಿ ಮಾಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಗುಂಡಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲಾ ಕೇಂದ್ರ ಹಾವೇರಿ ಹಾಗೂ ಹಾವೇರಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿವೆ. ಮಳೆಗಾಲ ಶುರುವಾಗುತ್ತಿದ್ದಂತೆ ಬಹುತೇಕ ರಸ್ತೆಗಳು ಗುಂಡಿಗಳು ಬಿದ್ದಿದ್ದು, ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಹಾಳಾಗಿ ಗುಂಡಿ ಬಿದ್ದಿರುವ ರಸ್ತೆಗಳ ಫೋಟೊ ಕ್ಲಿಕ್ಕಿಸುತ್ತಿರುವ ಹಲವರು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಅಷ್ಟಾದರೂ ರಸ್ತೆಯ ದುಃಸ್ಥಿತಿಗೆ ಪರಿಹಾರ ಸಿಗುತ್ತಿಲ್ಲ.
ನಗರ ವ್ಯಾಪ್ತಿಯ ಹಲವು ಪ್ರದೇಶಗಳ ರಸ್ತೆಗಳೇ ಭಾಗಶಃ ಹಾಳಾಗಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಓಡಾಡುವ ರಸ್ತೆಗಳಲ್ಲಿಯೂ ಗುಂಡಿಗಳು ಸಾಮಾನ್ಯವಾಗಿವೆ. ಇದೇ ರಸ್ತೆಯಲ್ಲಿ ಹಾದು ಹೋಗುವ ಜನಪ್ರತಿನಿಧಿಗಳು–ಅಧಿಕಾರಿಗಳು, ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹಾವೇರಿ ಸ್ವಾಗತಿಸಲು ಗುಂಡಿ: ಹುಬ್ಬಳ್ಳಿಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾವೇರಿ ನಗರವನ್ನು ಪ್ರವೇಶಿಸುವ ರಸ್ತೆಯೇ ಗುಂಡಿಮಯವಾಗಿದೆ. ‘ಯಾಲಕ್ಕಿ ಕಂಪಿನ ಹಾವೇರಿ ನಗರಕ್ಕೆ ಸ್ವಾಗತ’ ಎಂಬ ಬರಹವುಳ್ಳ ದ್ವಾರಬಾಗಿಲು ಎದುರೇ ದೊಡ್ಡ ಗುಂಡಿಗಳು ಬಿದ್ದಿದ್ದು, ಮಳೆ ಬಂದಾಗ ನೀರು ನಿಲ್ಲುತ್ತಿದೆ.
‘ಹೊರಗಿನಿಂದ ಹಾವೇರಿ ಜಿಲ್ಲೆಗೆ ಬರುವವರು, ಪ್ರವೇಶ ದ್ವಾರವನ್ನು ಮೊದಲಿಗೆ ನೋಡುತ್ತಾರೆ. ಆದರೆ, ಹಾವೇರಿ ಪ್ರವೇಶ ದ್ವಾರದಲ್ಲಿ ಗುಂಡಿ ಬಿದ್ದು ನೀರು ನಿಂತುಕೊಂಡಿದೆ. ಇದೊಂದು ಗುಂಡಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ ತಿಪ್ಪಣ್ಣನವರ ಆಕ್ರೋಶ ಹೊರಹಾಕಿದರು.
‘ಜಿಲ್ಲೆಯ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಬರುತ್ತಿರುವುದಾಗಿ ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಆದರೆ, ಇಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲ. ದ್ವಾರಬಾಗಿಲು ಬಳಿಯ ಗುಂಡಿ ಮುಚ್ಚಲು ಸಹ ಆಗುತ್ತಿಲ್ಲ’ ಎಂದು ದೂರಿದರು.
ಹಾವೇರಿ ರೈಲು ನಿಲ್ದಾಣ, ತಹಶೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿಯೂ ಗುಂಡಿಗಳು ಬಿದ್ದಿವೆ. ಅಲ್ಲಿಯೂ ಜನರ ಓಡಾಟ ದುಸ್ತರವಾಗಿದೆ.
ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜನರ ಬಗ್ಗೆ ಕಾಳಜಿ ಇದ್ದರೆ ರಸ್ತೆಗಳ ದುರಸ್ತಿ ಮಾಡಿಸಬೇಕು. ಅವೈಜ್ಞಾನಿಕ ಕಾಮಗಾರಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು– ರುದ್ರಪ್ಪ ಬಾಣದ, ಹಾವೇರಿ
‘ಅಪಘಾತಗಳ ಭಯ’
ರಸ್ತೆಗಳು ಹಾಳಾಗಿರುವುದರಿಂದ ಸಂಚಾರಕ್ಕೆ ಜನರು ಭಯಪಡುತ್ತಿದ್ದಾರೆ. ಗುಂಡಿಗಳಿಂದಾಗಿ ವಾಹನಗಳು ಆಯತಪ್ಪಿ ಬೀಳುತ್ತಿದ್ದು ಅಪಘಾತ ಭಯವೂ ಕಾಡುತ್ತಿದೆ. ‘ಹಾವೇರಿಯ ರೈಲು ನಿಲ್ದಾಣ ಎದುರಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಈಚೆಗೆ ಇಬ್ಬರು ಸವಾರರು ಬೈಕ್ ಸಮೇತ ಬಿದ್ದಿದ್ದರು. ಸ್ಥಳೀಯರೇ ಅವರನ್ನು ಮೇಲಕ್ಕೆತ್ತಿದ್ದರು. ಅವರಿಬ್ಬರಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದು ಸ್ಥಳೀಯ ನಿವಾಸಿ ರಂಗಪ್ಪ ಹೇಳಿದರು.
ಅವೈಜ್ಞಾನಿಕ ಕಾಮಗಾರಿ: ತನಿಖೆಗೆ ಆಗ್ರಹ
ಸ್ಥಳೀಯ ಸಂಸ್ಥೆಗಳು ಗ್ರಾಮೀಣಾಭಿವೃದ್ಧಿ ಲೋಕೋಪಯೋಗಿ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ರಸ್ತೆಗಳ ನಿರ್ಮಾಣ ಅವೈಜ್ಞಾನಿಕ ರೀತಿಯಲ್ಲಿ ಆಗುತ್ತಿರುವ ಆರೋಪ ವ್ಯಕ್ತವಾಗಿದೆ. ‘ಹೊಸ ರಸ್ತೆ ಮಾಡಿದ ಕೆಲವೇ ವರ್ಷಗಳಲ್ಲಿ ರಸ್ತೆ ಹಾಳಾಗುತ್ತಿವೆ. ನಿರ್ದಿಷ್ಟ ಪ್ರಮಾಣದಲ್ಲಿ ಕಚ್ಚಾ ವಸ್ತುಗಳನ್ನು ಬಳಸದೇ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ. ಜಿಲ್ಲೆಯಲ್ಲಿರುವ ಪ್ರತಿಯೊಂದು ರಸ್ತೆಯ ಸಮೀಕ್ಷೆ ಮಾಡಿಸಬೇಕು. ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಅಧಿಕಾರಿಗಳಿಂದ ತಪ್ಪು ಮಾಹಿತಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ತಾಲ್ಲೂಕು–ಜಿಲ್ಲಾ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ. ಇಂಥ ಸಭೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದಾಗಿ ಜನರು ದೂರುತ್ತಿದ್ದಾರೆ.
‘ಅನುದಾನ ಬಂದರೂ ರಸ್ತೆಗಳು ಅಭಿವೃದ್ಧಿಯಾಗುತ್ತಿಲ್ಲ. ಗುತ್ತಿಗೆ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತಿಲ್ಲ. ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿದು ಹಣದ ಆಸೆಗಾಗಿ ರಸ್ತೆ ಕಾಮಗಾರಿಯ ಬಿಲ್ ಮಂಜೂರು ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಗಳು ಬೇಗನೇ ಹಾಳಾಗಿ ತೊಂದರೆ ಅನುಭವಿಸುವಂತಾಗಿದೆ’ ಎಂದು ಜನರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.