ADVERTISEMENT

ಜಾನಪದ ವಿ.ವಿ ಘಟಿಕೋತ್ಸವ: ಆಹ್ವಾನ ನೀಡಿಲ್ಲವೆಂದು ಶಾಸಕ ಗರಂ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 7:07 IST
Last Updated 2 ಡಿಸೆಂಬರ್ 2024, 7:07 IST
   

ಹಾವೇರಿ: ಜಿಲ್ಲೆಯ ಶಿಗ್ಗಾವಿ ಬಳಿಯ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿಲ್ಲವೆಂದು ಆರೋಪಿಸಿದ ನೂತನ ಶಾಸಕ ಯಾಸೀರ‌ ಅಹಮದ್ ಖಾನ್ ಪಠಾಣ ಹಾಗೂ ಬೆಂಬಲಿಗರು, ಕುಲಪತಿ ಕೊಠಡಿಗೆ ನುಗ್ಗಿ ದುಂಡಾವರ್ತನೆ ತೋರಿದ ಘಟನೆ ಸೋಮವಾರ ಬೆಳಿಗ್ಗೆ‌ ನಡೆದಿದೆ.

ಶಿಗ್ಗಾವಿ ವಿಧಾನಸಭಾ‌ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಾನಪದ ವಿವಿ ಘಟಿಕೋತ್ಸವ ಸೋಮವಾರ ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯ ನಿಯಮದ ಪ್ರಕಾರ ಅರ್ಹರನ್ನು ಮಾತ್ರ ಘಟಿಕೋತ್ಸವಕ್ಕೆ ಆಹ್ವಾನಿಸಲಾಗಿದೆ.

ಆಹ್ವಾನವಿಲ್ಲದೇ ವಿಶ್ವವಿದ್ಯಾಲಯಕ್ಕೆ ಬಂದ ಪಠಾಣ, 'ನನ್ನನ್ನು ಏಕೆ ಘಟಿಕೋತ್ಸವಕ್ಕೆ ಆಹ್ವಾನಿಸಿಲ್ಲ. ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಹಾಕಿಲ್ಲ' ಎಂದು ಹರಿಹಾಯ್ದರು.

ADVERTISEMENT

ಘಟಿಕೋತ್ಸವ ಮೆರವಣಿಗೆ ವೇದಿಕೆ ತಲುಪುತ್ತಿದ್ದಂತೆ, ಕುಲಪತಿ ಕಚೇರಿಗೆ ಪಠಾಣ ಹಾಗೂ ಬೆಂಬಲಿಗರು ನುಗ್ಗಿದರು.

ಕಚೇರಿಯಲ್ಲಿದ್ದ ಸಹಾಯಕ‌ ಪ್ರಾಧ್ಯಾಪಕ ಚಂದ್ರಪ್ಪ‌ ಅವರ ಜೊತೆ ಜಗಳ ತೆಗೆದ ಪಠಾಣ ಹಾಗೂ ಬೆಂಬಲಿಗರು, ದುಂಡಾವರ್ತನೆ ತೋರಿದರು. ವಿವಿ‌ ವಿರುದ್ಧ ಘೋಷಣೆ ಕೂಗಿದರು.

'ನಾನು ಸದ್ಯದಲ್ಲೇ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಆ ಮೇಲೆ‌ ನಾನು ವಾಪಸು ಬಂದು‌ ನಿಮ್ಮನ್ನು ನೋಡಿಕೊಳ್ಳುತ್ತೇನೆ. ವಿವಿಯ ನೇಮಕಾತಿಯಲ್ಲಿ ಅಕ್ರಮ ಆಗಿದೆ. ಎಲ್ಲವೂ‌ ನನಗೆ ಗೊತ್ತಿದೆ. ಇಲ್ಲಿ ನೀವು ಹೇಗೆ ಬದುಕುತ್ತೀರಾ ನೋಡುತ್ತೇನೆ' ಎಂದು ಪಠಾಣ, ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದರು.

ಈ ಗಲಾಟೆಯಿಂದಾಗಿ ವಿವಿ ಕುಲಪತಿ ಕಚೇರಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ, ಪಠಾಣ ಅವರು ಬೆಂಬಲಿಗರ ಸಮೇತ ಸ್ಥಳದಿಂದ ಹೊರಟು ಹೋದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಠಾಣ, 'ಸಚಿವರು ಕರೆದಿದ್ದಕ್ಕೆ ವಿವಿಗೆ ಬಂದೆ. ಇಲ್ಲಿ ನನ್ನನ್ನು ಯಾರೂ ಸ್ವಾಗತಿಸಲಿಲ್ಲ. ಇದರಿಂದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲವೆಂದು ಬೇಸರಗೊಂಡು ಘೋಷಣೆ ‌ಕೂಗಿದರು' ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.