ADVERTISEMENT

ಹಾವೇರಿ | ಜಿಲ್ಲೆಯಲ್ಲಿ ತಗ್ಗಿದ ಮಳೆ: ಅವಶೇಷ ಎದುರು ಜನರ ಕಣ್ಣೀರು

* ಕಾಳಜಿ ಕೇಂದ್ರದಲ್ಲಿ ಆಶ್ರಯ * ಮರಳಿ ಮನೆಗಳತ್ತ ನಿವಾಸಿಗಳು

ಸಂತೋಷ ಜಿಗಳಿಕೊಪ್ಪ
Published 23 ಅಕ್ಟೋಬರ್ 2024, 5:06 IST
Last Updated 23 ಅಕ್ಟೋಬರ್ 2024, 5:06 IST
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು ಬಳಿ ಹಳ್ಳದ ನೀರು ನುಗ್ಗಿ ಗೋವಿನ ಜೋಳ ಬೆಳೆ ನೆಲಕಚ್ಚಿದ್ದು, ಅಳಿದುಳಿದ ಗೋವಿನ ಜೋಳವನ್ನು ರೈತರು ಸಂಗ್ರಹಿಸಿದರು
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು ಬಳಿ ಹಳ್ಳದ ನೀರು ನುಗ್ಗಿ ಗೋವಿನ ಜೋಳ ಬೆಳೆ ನೆಲಕಚ್ಚಿದ್ದು, ಅಳಿದುಳಿದ ಗೋವಿನ ಜೋಳವನ್ನು ರೈತರು ಸಂಗ್ರಹಿಸಿದರು   

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ನಸುಕಿನವರೆಗೆ ಸುರಿದಿದ್ದ ಜೋರು ಮಳೆಯಿಂದಾಗಿ 426 ಮನೆಗಳಿಗೆ ನುಗ್ಗಿದ್ದ ನೀರು, ಮಂಗಳವಾರ ಕಡಿಮೆಯಾಗಿದೆ. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನಿವಾಸಿಗಳು, ಮಂಗಳವಾರ ಬೆಳಿಗ್ಗೆ ತಮ್ಮ ಮನೆಗಳತ್ತ ಹೋಗಿ ಅಳಿದುಳಿದ ಅವಶೇಷಗಳನ್ನು ಕಂಡು ಕಣ್ಣೀರಿಟ್ಟರು.

ಹಲವು ದಿನಗಳಿಂದ ಬಿಡುವು ನೀಡುತ್ತಲೇ ಜೋರು ಮಳೆ ಸುರಿಯುತ್ತಿದೆ. ಮಳೆಯಿಂದ ಸಂಗ್ರಹವಾಗುವ ಅಪಾರ ಪ್ರಮಾಣದ ನೀರು, ಹಳ್ಳ ಹಾಗೂ ನದಿಗಳಲ್ಲಿ ತುಂಬಿ ಹರಿಯುತ್ತಿದೆ. ಇದೇ ನೀರು ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ನುಗ್ಗುತ್ತಿದ್ದು, ಜಿಲ್ಲೆಯ ಹಲವು ಗ್ರಾಮಸ್ಥರು ನಲುಗಿ ಹೋಗಿದ್ದಾರೆ.

ಜಿಲ್ಲೆಯ ಬರದೂರು, ಸವೂರ, ಹುರುಳಿಕುಪ್ಪಿ, ಕುರುಬರ ಮಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಹಲವು ಗ್ರಾಮಸ್ಥರ ಮನೆ ಹಿತ್ತಲು ಜಲಾವೃತಗೊಂಡಿತ್ತು. ನೀರು ಕಂಡು ಗಾಬರಿಯಾಗಿದ್ದ ನಿವಾಸಿಗಳು, ಕೈಗೆ ಸಿಕ್ಕ ವಸ್ತುಗಳನ್ನಷ್ಟೇ ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿಬಂದಿದ್ದರು. ಕೆಲ ನಿಮಿಷಗಳಲ್ಲಿ ಇಡೀ ಮನೆಗಳು ಜಲಾವೃತಗೊಂಡಿದ್ದವು.

ADVERTISEMENT

ಮಕ್ಕಳು, ವೃದ್ಧರ ಸಮೇತ ಮನೆಯಿಂದ ಹೊರಗೆ ಓಡಿಬಂದಿದ್ದ ನಿವಾಸಿಗಳು, ಸುರಕ್ಷಿತ ಸ್ಥಳಗಳಲ್ಲಿ ತಂಗಿದ್ದರು. ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಹಳ್ಳದ ನೀರು ಮನೆಗಳಿಗೆ ನುಗ್ಗಿದ್ದ ಮಾಹಿತಿ ಪಡೆದಿದ್ದ ಜಿಲ್ಲಾಡಳಿತ, ಕಾಳಜಿ ಕೇಂದ್ರ ತೆರೆದು ಎಲ್ಲರಿಗೂ ಆಶ್ರಯ ಕಲ್ಪಿಸಿತ್ತು. ನಿವಾಸಿಗಳು ಕೇಂದ್ರದಲ್ಲಿ ಸೋಮವಾರ ರಾತ್ರಿ ಉಳಿದುಕೊಂಡಿದ್ದರು.

ಕೊಚ್ಚಿಹೋದ ಬದುಕು, ಗಲೀಜು–ದುರ್ನಾತ: ಬರದೂರು, ಬಂಕಾಪುರ ಕೊಟ್ಟಿಗೇರಿ ಸೇರಿದಂತೆ ಹಲವು ಕಡೆಯ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಕೇಂದ್ರದಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ನೀರು ಕಡಿಮೆಯಾಗಿದ್ದರಿಂದ, ನಿವಾಸಿಗಳು ತಮ್ಮ ಮನೆಗಳತ್ತ ಸಾಗಿದರು.

ನೀರು ನುಗ್ಗಿದ್ದ ಮನೆಗಳಿದೆ ಮಂಗಳವಾರ ತೆರಳಿದಾಗ, ಅವಶೇಷಗಳು ಕಂಡವು. ಸಾಮಾನ್ಯ ದಿನಗಳಲ್ಲಿ ಮನೆಯ ಕಸಗೂಡಿಸಿ ರಂಗೊಲಿ ಹಾಕುತ್ತಿದ್ದ ಮಹಿಳೆಯರು, ಹಳ್ಳದ ನೀರಿನಿಂದ ಗಲೀಜಾಗಿದ್ದ ಮನೆಗಳನ್ನು ನೋಡಿ ಕಣ್ಣೀರಿಟ್ಟರು. ಮಕ್ಕಳ ಜೊತೆ ಸೇರಿ, ಮನೆಯೊಳಗಿನ ಅವಶೇಷಗಳನ್ನು ಹೊರಗೆ ಸಾಗಿಸಿ ಸ್ವಚ್ಛಗೊಳಿಸಿದರು.

‘ದುಡಿಮೆ ನಂಬಿ ಬದುಕುತ್ತಿರುವ ಬಡವರು ನಾವು. ಸಣ್ಣ ಮನೆಯಲ್ಲಿ ವಾಸವಿದ್ದೇವೆ. ಸೋಮವಾರ ಬೆಳಿಗ್ಗೆ ಮನೆಗೆ ನೀರು ನುಗ್ಗಿದ್ದರಿಂದ, ಮನೆ ಬಿಟ್ಟು ಹೋಗಿದ್ದೆವು. ಈಗ ವಾಪಸು ಬಂದು ನೋಡಿದಾಗ, ಮನೆಯ ಗುರುತು ಸಿಗುತ್ತಿಲ್ಲ. ಹಳ್ಳದ ನೀರಿನ ಜೊತೆಯಲ್ಲಿ ಕೆಸರು, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವೆಲ್ಲವೂ ಮನೆಗೆ ನುಗ್ಗಿದೆ. ಗಲೀಜು ಹೆಚ್ಚಾಗಿ ದುರ್ನಾತ ಬರುತ್ತಿದೆ. ಮನೆಯವರೆಲ್ಲರೂ ಸೇರಿ ಮನೆ ಸ್ವಚ್ಛಗೊಳಿಸುತ್ತಿದ್ದೇವೆ’ ಎಂದು ಬರದೂರು ಗ್ರಾಮದ ಮಹಿಳೆಯರು ಹೇಳಿದರು.

‘ಮನೆ ಬಾಗಿಲಿಗೆ ಬಂದ ನೀರು ಕಂಡು ಗಾಬರಿಯಾಗಿತ್ತು. ಕೈಗೆ ಸಿಕ್ಕ ವಸ್ತುಗಳನ್ನಷ್ಟೇ ಗಂಟುಮೂಟೆ ಕಟ್ಟಿಕೊಂಡು ಹೊರಗೆ ಹೋಗಿದ್ದೆವು. ಅಗತ್ಯ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಇತರೆ ಸಾಮಗ್ರಿಗಳು ಮನೆಯಲ್ಲಿದ್ದವು. ಈ ಪೈಕಿ ಬಹುತೇಕ ಸಾಮಗ್ರಿಗಳು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಮ್ಮ ಬದುಕು ಬೀದಿಗೆ ಬಂದಿದೆ’ ಎಂದು ತಿಳಿಸಿದರು.

ಸರೂರು ಗ್ರಾಮದ ಮಹಿಳೆಯರು, ‘ಕೃಷಿ ನಂಬಿ ಜೀವನ ನಡೆಸುವ ಕುಟುಂಬ ನಮ್ಮದು. ಮನೆಗೆ ಏಕಾಏಕಿ ನೀರು ನುಗ್ಗಿತು. ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಮನೆ ಇದ್ದರೂ ನಾವೆಲ್ಲರೂ ಕಾಳಜಿ ಕೇಂದ್ರದಲ್ಲಿ ರಾತ್ರಿ ಇರಬೇಕಾಯಿತು. ಹಳ್ಳದ ನೀರಿನಿಂದ ಪ್ರತಿವರ್ಷವೂ ಸಮಸ್ಯೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು’ ಎಂದು ಒತ್ತಾಯಿಸಿದರು.

ನೀರಿನಲ್ಲಿ ನೆನೆದ ಮಗನ ಪುಸ್ತಕ: ಹುರುಳಿಕುಪ್ಪಿ ಗ್ರಾಮದ ಮಲ್ಲೂರು ರಸ್ತೆಯಲ್ಲಿರುವ ಕೆಲ ಮನೆಗಳು ಹಾಗೂ ಜಮೀಜು ಜಲಾವೃತಗೊಂಡಿದ್ದವು. ನಿವಾಸಿ ಉಮಾ ಎರೇಸೀಮಿ ಅವರ ಮನೆಗೂ ನೀರು ನುಗ್ಗಿತ್ತು. ಪ್ರಾಣ ಭಯದಲ್ಲಿ ಉಮಾ ಕುಟುಂಬ, ಪರಿಚಯಸ್ಥರ ಮನೆಯಲ್ಲಿ ತಂಗಿತ್ತು. ಮಂಗಳವಾರ ನೀರು ಕಡಿಮೆಯಾದ ನಂತರ ಮನೆಗೆ ಬಂದಿದ್ದ ಉಮಾ, ತಮ್ಮ ಮಗನ ಪುಸ್ತಕಗಳನ್ನು ನೆನೆದಿರುವುದನ್ನು ಕಂಡರು. ಬಳಿಕ, ಎಲ್ಲ ಪುಸ್ತಕಗಳನ್ನು ಮನೆ ಮುಂದೆ ರಾಶಿ ಹಾಕಿ ಬಿಸಿಲಿನಲ್ಲಿ ಒಣಗಿಸಿದರು.

‘ಗ್ರಾಮದ ಒಳಗಿರುವ ನಮ್ಮ ಮನೆ ಬಿದ್ದಿದೆ. ₹ 5ಲಕ್ಷ ಮಂಜೂರಾದರೂ ತಾಂತ್ರಿಕ ಕಾರಣದಿಂದ ಹಣ ಬರುತ್ತಿಲ್ಲ. ಮಲ್ಲೂರು ರಸ್ತೆಯಲ್ಲಿ ಸಣ್ಣದೊಂದು ಮನೆ ಮಾಡಿಕೊಂಡು ವಾಸವಾಗಿದ್ದೇವೆ. ಮಳೆ ಬಂದ ಸಂದರ್ಭದಲ್ಲಿ ನೀರು ಮನೆಗೆ ನುಗ್ಗಿ ತೊಂದರೆಯಾಗುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿರುವ ಮಗನ ಪುಸ್ತಕಗಳು ನೆನೆದಿದ್ದು, ಬಿಸಿಲಿನಲ್ಲಿ ಒಣಗಿಸುತ್ತಿದ್ದೇನೆ’ ಎಂದು ಉಮಾ ಅಳಲು ತೋಡಿಕೊಂಡರು.

ಹಳ್ಳದ ನೀರಿನಿಂದ ಮೇವು ಹಾಳು: ಕುರುಬರ ಮಲ್ಲೂರು ಗ್ರಾಮದಲ್ಲಿ ಹಳ್ಳದ ನೀರು ತುಂಬಿ ಹರಿದಿದ್ದು, ಕೆಲ ಮನೆಗಳು ಹಾಗೂ ಹಿತ್ತಲು ಜಲಾವೃತಗೊಂಡಿದ್ದವು. ಜಾನುವಾರುಗಳಿಗಾಗಿ ಸಂಗ್ರಹಿಸಿದ್ದ ಮೇವಿನ ಬಣವೆಗಳು, ನೀರಿನಿಂದ ಆವೃತಗೊಂಡು ಹಾನಿ ಉಂಟಾಗಿದೆ. ಹಳ್ಳಕ್ಕೆ ಹೊಂದಿಕೊಂಡಿರುವ ರಸ್ತೆಯು ಭಾಗಶಃ ಕುಸಿದಿದೆ.

‘ಸವೂರು, ನಂದಿಹಳ್ಳಿ, ಚಲ್ಯಾಳ, ಬರದೂರು ಹಾಗೂ ಶಿಗ್ಗಾವಿ ಕಡೆಯಿಂದ ಹಳ್ಳಕ್ಕೆ ನೀರು ಬರುತ್ತದೆ. ಹಳ್ಳದಲ್ಲಿ ನೀರು ಹೆಚ್ಚಾಗಿದ್ದರಿಂದ, ಹಾನಿಯೂ ಹೆಚ್ಚಾಗಿದೆ. ಇದು ಪ್ರತಿವರ್ಷದ ಗೋಳು’ ಎಂದು ಮುಕ್ತುಮಸಾಬ್ ಅಳಲು ತೋಡಿಕೊಂಡರು.

ಚಿಕ್ಕಬೂದಿಹಾಳ–ಸವೂರು ರಸ್ತೆಯಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಮಂಗಳವಾರವೂ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಅಪಾಯಕಾರಿ ಸ್ಥಿತಿಯಲ್ಲಿ ಹರಿಯುತ್ತಿದ್ದ ನೀರಿನಲ್ಲಿಯೇ ಕೆಲ ನಿವಾಸಿಗಳು ಸಂಚರಿಸಿದರು.

ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು–ಬರದೂರು ಗ್ರಾಮದ ರಸ್ತೆಯಲ್ಲಿ ಒಣಗಲು ಹಾಕಿದ್ದ ಶೇಂಗಾ ಜಲಾವೃತಗೊಂಡು ಹಾಳಾಗಿದ್ದು ನೆನೆದ ಶೇಂಗಾ ಕಾಳುಗಳನ್ನು ರೈತರು ಮಂಗಳವಾರ ಪುನಃ ಒಣಗಲು ಹಾಕಿರುವುದು
ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು ಹಳ್ಳಕ್ಕೆ ಹೊಂದಿಕೊಂಡಿರುವ ರಸ್ತೆ ಭಾಗಶಃ ಕುಸಿದಿರುವುದು
ಹಾವೇರಿ ಜಿಲ್ಲೆಯ ದೇವಗಿರಿ ಬಳಿಯ ವರದಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ದೇವಸ್ಥಾನ ಮುಳುಗಡೆ ಹಂತದಲ್ಲಿರುವುದು
ಹಾವೇರಿ ಜಿಲ್ಲೆಯ ಹುರುಳಿಕುಪ್ಪಿ ಬಳಿ ಮಳೆಯ ಹೊಡೆತಕ್ಕೆ ಟೊಮೆಟೊ ಬೆಳೆ ನೆಲಕಚ್ಚಿದ್ದು ಮಣ್ಣಿನಡಿ ಸಿಲುಕಿದ್ದ ಅಳಿದುಳಿದ ಟೊಮೆಟೊಗಳನ್ನು ಮಹಿಳೆಯರು ಮಂಗಳವಾರ ಸಂಗ್ರಹಿಸಿದರು
ಹಾವೇರಿ ಜಿಲ್ಲೆಯ ಚಿಕ್ಕಬೂದಿಹಾಳ–ಸವೂರು ನಡುವಿನ ರಸ್ತೆ ಮೇಲೆ ನೀರು ಹರಿಯುತ್ತಿದ್ದು ವೃದ್ಧರೊಬ್ಬರು ಮಂಗಳವಾರ ನೀರಿನಲ್ಲಿ ಸಾಗಿ ರಸ್ತೆ ದಾಟಿದರು

ಮಳೆ ಹೊಡೆತಕ್ಕೆ ನೆಲಕಚ್ಚಿದ ಬೆಳೆ: ರೈತ ಕಂಗಾಲು

ಜಿಲ್ಲೆಯಲ್ಲಿ ಸುರಿದ ಜೋರು ಮಳೆಯ ಹೊಡೆತಕ್ಕೆ ಕೃಷಿ ಬೆಳೆಗಳು ನೆಲಕಚ್ಚಿವೆ. ಟೊಮೆಟೊ ಗೋವಿನ ಜೋಳ ಶೇಂಗಾ ಬೆಳೆಗಳಿಗೆ ಹಾನಿಯಾಗಿದ್ದು ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ರೈತರು ಕಂಗಾಲಾಗಿದ್ದಾರೆ.

ಹುರುಳಿಕುಪ್ಪಿ ಗ್ರಾಮದಲ್ಲಿ ರೈತ ಮಂಜುನಾಥ ಅಯ್ಯಣ್ಣನವರ ಅವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ನೆಲಕಚ್ಚಿದ್ದು ಸುಮಾರು ₹4 ಲಕ್ಷ ಹಾನಿಯಾಗಿದೆ. ಹಳೇ ಮೆಳ್ಳಾಗಟ್ಟಿ ಗ್ರಾಮದ ಶಿವನಗೌಡ ಹಾಲಗೇರಿ ಅವರ ಶೇಂಗಾ ಬೆಳೆ ರಾಶಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ₹1.50 ಲಕ್ಷದಷ್ಟು ಹಾನಿ ಉಂಟಾಗಿದೆ. ಕುರುಬರ ಮಲ್ಲೂರಿನ ಹಳ್ಳಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿದ್ದ ಗೋವಿನ ಜೋಳ ಬೆಳೆ ನೆಲಕಚ್ಚಿದೆ.

ರೈತರು ಅಳಿದುಳಿದ ಗೋವಿನ ಜೋಳಗಳನ್ನು ಮಂಗಳವಾರ ಸಂಗ್ರಹಿಸಿದರು. ‘ಆಗಸ್ಟ್‌ನಲ್ಲಿ ಹಚ್ಚಿದ್ದ ಟೊಮೆಟೊ ಬೆಳೆ ಚೆನ್ನಾಗಿ ಬಂದಿತ್ತು. ಈಗ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದ್ದಿದ್ದರಿಂದ ಲಾಭದ ನಿರೀಕ್ಷೆ ಇತ್ತು. ಆದರೆ ಮಳೆಯಿಂದ ನಿರೀಕ್ಷೆ ಹುಸಿಯಾಗಿದೆ. ಮಳೆಯ ಹನಿಗಳ ಹೊಡೆತಕ್ಕೆ ಗಿಡಗಳು ನೆಲಕಚ್ಚಿವೆ. ಟೊಮೆಟೊಗಳು ಮಣ್ಣಿನಲ್ಲಿ ಹೂತು ಹೋಗಿವೆ. ಅಳಿದುಳಿದ ಟೊಮೆಟೊಗಳನ್ನು ಸಂಗ್ರಹಿಸಿ ತೊಳೆದು ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ’ ಎಂದು ರೈತ ಮಂಜುನಾಥ ಅಯ್ಯಣ್ಣನವರ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ರೈತ ಶಿವನಗೌಡ ಹಾಲಗೇರಿ ‘ಕಾಲುವೆಯಲ್ಲಿ ನೀರು ಹೆಚ್ಚಾಗಿ ಎಲ್ಲೆಂದರಲ್ಲಿ ಹರಿಯಿತು. 8 ಟ್ರ್ಯಾಕ್ಟರ್‌ನಷ್ಟು ಶೇಂಗಾವನ್ನು ರಾಶಿ ಮಾಡಲಾಗಿತ್ತು. ಇದೇ ರಾಶಿ ನೀರಿನ ಜೊತೆ ಕೊಚ್ಚಿಕೊಂಡು ಹೋಯಿತು. ಇದರಲ್ಲಿ 4 ಟ್ರ್ಯಾಕ್ಟರ್‌ನಷ್ಟು ಶೇಂಗಾವನ್ನು ಸಂಗ್ರಹಿಸಿದ್ದೇವೆ. ಉಳಿದ ಶೇಂಗಾ ನೀರು ಪಾಲಾಗಿದೆ’ ಎಂದರು.

ಮೊಳಕೆಯೊಡೆದ ಕಾಳುಗಳು: ಶೇಂಗಾ ಸೋಯಾಬೀನ್ ಗೋವಿನ ಜೋಳವನ್ನು ರೈತರು ಒಣಗಲು ಹಾಕುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಕಾಳುಗಳು ಮೊಳಕೆಯೊಡೆಯುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಮಾರಿ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರು ಮೊಳಕೆಯೊಡೆಯುತ್ತಿರುವ ಕಾಳುಗಳನ್ನು ನೋಡಿ ಕಂಗಾಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.