ADVERTISEMENT

ಹಾವೇರಿ | ಟೆಂಡರ್ ನೀಡದಿದ್ದರೆ ಹಾಲು ಸಾಗಣೆ ಬಂದ್: ವಾಹನ ಚಾಲಕರಿಂದ ಎಚ್ಚರಿಕೆ

ಹಾವೆಮುಲ್: ವಾಹನ ಚಾಲಕರಿಂದ ಎಚ್ಚರಿಕೆ: 54 ಮಾರ್ಗ– ಮೂವರಿಗೆ ಮಾತ್ರ ಗುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:37 IST
Last Updated 2 ಸೆಪ್ಟೆಂಬರ್ 2025, 2:37 IST
‘ಟೆಂಡರ್‌ ಪಡೆಯಲು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಹಾಲು ಸಾಗಿಸಲು ಅಧಿಕೃತವಾಗಿ ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಚಾಲಕರು ಹಾವೇರಿಯ ಹಾವೆಮುಲ್ ಕಚೇರಿ ಆವರಣದಲ್ಲಿ ಕ್ಯಾನ್‌ ಇಟ್ಟು ಸೋಮವಾರ ಆಕ್ರೋಶ ಹೊರಹಾಕಿದರು
‘ಟೆಂಡರ್‌ ಪಡೆಯಲು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಹಾಲು ಸಾಗಿಸಲು ಅಧಿಕೃತವಾಗಿ ಅವಕಾಶ ನೀಡಬೇಕು’ ಎಂದು ಆಗ್ರಹಿಸಿ ಚಾಲಕರು ಹಾವೇರಿಯ ಹಾವೆಮುಲ್ ಕಚೇರಿ ಆವರಣದಲ್ಲಿ ಕ್ಯಾನ್‌ ಇಟ್ಟು ಸೋಮವಾರ ಆಕ್ರೋಶ ಹೊರಹಾಕಿದರು   

ಹಾವೇರಿ: ‘ಹೊಸ ಟೆಂಡರ್‌ನಲ್ಲಿ ಅರ್ಜಿ ಸಲ್ಲಿಸಿರುವ ನಮಗೆ, ಹಾಲು ಸಾಗಣೆಗೆ ಅವಕಾಶ ನೀಡಬೇಕು. ಒಂದೇ ಅರ್ಜಿ ಎಂಬ ಕಾರಣಕ್ಕೆ ತಿರಸ್ಕರಿಸಬಾರದು. ಟೆಂಡರ್ ನೀಡದಿದ್ದರೆ ಹಾಲು ಸಾಗಣೆ ಬಂದ್ ಮಾಡಲಾಗುವುದು’ ಎಂದು ಹಾವೆಮುಲ್ ಹಾಲು ಸಾಗಣೆ ವಾಹನಗಳ ಚಾಲಕರು ಪಟ್ಟು ಹಿಡಿದಿದ್ದಾರೆ.

ಇಲ್ಲಿಯ ಗುತ್ತಲ ರಸ್ತೆಯಲ್ಲಿರುವ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಹಾವೆಮುಲ್) ಆಡಳಿತ ಕಚೇರಿ ಎದುರು ಸೋಮವಾರ ಸೇರಿದ್ದ ಚಾಲಕರು, ಕ್ಯಾನ್‌ಗಳನ್ನು ಆವರಣದಲ್ಲಿಟ್ಟು ತಮ್ಮ ಆಕ್ರೋಶ ಹೊರಹಾಕಿದರು.

‘ಆವರಣದಲ್ಲಿಟ್ಟಿದ್ದ ಕ್ಯಾನ್‌ಗಳನ್ನು ವಾಪಸು ಕೊಂಡೊಯ್ಯುವುದಿಲ್ಲ’ ಎಂದು ಚಾಲಕರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಬಂದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್‌.ಎಂ., ಚಾಲಕರ ಮನವೊಲಿಸಿ ಕಚೇರಿಯೊಳಗೆ ಕರೆದೊಯ್ದರು. ಅಧ್ಯಕ್ಷ ಮಂಜನಗೌಡ ಪಾಟೀಲ ನೇತೃತ್ವದಲ್ಲಿ ಸಭೆ ನಡೆಸಿದರು.

ADVERTISEMENT

‘ಕಾನೂನು ಪ್ರಕಾರ ಟೆಂಡರ್ ಕರೆಯಲಾಗಿದೆ. ಒಂದೇ ಅರ್ಜಿ ಇದ್ದರೆ, ಟೆಂಡರ್ ಮಾನ್ಯ ಆಗುವುದಿಲ್ಲ. ಹೀಗಾಗಿ, ಸಮಸ್ಯೆಯಾಗಿದೆ. ಮಂಗಳವಾರ ಆಡಳಿತ ಮಂಡಳಿ ಸಭೆಯಿದೆ. ಟೆಂಡರ್‌ ನಿಯಮ ಬದಲಾವಣೆ ಬಗ್ಗೆ ಚರ್ಚಿಸಲಾಗುವುದು. ಅಲ್ಲಿಯವರೆಗೂ ಕೆಲಸ ಮುಂದುವರಿಸಿ’ ಎಂದು ಅಧ್ಯಕ್ಷ ಮಂಜನಗೌಡ, ಚಾಲಕರನ್ನು ಕೋರಿದರು.

ಅದಕ್ಕೆ ಒಪ್ಪಿದ ಚಾಲಕರು, ‘3 ತಿಂಗಳ ಹಿಂದೆಯೇ ಟೆಂಡರ್ ಅವಧಿ ಮುಗಿದಿದೆ. ಹೊಸ ಟೆಂಡರ್‌ ಕರೆಯುವವರೆಗೂ ಕೆಲಸ ಮಾಡಿ ಎಂದಿದ್ದಕ್ಕೆ, ಕೆಲಸ ಮುಂದುವರಿಸಿದ್ದೇವೆ. ಈಗ ಹೊಸ ಟೆಂಡರ್‌ನಲ್ಲಿ ನಮ್ಮ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ. ನೀವು ಸಭೆ ಮಾಡಿ ಚರ್ಚಿಸಿ. ಅಂತಿಮವಾಗಿ, ನಮಗೆ ಟೆಂಡರ್‌ ನೀಡದಿದ್ದರೆ ಬುಧವಾರದಿಂದಲೇ ಹಾಲು ಸಾಗಣೆ ಬಂದ್ ಮಾಡುತ್ತೇವೆ’ ಎಂದು ಎಚ್ಚರಿಸಿದರು. 

54 ಮಾರ್ಗ, ಮೂವರಿಗೆ ಗುತ್ತಿಗೆ: ‘ಹಾಲು ಉತ್ಪಾದಕರ ಸಂಘಗಳಿಂದ ಸಂಗ್ರಹಿಸಿದ ಹಾಲನ್ನು, ನಿಗದಿತ ಸ್ಥಳಕ್ಕೆ ತರುವ ಜವಾಬ್ದಾರಿ ಚಾಲಕರದ್ದಾಗಿದೆ. ಇದಕ್ಕಾಗಿ 54 ಮಾರ್ಗಗಳಿವೆ. ಮೂರು ಮಾರ್ಗಗಳಿಗೆ ಹೆಚ್ಚಿನ ಅರ್ಜಿ ಬಂದಿದ್ದವು. ಅದರ ಟೆಂಡರ್ ಮುಗಿದಿದೆ. ಉಳಿದ ಮಾರ್ಗಗಳಿಗೆ ಸಮಸ್ಯೆಯಾಗಿದೆ’ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದಿಂದ ಸಮಸ್ಯೆ: ‘ಧಾರವಾಡ ಒಕ್ಕೂಟದ ಸಮಯದಿಂದ ಕೆಲಸ ಮಾಡುತ್ತಿದ್ದೇವೆ. ಹಾವೇರಿ ಒಕ್ಕೂಟವಾದಾಗಲೂ ಕೆಲಸ ಮುಂದುವರಿಸಿದ್ದೇವೆ. ಪ್ರಸಕ್ತ ವರ್ಷದಿಂದ ಸಮಸ್ಯೆ ಶುರುವಾಗಿದೆ’ ಎಂದು ಚಾಲಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘10–15 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ, ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೂ ದುಡಿಯುತ್ತಿದ್ದೇವೆ. ಒಂದೇ ಅರ್ಜಿ ಇದ್ದರೂ ಟೆಂಡರ್ ನೀಡುತ್ತಿದ್ದರು. ₹ 200ರಿಂದ ₹ 500 ಶುಲ್ಕವಿತ್ತು. ಈಗ ಶುಲ್ಕವನ್ನೂ ₹ 5 ಸಾವಿರಕ್ಕೆ ಏರಿಸಿದ್ದಾರೆ. ನಾನಾ ನಿಯಮಗಳನ್ನು ಜಾರಿಗೆ ತಂದಿದ್ದಾರೆ’ ಎಂದರು.

‘₹ 30 ಸಾವಿರ ಠೇವಣಿ, ₹ 5 ಸಾವಿರ ಶುಲ್ಕವಿದೆ. ಅರ್ಜಿ ಹಾಕಲು ಸೈಬರ್‌ ಕೇಂದ್ರದವರಿಗೆ ₹ 2 ಸಾವಿರ ನೀಡಬೇಕು. ಪರವಾನಗಿ ನವೀಕರಣವಿದ್ದರೆ ₹ 5,000 ಹೋಗುತ್ತದೆ. ಇಷ್ಟೆಲ್ಲ ಖರ್ಚು ಮಾಡಿ ಅರ್ಜಿ ಸಲ್ಲಿಸಿದರೂ ನಮಗೆ ಅವಕಾಶ ಸಿಕ್ಕಿಲ್ಲ. ಟೆಂಡರ್ ನಿಯಮ ಬದಲಾವಣೆ ಮಾಡಿದರೆ, ಬೇರೆಯವರು ಬರುತ್ತಾರೆ. ಇದೇ ಕೆಲಸ ನಂಬಿಕೊಂಡಿರುವ ನಾವು ಬೀದಿಗೆ ಬರುತ್ತೇವೆ’ ಎಂದು ಅಳಲು ತೋಡಿಕೊಂಡರು. 

ಟೆಂಡರ್ ವಿಚಾರವಾಗಿ ಚಾಲಕರು ಬಂದು ಮಾತನಾಡಿದ್ದಾರೆ. ಇದು ಒಕ್ಕೂಟದ ಆಂತರಿಕ ವಿಚಾರ. ಇದನ್ನು ನಮ್ಮೊಳಗೆಯೇ ಬಗೆಹರಿಸಿಕೊಳ್ಳಲಾಗುವುದು
ಪ್ರದೀಪ್ ಎಸ್.ಎಂ. ವ್ಯವಸ್ಥಾಪಕ ನಿರ್ದೇಶಕ ಹಾವೆಮುಲ್

ಕ್ಷಮೆ ಕೋರಿದ ಅಧ್ಯಕ್ಷ

‘ಒಕ್ಕೂಟದ ಏಳಿಗೆಗಾಗಿ ಹಾಲು ಸಾಗಣೆ ವಾಹನಗಳ 54 ಚಾಲಕರು ದಿನವೂ ಕೆಲಸ ಮಾಡುತ್ತಿದ್ದೇವೆ. ಆದರೆ ಇತ್ತೀಚೆಗೆ ನಡೆದ ಒಕ್ಕೂಟದ ಹೊಸ ಆಡಳಿತ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಚಾಲಕರಿಗೆ ಆಹ್ವಾನ ನೀಡದಿರುವುದು ಖಂಡನೀಯ’ ಎಂದು ಚಾಲಕರು ಅಳಲು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಂಜನಗೌಡ ‘ಒಕ್ಕೂಟಕ್ಕೆ ನಾನು ಹೊಸಬ. ಎಲ್ಲರನ್ನೂ ಕರೆಯುವಂತೆ ಅಧಿಕಾರಿಗಳಿಗೆ ಹೇಳಿದ್ದೆ. ಅವರು ಹೇಳಿದರೂ ಇಲ್ಲವೋ ಗೊತ್ತಿಲ್ಲ. ಚಾಲಕರನ್ನು ಸಮಾರಂಭಕ್ಕೆ ಆಹ್ವಾನಿಸದಿದ್ದಕ್ಕೆ ನಾನೇ ಕ್ಷಮೆ ಕೋರುತ್ತೇನೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.