ADVERTISEMENT

‘ನಲಿಕಲಿ’ ಮಕ್ಕಳಿಗೆ ದಿನಕ್ಕೊಂದು ರೂಪಾಯಿ:ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕನ ಪ್ರಯತ್ನ

ಪ್ರದೀಪ ಕುಲಕರ್ಣಿ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಎಂ.ಕೆ.ಹೊಳಜೋಗಿ
ಎಂ.ಕೆ.ಹೊಳಜೋಗಿ   

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ‘ನಲಿ ಕಲಿ‘ ಶಿಕ್ಷಣದ ಮಕ್ಕಳಿಗೆ ದಿನಕ್ಕೆ ₹ 1 ನೀಡಲು ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ತೀರ್ಮಾನಿಸಿದ್ದು, ದಾಖಲಾತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ಶಾಲೆಯಲ್ಲಿ 1ರಿಂದ 3ನೇ ತರಗತಿಯವರೆಗೆ ನಲಿ–ಕಲಿ ಶಿಕ್ಷಣ ಕ್ರಮವಿದೆ. 1, 2ನೇ ತರಗತಿಯಲ್ಲಿ 7 ಮಕ್ಕಳಿದ್ದಾರೆ. 3ನೇ ತರಗತಿಯಲ್ಲಿ ಮಕ್ಕಳಿಲ್ಲ. ಹೀಗಾಗಿ, ದಾಖಲಾತಿ ಹೆಚ್ಚಳಕ್ಕಾಗಿ ಹೊಳಜೋಗಿ ಅವರು ‘ದಿನಕ್ಕೆ ₹ 1 ಯೋಜನೆ’ ರೂಪಿಸಿದ್ದಾರೆ.

ಸರ್ಕಾರಿ ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಹೆಸರಿನಲ್ಲಿ ಸದ್ಯ ₹ 1,111 ಠೇವಣಿ ಇರಿಸಿರುವ ಹೊಳಜೋಗಿ, ಅದರ ಜೊತೆಗೆ ದಿನಕ್ಕೆ ₹ 1 ನೀಡುವುದಾಗಿ ಘೋಷಿಸಿದ್ದಾರೆ.

ADVERTISEMENT

‘2025ನೇ ಶೈಕ್ಷಣಿಕ ವರ್ಷದಲ್ಲಿ ಜೂನ್ ತಿಂಗಳಲ್ಲಿ 1ನೇ ತರಗತಿಗೆ ನಾಲ್ವರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅವರ ಹೆಸರಿನಲ್ಲಿ ತಲಾ ₹ 1,111 ಠೇವಣಿ ಇರಿಸಲಾಗಿದೆ. ಈಗ ನವೆಂಬರ್‌ನಿಂದ 2026ರ ಏಪ್ರಿಲ್‌ವರೆಗೂ 7 ಮಕ್ಕಳಿಗೆ ದಿನಕ್ಕೆ ₹ 1 ನೀಡಲು ತೀರ್ಮಾನಿಸಲಾಗಿದೆ’ ಎಂದು ಎಂ.ಕೆ.ಹೊಳಜೋಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳ ಹೆಸರಿನಲ್ಲಿ ಪೋಷಕರು ಈಗಾಗಲೇ ಬ್ಯಾಂಕ್ ಖಾತೆ ತೆರೆದಿದ್ದಾರೆ. ಅದೇ ಖಾತೆಗೆ ದಿನದ ಲೆಕ್ಕದಲ್ಲಿ ಪ್ರತಿ ತಿಂಗಳೂ ಹಣ ಜಮೆ ಮಾಡುತ್ತೇನೆ. ಮಕ್ಕಳು ಸರ್ಕಾರಿ ಶಾಲೆಗೆ ಬರಲಿ ಎಂಬ ಕಾರಣಕ್ಕೆ ಈ ಕ್ರಮವಹಿಸಿದ್ದೇನೆ. ಜೊತೆಗೆ, ಹಣ ಉಳಿತಾಯದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು. 

ಪೋಷಕರಾದ ಮಂಜಪ್ಪ ಲಮಾಣಿ ಅವರು,‘ ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ಅವರ ಕೆಲಸ ಮೆಚ್ಚುವಂಥದ್ದು. ನನ್ನ ಮಗ ಹಾಗೂ ನನ್ನ ಅಣ್ಣನ ಮಗಳ ಖಾತೆಗೆ ಈಗಾಗಲೇ ತಲಾ ₹ 1,111 ಠೇವಣಿ ಜಮೆ ಮಾಡಿದ್ದಾರೆ’ ಎಂದರು.

ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನೋಟ
ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಮನಸ್ಸು ಮಾಡಬೇಕು. ಮಕ್ಕಳ ಖಾತೆಗೆ ಜಮೆ ಮಾಡಿದ ಹಣ ಶೈಕ್ಷಣಿಕ ಲೇಖನ ಸಾಮಗ್ರಿ ಖರೀದಿಗೆ ನೆರವಾಗಲಿದೆ
ಎಂ.ಕೆ.ಹೊಳಜೋಗಿ ಮುಖ್ಯ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.