
ಶಿಗ್ಗಾವಿ: ಮಾರ್ಚ್ 14ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನನೆಗುದಿಗೆ ಬಿದ್ದಿರುವ ಹಲವು ಪ್ರಕರಣಗಳಿಗೆ ಪರಿಹಾರ ನೀಡುವ ಕೆಲಸವಾಗಬೇಕು. ಅದರಿಂದ ನೊಂದ ಜನರಿಗೆ ನ್ಯಾಯ ನೀಡುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಶಿಗ್ಗಾವಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಸುನೀಲ್ ಎಸ್. ತಳವಾರ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಮಾ. 14ರಂದು ನಡೆಯಲಿರುವ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಿರಿಯ ನ್ಯಾಯಾಲಯದ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ ಮಾತನಾಡಿ, ‘ವ್ಯಾಜ್ಯ ರಹಿತ ಸಮಾಜ ನಿರ್ಮಾಣಕ್ಕೆ ಲೋಕ ಅದಾಲತ್ ಸಹಕಾರಿಯಾಗಿದ್ದು, ಅದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕು. ಹಲವು ವರ್ಷಗಳಿಂದ ನ್ಯಾಯಕಾಗಿ ಅಲೆದಾಡುವ ಜನರಿಗೆ ಮುಕ್ತಿ ನೀಡಬೇಕು. ಸರ್ವ ಸಮುದಾಯದ ಜನರಲ್ಲಿ ಸಮಾನತೆ ಕಾಣಬೇಕು’ ಎಂದರು.
ವಕೀಲರ ಅಂಘದ ಅಧ್ಯಕ್ಷ ಎಸ್.ಬಿ. ಲಕ್ಕಣವರ, ಕಾರ್ಯದರ್ಶಿ ವಿವೇಕ ರಾಮಗೇರಿ, ಬಸವರಾಜ ರಾಗಿ, ಎನ್.ಎನ್. ಮಲ್ಲಾಡದ, ಮೀರಾಬಾಯಿ ಉದಗಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ಇದ್ದರು.