
ಹಾವೇರಿ: ‘ಆನ್‌ಲೈನ್ ವೇದಿಕೆಗಳ ಮೂಲಕ ವ್ಯಾಪಾರ–ವಹಿವಾಟು ನಡೆಯುತ್ತಿದ್ದು, ಹಾವೇರಿ ಜಿಲ್ಲೆಗೂ ಆನ್‌ಲೈನ್ ಮೂಲಕ ಸಾಕಷ್ಟು ವಸ್ತುಗಳನ್ನು ಬರುತ್ತಿವೆ. ಇಂಥ ವಸ್ತುಗಳ ಜೊತೆಯಲ್ಲಿ ಡ್ರಗ್ಸ್ ಸಾಗಣೆ ಆಗುವ ಸಂಭವವಿರುತ್ತದೆ. ಹೀಗಾಗಿ, ಕೋರಿಯರ್ ಏಜೆನ್ಸಿಗಳು ಹಾಗೂ ಮಳಿಗೆಗಳ ಮೇಲೆ ತೀವ್ರ ನಿಗಾ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ನಾರ್ಕೊ ಸಮನ್ವಯ ಸಮಿತಿ (ಎನ್‌ಸಿಒಆರ್‌ಡಿ) ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಇಂದಿನ ಯುವಜನತೆ, ಡ್ರಗ್ಸ್ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿ್ದ್ದಾರೆ. ಕೆಲವರು, ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಡ್ರಗ್ಸ್ ಸಾಗಣೆ ಮಾಡುತ್ತಿದ್ದಾರೆ. ಇಂಥ ಡ್ರಗ್ಸ್ ಸಾಗಣೆ ಹಾಗೂ ಡ್ರಗ್ಸ್ ಬಳಸುವವರ ಬಗ್ಗೆ ಪೊಲೀಸರು ಹಾಗೂ ಇತರೆ ಇಲಾಖೆಯವರು ಹದ್ದಿನ ಕಣ್ಣು ಇರಿಸಬೇಕು. ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಮಾದಕ ವಸ್ತುಗಳ ಬಳಕೆಯ ಪರಿಶೀಲನೆ ಹಾಗೂ ಮಾದಕ ವಸ್ತುಗಳ ಸಾಗಣೆ ತಪಾಸಣೆ ಮಾಡಬೇಕು. ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯುವಜಯತೆಯಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.
‘ಅಂಚೆ ಇಲಾಖೆ ಹಾಗೂ ಆನ್‌ಲೈನ್ ಶಾಪಿಂಗ್ ಜಾಲತಾಣಗಳ ಮೂಲಕ ಪಾರ್ಸೆಲ್‌ಗಳು ಬರುತ್ತಿವೆ. ಇಂಥ ಪಾರ್ಸೆಲ್‌ಗಳು ಎಲ್ಲಿ ಬರುತ್ತದೆಯೋ ಅಲ್ಲೆಲ್ಲ ತೀವ್ರ ತಪಾಸಣೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
‘ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ವೈದ್ಯಕೀಯ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚು ಗಮನ ಹರಿಸಬೇಕು. ಅವರಲ್ಲಿ ಡ್ರಗ್ಸ್ ದುಷ್ಪರಿಣಾಮದ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಿರಂತರವಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಜಾಗೃತರಾಗುತ್ತಾರೆ’ ಎಂದು ಹೇಳಿದರು.
ಅಧಿಕಾರಿಗಳ ವರ್ತನೆಗೆ ಅಸಮಾಧಾನ: ಕಳೆದ ಬಾರಿ ನಾರ್ಕೊ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಜಿಲ್ಲಾಧಿಕಾರಿ, ಡ್ರಗ್ಸ್ ಪರಿಶೀಲನೆ ಹಾಗೂ ಜಾಗೃತಿ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಗತಿ ಬಗ್ಗೆ ವರದಿ ನೀಡುವಂತೆಯೂ ತಾಕೀತು ಮಾಡಿದ್ದರು. ಆದರೆ, ಬಹುತೇಕ ಅಧಿಕಾರಿಗಳು ಸೋಮವಾರ ಸಭೆಗೆ ವರದಿ ನೀಡಲಿಲ್ಲ. ಅಧಿಕಾರಿಗಳ ವರ್ತನೆಗೆ ಜಿಲ್ಲಾಧಿಕಾರಿಯವರು ಅಸಮಾಧಾನ ವ್ಯಕ್ತಪಡಿಸಿದರು.
‘ಕಳೆದ ಸಭೆಯಲ್ಲಿ ಆಯ್ದ ಶಾಲೆ, ಕಾಲೇಜು, ಹಾಸ್ಟೆಲ್ ಹಾಗೂ ಜನವಸತಿ ಪ್ರದೇಶಗಳನ್ನು ಗುರುತಿಸಿ ಡ್ರಗ್ಸ್ ನಿಗ್ರಹ ಸಮಿತಿ ರಚಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಸಮಿತಿಯ ಮೂಲಕ ವಿದ್ಯಾರ್ಥಿಗಳನ್ನು ಜಾಗೃತಿ ಮೂಡಿಸುವಂತೆಯೂ ಹೇಳಿದ್ದೆ. ಆದರೆ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯಕ್ರಮ ನಡೆಸಿಲ್ಲ. ಈ ವರ್ತನೆ ಸರಿಯಲ್ಲ. ಇನ್ನಾದರೂ ಸೂಕ್ತ ರೀತಿಯಲ್ಲಿ ಸಮಿತಿ ರಚಿಸಿ, ವಿದ್ಯಾರ್ಥಿಗಳನ್ನು ಜಾಗೃತಿ ಮೂಡಿಸಿ ಮುಂದಿನ ಸಭೆಯಲ್ಲಿ ಪ್ರಗತಿ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ಎಸ್‌ಪಿ ಯಶೋಧಾ ವಂಟಗೋಡಿ ಮಾತನಾಡಿ, ‘ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಹಾಗೂ ಕಾನೂನಿನಡಿ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಕುರಿತು ಯುವಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ. ಕೇವಲ ಪೊಲೀಸ್ ಇಲಾಖೆ ಮಾತ್ರವಲ್ಲದೇ, ಪ್ರತಿಯೊಂದು ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಅವರಿಗೆ ಪೊಲೀಸ್ ಇಲಾಖೆಯಿಂದಲೂ ಸಹಕಾರ ನೀಡಲಾಗುವುದು’ ಎಂದರು.
ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪೊಲೀಸ್ ಇಲಾಖೆ ಮಾತ್ರವಲ್ಲದೇ ಪ್ರತಿಯೊಂದು ಇಲಾಖೆಯವರು ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕುಯಶೋಧಾ ವಂಟಗೋಡಿ ಜಿಲ್ಲಾ ಎಸ್‌ಪಿ
ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪಾರ್ಸೆಲ್:
‘ಕೆಎಸ್‌ಆರ್‌ಟಿಸಿ ವಾಕರಸಾಸಂ ಬಸ್‌ಗಳಲ್ಲಿ ಖಾಸಗಿ ವ್ಯಕ್ತಿಗಳು ಪಾರ್ಸೆಲ್ ಕಳುಹಿಸುತ್ತಿದ್ದಾರೆ. ಪಾರ್ಸೆಲ್‌ನ ಪರಿಶೀಲನೆ ನಡೆಸದೇ ಚಾಲಕರು ಹಾಗೂ ನಿರ್ವಾಹಕರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ದು ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಪಾರ್ಸೆಲ್ ನೆಪದಲ್ಲಿ ಡ್ರಗ್ಸ್ ಸಾಗಣೆ ಮಾಡುವ ಸಾಧ್ಯತೆ ಇರುತ್ತದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು. ‘ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪಾರ್ಸೆಲ್‌ಗಳನ್ನು ಪಡೆಯದಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ನೀಡಬೇಕು. ಪಾರ್ಸೆಲ್ ತೆಗೆದುಕೊಂಡರೂ ಪಾರ್ಸೆಲ್ ನೀಡುವ ವ್ಯಕ್ತಿಗಳ ಸಂಪೂರ್ಣ ಮಾಹಿತಿ ದಾಖಲಿಸಿಕೊಳ್ಳಬೇಕು’ ಎಂದು ಹೇಳಿದರು. ‘ಹೆಚ್ಚು ಭಾರ ಹೊತ್ತು ತರುವಂತಹ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು. ಔಷಧಿ ಅಂಗಡಿಗಳಲ್ಲಿ ಪರಿಶೀಲನೆ ನಡೆಸಬೇಕು. ಯಾವೆಲ್ಲ ಔಷಧಿಗಳು ಮಾರಾಟಕ್ಕಿವೆ ? ಯಾವೆಲ್ಲ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ? ಎಂಬುದನ್ನು ತಪಾಸಣೆ ಮಾಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.