ADVERTISEMENT

ಹಾವೇರಿ| 68 ಹಳ್ಳಿಗಳಲ್ಲಿ ನೀರಿನ ಕೊರತೆ ಸಾಧ್ಯತೆ

ಬೇಸಿಗೆಯಲ್ಲಿ ಬತ್ತುವ ಜಲಮೂಲಗಳು: ಹಿರೇಕೆರೂರು ತಾಲ್ಲೂಕಿನಲ್ಲಿ ಕೊರತೆ ಹೆಚ್ಚು

ಸಿದ್ದು ಆರ್.ಜಿ.ಹಳ್ಳಿ
Published 18 ಏಪ್ರಿಲ್ 2022, 19:30 IST
Last Updated 18 ಏಪ್ರಿಲ್ 2022, 19:30 IST
ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್‌ನಲ್ಲಿ ತಳ್ಳುವ ಗಾಡಿಯ ಮೂಲಕ ಮಹಿಳೆಯರು ನೀರು ಸಾಗಿಸುವ ದೃಶ್ಯ   –ಪ್ರಜಾವಾಣಿ ಚಿತ್ರ 
ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್‌ನಲ್ಲಿ ತಳ್ಳುವ ಗಾಡಿಯ ಮೂಲಕ ಮಹಿಳೆಯರು ನೀರು ಸಾಗಿಸುವ ದೃಶ್ಯ   –ಪ್ರಜಾವಾಣಿ ಚಿತ್ರ    

ಹಾವೇರಿ: ಬೇಸಿಗೆ ಕಾಲದಲ್ಲಿ ಜಲಮೂಲಗಳು ಬತ್ತುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಶುದ್ಧ ನೀರಿಗಾಗಿ ಹಳ್ಳಿ ಜನರು ಪರದಾಡುವ ಚಿತ್ರಣ ಪ್ರತಿ ವರ್ಷ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ 68 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಗುರುತಿಸಲಾಗಿದೆ.

ಜಲಮೂಲಗಳ ಸ್ಥಿತಿಗತಿ, ಅಂತರ್ಜಲ ಮಟ್ಟ, ನೀರು ಪೂರೈಕೆಯ ವ್ಯವಸ್ಥೆ ಮುಂತಾದ ಅಂಶಗಳನ್ನು ಆಧರಿಸಿ, ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ಪಡೆದು,ಆಯಾ ತಾಲ್ಲೂಕು ಪಂಚಾಯಿತಿಗಳು ಜಿಲ್ಲಾ ಪಂಚಾಯಿತಿಗೆ ನೀರಿಗೆ ತತ್ವಾರ ಉಂಟಾಗುವ ಸಂಭಾವ್ಯ ಗ್ರಾಮಗಳ ಪಟ್ಟಿಯನ್ನು ಸಲ್ಲಿಸಿವೆ.

ಬೇಸಿಗೆಯಲ್ಲಿ ನದಿ, ಕೆರೆ–ಕಟ್ಟೆ, ಕಾಲುವೆಗಳು ಬತ್ತುತ್ತವೆ. ಕುಡಿಯುವ ನೀರಿನ ಮೂಲವಾದ ಕೊಳವೆಬಾವಿಗಳು ಕೂಡ ಕೈ ಕೊಡುತ್ತವೆ. ಬೇಸಿಗೆಯಲ್ಲಿ ಸಹಜವಾಗಿ ಮಳೆ ಇಲ್ಲದ ಕಾರಣ ಅಂತರ್ಜಲ ಮಟ್ಟವೂ ಕುಸಿಯುತ್ತದೆ. ಗ್ರಾಮಗಳಲ್ಲಿರುವ ಕೈ ಪಂಪುಗಳು, ನಳಗಳಲ್ಲಿ ಕೂಡ ನೀರು ಬರುವುದಿಲ್ಲ. ಶುದ್ಧ ನೀರಿಗಾಗಿ ಮಹಿಳೆಯರು ಕೊಡ ಹಿಡಿದು ಅಲೆದಾಡುವ ದೃಶ್ಯಗಳು ಪ್ರತಿ ಬೇಸಿಗೆಯಲ್ಲೂ ಕಂಡು ಬರುತ್ತವೆ.

ADVERTISEMENT

ಹಿರೇಕೆರೂರಿನಲ್ಲಿ ಕೊರತೆ ಹೆಚ್ಚು

ಹಿರೇಕೆರೂರ ತಾಲ್ಲೂಕಿನ ಚಿಕ್ಕೇರೂರು, ಚಿನ್ನಮುಳುಗುಂದ ತಾಂಡಾ, ಚಿಕ್ಕಮತ್ತೂರು, ಕೋಡ, ಜೋಗಿಹಳ್ಳಿ, ಚಿಕ್ಕೊಣತಿ, ಗಂಗಾಪುರ, ಚೊಗಚಿಕೊಪ್ಪ ತಾಂಡಾ, ತಾವರಗಿ, ಸುತ್ತಕೋಟಿ, ಮಡ್ಲೂರು, ನಿಟ್ಟೂರು, ಯಲ್ಲಾಪುರ, ದೂಪದಹಳ್ಳಿ, ಲಿಂಗಾಪುರ, ಬೆಟಕೆರೂರು ಸೇರಿದಂತೆ ಒಟ್ಟು 28 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಪಟ್ಟಿ ತಯಾರಿಸಲಾಗಿದೆ.

ಹಾನಗಲ್‌ ತಾಲ್ಲೂಕಿನಲ್ಲಿ ಡಮ್ಮನಾಳ, ಶಿರಗೋಡ, ಇನಾಂನೀರಲಗಿ, ಕೋಣನಕೊಪ್ಪ, ತಿಳವಳ್ಳಿ, ಬೆಳಗಾಲಪೇಟೆ, ಕೊಪ್ಪರಸಿಕೊಪ್ಪ, ಗುರುರಾಯಪಟ್ಟಣ; ರಟ್ಟೀಹಳ್ಳಿ ತಾಲ್ಲೂಕಿನ ಹಿರೇಮತ್ತೂರು, ಹುಲ್ಲತ್ತಿ, ಲಿಂಗದೇವರಕೊಪ್ಪ, ಯತ್ತಿನಹಳ್ಳಿ ಎಂ.ಎಂ.ತಾಂಡಾ, ಹೊಸಳ್ಳಿ; ರಾಣೆಬೆನ್ನೂರು ತಾಲ್ಲೂಕಿನ ಶ್ರೀನಿವಾಸಪುರ, ಪದ್ಮಾವತಿಪುರ; ಸವಣೂರು ತಾಲ್ಲೂಕಿನ ಬರದುರ, ಮಾವುರ; ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರ, ಚಿಕ್ಕಮಲ್ಲೂರ, ಕೆಂಗಾಪುರ, ಅತ್ತಿಗೇರಿ, ವನಹಳ್ಳಿ, ಪಾಣಿಗಟ್ಟಿ, ಹಣಸಿಕಟ್ಟಿ ಮುಂತಾದ ಗ್ರಾಮಗಳಲ್ಲಿ ನೀರಿಗೆ ತತ್ವಾರ ಉಂಟಾಗಬಹುದು ಎಂದು ಗುರುತಿಸಲಾಗಿದೆ.

ಸದ್ಯದ ಪರಿಸ್ಥಿತಿ ಅವಲೋಕಿಸಿದರೆ, ಬ್ಯಾಡಗಿ, ಹಾವೇರಿ ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲೂ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಕೆಲವು ಗ್ರಾಮಗಳು ವರದಾ ನದಿ ದಡದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತವೆ.

ಕೆಲವು ಗ್ರಾಮಗಳಿಗೆ ನೀರು ಪೂರೈಕೆಯಾದರೂ ಕುಡಿಯಲು ಯೋಗ್ಯವಾಗಿರುವುದಿಲ್ಲ, ದಿನಬಳಕೆಗೆ ಮಾತ್ರ ಸೀಮಿತವಾಗಿರುತ್ತವೆ. ಗ್ರಾಮಗಳಲ್ಲಿ ಸ್ಥಾಪಿಸಿರುವ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್‌ ಆಗಿವೆ. ಇವುಗಳನ್ನು ಕೂಡಲೇ ದುರಸ್ತಿ ಮಾಡಿ, ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪರ್ಯಾಯ ವ್ಯವಸ್ಥೆ

ಜಿಲ್ಲೆಯಲ್ಲಿಕಳೆದ ವರ್ಷ ಉತ್ತಮ ಮಳೆಯಾಗಿರುವ ಕಾರಣ ಕೆರೆ–ಕಟ್ಟೆಗಳಲ್ಲಿ ಸಾಕಷ್ಟು ನೀರಿದೆ. ಜಲಮೂಲಗಳು ಕೂಡ ಅಷ್ಟಾಗಿ ಬತ್ತಿಲ್ಲ. ಆದರೂ, ನೀರಿನ ಕೊರತೆ ಕಾಣಿಸಿಕೊಳ್ಳಬಹುದಾದ 68 ಗ್ರಾಮಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ತಿಳಿಸಿದರು.

ಖಾಸಗಿ ಕೊಳವೆಬಾವಿ ಹೊಂದಿರುವರೈತರೊಂದಿಗೆ ಒಪ್ಪಂದ ಮಾಡಿಕೊಂಡು ಗ್ರಾಮಸ್ಥರಿಗೆ ನೀರು ಪೂರೈಸುವುದು, ಹೊಸ ಕೊಳವೆಬಾವಿ ಕೊರೆಯಲು ಅನುದಾನ ಬಿಡುಗಡೆ ಮಾಡುವುದು ಹಾಗೂ ಅಗತ್ಯಬಿದ್ದರೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸಿದ್ಧವಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.