
ಹಾನಗಲ್: ‘ಗ್ಯಾರಂಟಿಗಳನ್ನೇ ಸಾಧನೆಯಾಗಿ ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು, ಹಿಂದಿನ ಸರ್ಕಾರದ ಮೇಲೆ ಶೇ 40 ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದು, ಈಗ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ರಘುಪತಿ ಭಟ್ ಆಪಾದಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಸಾಮಾನ್ಯರ ಹಕ್ಕನ್ನು ಅವರಿಗೆ ನೀಡಲು ಲಂಚ ಕೊಡಬೇಕಾದ ಸ್ಥಿತಿ ಉಂಟಾಗಿರುವುದು ವಿಷಾದದ ಸಂಗತಿ. ಹಕ್ಕುಪತ್ರಗಳನ್ನು ಹಾಗೆಯೇ ಕೊಡಬಹುದಾಗಿತ್ತು. ಆದರೆ ಹಕ್ಕುಪತ್ರದ ಹೆಸರಿನಲ್ಲಿ ಸಮಾವೇಶ ಮಾಡುತ್ತಿರುವುದು ವಿಷಾದದ ಸಂಗತಿ’ ಎಂದರು.
‘ಮನೆ ಮಾಲೀಕತ್ವದ ಹಕ್ಕುಪತ್ರ ವಿತರಣೆ ಹೆಸರಿನಲ್ಲಿ ಫಲಾನುಭವಿಗಳಿಂದ ಹಣ ಲೂಟಿ ಮಾಡುತ್ತಿದ್ದು, ಸಾಲ ಮಾಡಿ ಜನ ಲಂಚಕ್ಕೆ ಹಣ ನೀಡುವಂತಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಹಲವೆಡೆ ಲಂಚದ ಹಣವನ್ನು ಮರಳಿ ಫಲಾನುಭವಿಗಳಿಗೆ ಕೊಡಿಸಿದ್ದಾರೆ. ಇಡೀ ರಾಜ್ಯದಾದ್ಯಂತ ಬಡವರ ಸುಲಿಗೆ ನಡೆದಿದೆ. ರಾಜ್ಯದಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸವಾಗಿಲ್ಲ. ಹೀಗಾಗಿ ಇಂತಹ ನೆಪದಲ್ಲಿ ಜನರನ್ನು ಕೂಡಿಸಿ ಇದೇ ಸಾಧನೆ ಎಂದು ಹೇಳುತ್ತಿದೆ. ಮುಂದೆ ನೀರಿನ ಹಕ್ಕು ಪತ್ರ, ಕರೆಂಟ್ ಹಕ್ಕು ಪತ್ರ ವಿತರಣಾ ಸಮಾವೇಶಗಳನ್ನೂ ಮಾಡಬಹುದು’ ಎಂದು ವ್ಯಂಗ್ಯವಾಡಿದರು.
‘ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಆರೇಳು ಲಕ್ಷ ರೂಪಾಯಿಯಲ್ಲಿ ಬಡವರಿಗೆ ನೀಡುವ ಯೋಜನೆ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ, ಈಗ ಇದೇ ಮನೆಗಳಿಗೆ ₹ 13 ಲಕ್ಷದಿಂದ ₹ 14 ಲಕ್ಷ ಕೇಳುತ್ತಿದೆ. 3,770 ಚದರ ಅಡಿ ಮನೆ, ಅದು ಕೂಡ ಬೆಂಗಳೂರಿನ ಕೊನೆಗೆ ಇರುವ ಜಾಗದಲ್ಲಿ ನೀಡುತ್ತಿದ್ದು, ಬಡವರ ಸುಲಿಗೆಗೆ ಮುಂದಾಗಿದೆ’ ಎಂದರು.
‘ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚನೆ ಮಾಡಿ ಅದು ಯಾವುದೇ ರೀತಿ ಕೆಲಸ ಮಾಡದಂತೆ ನೋಡಿಕೊಂಡಿದ್ದಾರೆ. ಗ್ಯಾರಂಟಿಗಳನ್ನು ಕೊಡುವ ಭರದಲ್ಲಿ ಎಲ್ಲ ಇಲಾಖೆಗಳ ಮೂಲಕ ಕರ ಮತ್ತು ಸೇವಾ ಶುಲ್ಕಗಳನ್ನು ಹತ್ತಾರು ಪಟ್ಟು ಹೆಚ್ಚಿಸಿ ಜನರ ಸುಲಿಗೆ ನಡೆಯುತ್ತಿದೆ’ ಎಂದು ರಘುಪತಿ ಭಟ್ ಆರೋಪಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮರಾಜ ಬಿಂದಲಗಿ, ತಾಲ್ಲೂಕು ಘಟಕದ ಅಧ್ಯಕ್ಷ ಗದಿಗೆಪ್ಪ ಕುಂದೂರ, ಯಲ್ಲವ್ವ ತಳವಾರ, ಗಿರಿಜಮ್ಮ ಜಮಾಜಿ, ಗೋವಿಂದಪ್ಪ ತಳವಾರ, ಯಲ್ಲಪ್ಪ ತಳವಾರ, ಮೋಟಪ್ಪ ವಾಲ್ಮೀಕಿ, ಯಲ್ಲಪ್ಪ ಹರಿಜನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.