ADVERTISEMENT

ಕೀಟನಾಶಕ ಸಿಂಪರಣೆ: ಸತ್ತುಬಿದ್ದ ರೇಷ್ಮೆ ಹುಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:21 IST
Last Updated 14 ಫೆಬ್ರುವರಿ 2026, 6:21 IST
ಸತ್ತ ರೇಷ್ಮೆ ಹುಳುಗಳನ್ನು ತೋರಿಸಿದ ರೈತ ಮಹಿಳೆ ಹನುಮವ್ವ ಹಾಗೂ ಅವರ ಮಗ
ಸತ್ತ ರೇಷ್ಮೆ ಹುಳುಗಳನ್ನು ತೋರಿಸಿದ ರೈತ ಮಹಿಳೆ ಹನುಮವ್ವ ಹಾಗೂ ಅವರ ಮಗ   

ಹಾವೇರಿ: ಜಿಲ್ಲೆಯ ಬಸನಕಟ್ಟಿ ಗ್ರಾಮದಲ್ಲಿ ಕೀಟನಾಶಕ ಸಿಂಪರಣೆ ಮಾಡಿದ್ದ ಸೊಪ್ಪು ತಿಂದು ರೇಷ್ಮೆ ಹುಳುಗಳು ಮೃತಪಟ್ಟಿದ್ದು, ‘ಇದೊಂದು ವೈಷಮ್ಯದ ದುಷ್ಕೃತ್ಯ’ ಎಂದು ರೈತ ಮಹಿಳೆ ಹನುಮವ್ವ ಪಾಟೀಲ ಆರೋಪಿಸಿದ್ದಾರೆ.

ಗ್ರಾಮದ ನಿವಾಸಿ ಹನುಮವ್ವ ಅವರು ಮಗನ ಜೊತೆ ಸೇರಿ ರೇಷ್ಮೆ ಹುಳು ಸಾಕುತ್ತಿದ್ದರು. ಉತ್ತಮ ರೀತಿಯಲ್ಲಿ ರೇಷ್ಮೆ ಹುಳುಗಳು ಬೆಳೆಯುತ್ತಿದ್ದವು. ಅವರ ಏಳಿಗೆ ಸಹಿಸದ ಕೆಲವರು, ಸೊಪ್ಪಿಗೆ ಕೀಟನಾಶಕ ಸಿಂಪರಣೆ ಮಾಡಿ ಹುಳುಗಳನ್ನು ಸಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರೇಷ್ಮೆ ಹುಳುಗಳು ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಾಲತೇಶ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೂ ದೂರು ನೀಡುವಂತೆ ರೈತ ಮಹಿಳೆಗೆ ಸೂಚಿಸಿದ್ದಾರೆ.

ADVERTISEMENT

‘ರೇಷ್ಮೆ ಹುಳು ಸಾಕಲು ಸೊಪ್ಪು ಬೆಳೆದಿದ್ದೆವು. ಇದೇ ಸೊಪ್ಪಿಗೆ ಯಾರೋ ಕೀಟನಾಶಕ ಸಿಂಪರಣೆ ಮಾಡಿದ್ದಾರೆ. ನಾವು ಎಂದಿನಂತೆ ಹುಳುಗಳಿಗೆ ಸೊಪ್ಪು ಹಾಕಿದ್ದೆವು. ಇದಾದ ಕೆಲ ಹೊತ್ತಿನಲ್ಲಿಯೇ ಎಲ್ಲ ರೇಷ್ಮೆ ಹುಳುಗಳು ಸತ್ತು ಬಿದ್ದಿವೆ. ಇದರಿಂದ ನಮಗೆ ₹ 3 ಲಕ್ಷ ನಷ್ಟವಾಗಿದೆ’ ಎಂದು ರೈತ ಮಹಿಳೆ ಹನುಮವ್ವ ಅಳಲು ತೋಡಿಕೊಂಡರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಉಪನಿರ್ದೇಶಕ ಮಾಲತೇಶ ಪಾಟೀಲ, ‘ವಿಷಯ ಗಮನಕ್ಕೆ ಬಂದಿದೆ. ತಾಲ್ಲೂಕು ಅಧಿಕಾರಿಗಳನ್ನು ರೈತರ ಬಳಿ ಕಳುಹಿಸಿ ಪರಿಶೀಲನೆ ಮಾಡಿಸಿದ್ದೇನೆ. ಅವರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ದೂರು ನೀಡಲು ಅವಕಾಶವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.