ರಟ್ಟೀಹಳ್ಳಿ: ಪಟ್ಟಣದಿಂದ ತೋಟಗಂಟಿ ಗ್ರಾಮಕ್ಕೆ ಸಂಪರ್ಕಿಸುವ ಕುಮಧ್ವತಿ ನದಿಗೆ ಅಡ್ಡಲಾಗಿ ನೂತನವಾಗಿ 2022-23ನೇ ಸಾಲಿನಲ್ಲಿ ₹ 3.82 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಾಂದಾರ ಕಂ ಸೇತುವೆ ಯಾವುದೇ ಸುರಕ್ಷತೆ ಇಲ್ಲದೆ ಅಪಾಯವನ್ನು ಅಹ್ವಾನಿಸುತ್ತಿದೆ. ಸೇತುವೆ ನಿರ್ಮಾಣಗೊಳಿಸಿದ ಸಣ್ಣ ನೀರಾವರಿ ಇಲಾಖೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಬಾಂದಾರ ನಿರ್ಮಿಸಿ ಕೈತೊಳೆದುಕೊಂಡಿರುವುದು ಕಂಡುಬರುತ್ತದೆ.
ರಟ್ಟೀಹಳ್ಳಿಯಿಂದ ತೋಟಗಂಟಿ, ಜೋಕನಾಳ, ಕಣವಿಶಿದ್ಗೇರಿ, ಗ್ರಾಮಗಳನ್ನು ಸಂಪರ್ಕಿಸುವ ಅತೀ ಸಮೀಪದ ಹಾದಿ ಇದಾಗಿದ್ದು, ಈ ಎಲ್ಲ ಗ್ರಾಮಸ್ಥರಿಗೆ ಬಹಳಷ್ಟು ಪ್ರಯೋಜನವಾಗಿದೆ. ಆದರೆ ಬಾಂದಾರ ಕಂ ಸೇತುವೆ ಯಾವುದೇ ಸುರಕ್ಷತೆ ಹೊಂದಿಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಈ ಬಾಂದಾರ ಕಂ ಸೇತುವೆ ಮೇಲೆ ನಿತ್ಯ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಗೆ ಆಗಮಿಸುತ್ತಾರೆ. ಇದೆಲ್ಲದೆ ಕಿರಿದಾದ ಈ ಬಾಂದಾರ ಮೇಲೆ ಯಾವುದೇ ಬೃಹತ್ ಗಾತ್ರದ ವಾಹನ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ನಿತ್ಯ ಇಲ್ಲಿ ನೂರಾರು ಟ್ರ್ಯಾಕ್ಟರ್, ಟಿಪ್ಪರ್, ಗೂಡ್ಸ್ ಗಾಡಿ, ಪ್ಯಾಸೆಂಜರ್ ಆಟೊ ರಿಕ್ಷಾಗಳು, ಸಂಚರಿಸುತ್ತವೆ.
ಒಂದು ವೇಳೆ ಚಾಲಕನ ನಿಯಂತ್ರಣ ಸ್ವಲ್ಪ ತಪ್ಪಿದರೂ ವಾಹನ ಕುಮದ್ವತಿಗೆ ಉರುಳಿ ಬಹುದೊಡ್ಡ ಅಪಘಾತ ಸಂಭವಿಸುವುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಎದುರು-ಬದುರಿನಿಂದ ವಾಹನಗಳು ಬಂದರೆ ಅಪಘಾತ ಸಂಭವಿಸುವುದು ಶತಸಿದ್ಧ. ಕಳೆದ 2-3 ತಿಂಗಳ ಹಿಂದೆ ಈ ಬಾಂದಾರ ಮೇಲೆ ಚಲಿಸುತ್ತಿರುವ ಟ್ರ್ಯಾಕ್ಟರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಚಾಲಕನ ಸಮೇತ ಸೇತುವೆ ಮೇಲಿಂದ ಕುಮದ್ವತಿ ನದಿಗೆ ಬಿದ್ದಿದೆ.
ಎದುರು ಬದುರಿನಿಂದ ವಾಹನ ಸಂಚರಿಸುವ ವೇಳೆ ದ್ವಿಚಕ್ರ ವಾಹನ ಒಂದು ಸೇತುವೆ ಮೇಲಿಂದ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ. ಆದರೆ ಪ್ರತಿಸಾರಿ ಇಂತಹ ಅದೃಷ್ಟ ಕೆಲಸಮಾಡಲಿಕ್ಕಿಲ್ಲ ಎನ್ನುವುದು ಜನರ ವಾದ.
ಬಳಕೆಗೆ ಹಿಂದೇಟು ಹಾಕುತ್ತಿರುವ ವಾಹನ ಸವಾರರು : ಪಟ್ಟಣದಿಂದ ತೋಟಗಂಟಿ, ಕಣವಿಶಿದ್ದಗೇರಿ, ಹಳ್ಳೂರು, ಸಂಪರ್ಕಿಸಬಹುದಾದ ಹಳೆಯದಾದ ಬೃಹತ್ ಸೇತುವೆಯೊಂದು ಸಣ್ಣಗುಬ್ಬಿ ಗ್ರಾಮದ ಬಳಿ ಇದೆ. ಆದರೆ ಅದು ಸುಮಾರು 3-4 ಕಿ.ಮೀ. ಅಂತರ ಹೆಚ್ಚಾಗುವ ಕಾರಣಕ್ಕಾಗಿ ವಾಹನ ಸವಾರರು ನೂತನವಾಗಿ ನಿರ್ಮಾಣಗೊಂಡ ಬಾಂದಾರ ಮೇಲೆಯೇ ಎಲ್ಲ ವಾಹನಗಳು ಓಡಿಸುತ್ತಿರುವುದು ಅಪಾಯಕ್ಕೆ ಹಾದಿಮಾಡಿಕೊಟ್ಟಂತಾಗಿದೆ.
ಬಾಂದಾರ ಕಂ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರ ನಿಯಂತ್ರಣಕ್ಕೆ ಕ್ರಮವಹಿಸಲು ಮತ್ತು ಕೇವಲ ಪಾದಚಾರಿ ಮತ್ತು ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕ್ರಮವಹಿಸಲಾಗುವುದುಚಿದಂಬರ ಹಾವನೂರ ಎಇಇ ಸಣ್ಣ ನೀರಾವರಿ ಇಲಾಖೆ
ಬಾಂದಾರ ಕಂ ಸೇತುವೆಯ ಅಗಲ ಕಿರಿದಾಗಿದ್ದು ಈ ಮಾರ್ಗದಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸಂಚರಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶೀಘ್ರ ಕ್ರಮವಹಿಸಬೇಕುದೇವರಾಜ ನಾಗಣ್ಣನವರ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.