
ಹಿರೇಕೆರೂರ: ಶಿಕ್ಷಣ ಇಲಾಖೆಯ ತಾಂತ್ರಾಂಶದಲ್ಲಿ ನಮ್ಮ ಊರಿನ ಶಾಲೆಗೆ ಖಾಲಿ ಇರುವ ಹುದ್ದೆಗಳನ್ನು ತೋರಿಸುತ್ತಿಲ್ಲ. ಹುದ್ದೆಗಳು ಖಾಲಿರುವುದನ್ನು ಇತರೆ ಶಿಕ್ಷಕರ ನೋಡಿ ವರ್ಗಾವಣೆ ತೆಗೆದುಕೊಂಡು ಬರುತ್ತಿದ್ದರು. ಆದರೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಮ್ಮ ಶಾಲೆಗೆ ಖಾಲಿ ಇರುವ ಶಿಕ್ಷಕರ ಹುದ್ದೆಗಳು ಭರ್ತಿ ಮಾಡುತ್ತಿಲ್ಲ ಎಂದು ಎಸ್.ಡಿ.ಎಂ.ಸಿ ಸದಸ್ಯ ಸಚಿನ ಬೂದಿಹಾಳ ಹೇಳಿದರು.
ತಾಲ್ಲೂಕಿನ ಅರಳೀಕಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಎದುರು ನೂತನವಾಗಿ ಪ್ರಾರಂಭವಾದ ಸರ್ಕಾರಿ ಪ್ರೌಢಶಾಲೆಗೆ ಕಾಯಂ ಶಿಕ್ಷಕರು ನೇಮಕಾತಿ, ಹೆಚ್ಚುವರಿಯಾಗಿ ವರ್ಗಾವಣೆಗೊಂಡ ಶಿಕ್ಷಕರನ್ನು ಮುಂದುವರೆಯುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಬೆಂಬಲದೊಂದಿಗೆ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದರು ಅವರು ಮಾತನಾಡಿದರು.
1 ರಿಂದ 9ನೇ ತರಗತಿಯವರೆಗೆ 204 ವಿದ್ಯಾರ್ಥಿಗಳ ಪೈಕಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಿದ್ದಾರೆ. ಆದರೆ ನೂತನವಾಗಿ ಮಂಜೂರಾದ ಪ್ರೌಢಶಾಲೆಗೆ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ನಿಯೋಜಿತ ವರ್ಗಾವಣೆಯಲ್ಲಿದ್ದ ಒಬ್ಬ ಶಿಕ್ಷಕರು ವರ್ಗಾವಣೆ ಆಗಿರುತ್ತದೆ. ತಾಲ್ಲೂಕಿನ ಅರಳಿಕಟ್ಟಿ ಗ್ರಾಮವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಎಲ್ಲರ ಸಹಕಾರದೊಂದಿಗೆ ಇಲ್ಲಿ 2025-26ನೇ ಸಾಲಿನಲ್ಲಿ ಉನ್ನತೀಕರಿಸಿದ ಪ್ರೌಢಶಾಲೆ ಮಂಜೂರ ಆಗಿರುತ್ತದೆ ಎಂದರು.
ಇಲ್ಲಿಯವರೆಗೂ ಈ ಶಾಲೆಗೆ ಯಾವುದೇ ಹುದ್ದೆಗಳನ್ನು ಮಂಜೂರು ಮಾಡಿರುವುದಿಲ್ಲ. ಈ ಶಾಲೆಯಲ್ಲಿ ನಿಯೋಜನೆ ಮೇರೆಗೆ ಪ್ರೌಢಶಾಲೆ ವಿಭಾಗಕ್ಕೆ ಶಿಕ್ಷಕರು ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ವರ್ಗಾವಣೆಗೊಳಿಸಲಾಗಿದೆ. ಕೆಪಿಎಸ್ ಅರೇಮಲ್ಲಾಪುರದಲ್ಲಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರು ಇರುವುದರಿಂದ ನಮ್ಮಲ್ಲಿ ಹೊಸದಾಗಿ ಪ್ರೌಢಶಾಲೆ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಪ್ರವೇಶಾತಿ ಮತ್ತು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ರಘು ಎಂ.ಎನ್. ಶಿಕ್ಷಕರನ್ನು ವರ್ಗಾವಣೆ ಮಾಡಬಾರದು. ಮಕ್ಕಳ ಶೈಕ್ಷಣಿಕ ಮತ್ತು ಪರೀಕ್ಷಾ ದೃಷ್ಟಿಯಿಂದ ಶೈಕ್ಷಣಿಕ ಅವಧಿ ಮುಗಿಯುವವರೆಗೂ ಮುಂದುವರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಊರಿನ ಗ್ರಾಮಸ್ಥರು ಬೃಹತ್ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, ಶೈಕ್ಷಣಿಕ ವರ್ಷದ ಕೊನೆಯ ಹಂತ, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಜೊತೆಗೆ ಇಲಾಖೆಯ ಅಧಿಕಾರಗಳು ಚೆಲ್ಲಾಟ ಆಡುವುದು ಸರಿಯಲ್ಲ. ವಿದ್ಯಾರ್ಥಿಗಳ ಬೇಡಿಕೆಯಾದ ಶಿಕ್ಷಕರ ವರ್ಗಾವಣೆಯ ಆದೇಶವನ್ನು ರದ್ದು ಪಡಿಸಿ ಕೂಡಲೇ ಪ್ರಸ್ತುತ ಶಿಕ್ಷಕರನ್ನು ಮುಂದುವರೆಸಬೇಕು. ಇತರೆ ಪ್ರೌಢಶಾಲಾ ಶಿಕ್ಷಕರನ್ನು ಕಾಯಂ ನೇಮಕ ಮಾಡಬೇಕು. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಒಂದು ವೇಳೆ ಅಧಿಕಾರಿಗಳು ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆಗ್ರಹಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಕಾಂತೇಶ ಮುದ್ದೆರ, ರೈತ ಮುಖಂಡ ಫಕ್ಕೀರಪ್ಪ ಸಂಗೋಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್ ಉಕ್ಕುಂದ್ರು, ಪೋಷಕರಾದ ಶಿವಾನಂದ ಮಾದರ, ರಮೇಶ ಮಾಡ್ಲೆರ, ನಾಗರಾಜ ಬಿದರಿ, ಹೇಗಪ್ಪಾ ಹದಗಲ , ಗುಡ್ಡಪ್ಪ ಕಾಸೆಂಬರ, ವಿದ್ಯಾರ್ಥಿಗಳಾದ ದಿವ್ಯಾ ಕಡೆಮನಿ, ದೀಪಾ ಅರಳಕಟ್ಟಿ, ರಮ್ಯಾ ಮುಡೇರ , ಸುಮನ ಬಾನು ಅಜೀಜ, ತಾಸಿನ ಬಾನು, ಶಿಲ್ಪಾ ಬೂದಿಹಾಳ, ಪವಿತ್ರಾ, ಕಾವ್ಯ ಗುಡ್ಡಪ್ಪ, ಅನು ರಟ್ಟಿಹಳ್ಳಿ, ವೇದ ಹುಚ್ಚಪ್ಪ, ನಿರ್ಮಲ, ರಾಘು ಎನ್., ಕಾರ್ತಿಕ್ ಬಿ., ಯಲ್ಲಪ್ಪ ಹೆಚ್ಚ, ಪೃಥ್ವಿ ಕಾಸಂಬಿ, ಪ್ರದೀಪ ಆರ್., ಶ್ರೀಧರ ಬಿ., ಸಿದ್ದು ಎಚ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.