ADVERTISEMENT

ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಗ್ಯಾರಂಟಿ ಅಲೆಯಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 13:52 IST
Last Updated 25 ಏಪ್ರಿಲ್ 2024, 13:52 IST
   

ಹಾವೇರಿ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಿಲ್ಲ. ರಾಜ್ಯದಲ್ಲಿ ಇರುವುದು ‘ಗ್ಯಾರಂಟಿ ಅಲೆ’ ಮಾತ್ರ. ಪ್ರವಾಹ, ಬರಗಾಲ ಬಂದಾಗ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಬಂದಾಗ ಓಡೋಡಿ ಬರುತ್ತಾರೆ. ಗೆಲ್ಲುವ ಅಹಂನಲ್ಲಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಶಿಗ್ಗಾವಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ನಡೆಸಿ, ಅವರು ಮಾತನಾಡಿದರು.

ಪ್ರಲ್ಹಾದ ಜೋಶಿ ಸೋಲಿಸಿ:

ಕರ್ನಾಟಕಕ್ಕೆ ಕೊಡಬೇಕಿದ್ದ ₹18 ಸಾವಿರ ಕೋಟಿ ಬರಪರಿಹಾರದಲ್ಲಿ ನಯಾಪೈಸೆಯನ್ನು ಮೋದಿ ಅವರು ಕೊಟ್ಟಿಲ್ಲ. 15ನೇ ಹಣಕಾಸು ಯೋಜನೆಯ ಅನುದಾನವನ್ನೂ ನೀಡಿಲ್ಲ. ಕರ್ನಾಟಕಕ್ಕೆ ಒಟ್ಟು ₹1.86 ಲಕ್ಷ ಕೋಟಿ ಅನ್ಯಾಯವಾಯಿತು. ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಬಿಜೆಪಿ ಸಂಸದರು ಯಾವತ್ತಾದರೂ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರಾ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡಿಸಲು ಪ್ರಯತ್ನ ಮಾಡಿದ್ದಾರಾ? ಮತ್ತೇಕೆ ಅವರನ್ನು ಗೆಲ್ಲಿಸುತ್ತೀರಾ? ಎಂದು ಸಿಎಂ ಗುಡುಗಿದರು. 

ADVERTISEMENT

ಕೇಂದ್ರದಿಂದ ಮಲತಾಯಿ ಧೋರಣೆ:

ರಾಜ್ಯದಲ್ಲಿ ಬರಗಾಲದಿಂದ 48 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ₹35 ಸಾವಿರ ಕೋಟಿ ನಷ್ಟವಾಗಿದೆ. ಎನ್‌.ಡಿ.ಆರ್‌.ಎಫ್‌ ಪ್ರಕಾರ ₹18 ಸಾವಿರ ಕೋಟಿ ಪರಿಹಾರವನ್ನು 2023ರ ಸೆಪ್ಟೆಂಬರ್‌ನಲ್ಲಿ ಕೇಳಿದ್ದೇವೆ. 6 ತಿಂಗಳಾದರೂ ನಯಾಪೈಸೆ ಕೊಟ್ಟಿಲ್ಲ. ಕೊಡದೇ ಇರುವುದು ಇದು ಮಲತಾಯಿ ಧೋರಣೆ ಅಲ್ವಾ? ಬಂಡವಾಳಶಾಹಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೋದಿಯವರಿಗೆ ಬಡವರು, ರೈತರ ಬಗ್ಗೆ ಕಾಳಜಿಯಿಲ್ಲ. ನೀವೆಲ್ಲರೂ ನಾಡಿಗೆ ಆದ ಅನ್ಯಾಯ ಖಂಡಿಸಿ, ಬಿಜೆಪಿ ಸೋಲಿಸುವುದು ನಿಮ್ಮ ಕರ್ತವ್ಯ ಎಂದು ಜನರಿಗೆ ಕರೆ ನೀಡಿದರು. ‌

ಸುಳ್ಳುಗಳ ಸರಮಾಲೆ:

ಮೋದಿಯವರು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಅಂದಿದ್ದು ಒಂದನೇ ಸುಳ್ಳು. ವರ್ಷಕ್ಕೆ ₹2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದದ್ದು 2ನೇ ಸುಳ್ಳು. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದಿದ್ದು 3ನೇ ಸುಳ್ಳು. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿ ಜನರ ಬದುಕು ದುರ್ಭರವಾಗಿರುವುದು ‘ಅಚ್ಛೇ ದಿನ’ದ ಲಕ್ಷಣವೇ? ಉದ್ಯೋಗ ನೀಡಿ ಅಂದ್ರೆ, ಪಕೋಡಾ ಮಾರಿ ಅನ್ನುವುದು ಬೇಜವಾಬ್ದಾರಿ ಅಲ್ವಾ? ಎಂದು ಸಿಎಂ ಅವರು ಮೋದಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

ನುಡಿದಂತೆ ನಡೆದಿದ್ದೇವೆ:

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಶಕ್ತಿ ಯೋಜನೆಯಡಿ 196 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಿದ್ದೇವೆ. ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮಿ ಯೋಜನೆಗಳಿಂದ ಲಕ್ಷಾಂತರ ಜನರು ಸೌಲಭ್ಯ ಪಡೆದಿದ್ದಾರೆ. ಬಸವಣ್ಣ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದೇವೆ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ಈ ಕೆಲಸ ಮಾಡಿದ್ದಾರಾ? ಅವರಿಗೆ ಮತ ಕೇಳುವ ನೈತಿಕತೆ ಇದೆಯಾ? ಎಂದು ಪ್ರಶ್ನಿಸಿದರು. 

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ಬಸವರಾಜ ಶಿವಣ್ಣನವರ, ಎನ್‌.ಎಚ್‌. ಕೋನರೆಡ್ಡಿ, ಮುಖಂಡರಾದ ಸೋಮಣ್ಣ ಬೇವಿನಮರದ, ಅಜೀಂಪೀರ್ ಖಾದ್ರಿ, ಅನಿಲ್‌ಕುಮಾರ್‌ ಪಾಟೀಲ, ಯಾಸಿರ್‌ ಖಾನ್‌ ಪಠಾಣ್‌, ಸಂಜೀವಕುಮಾರ ನೀರಲಗಿ, ರಾಜೇಶ್ವರಿ ಪಾಟೀಲ, ಅನಂತ ನಾಯಕ್‌ ಇತರರು ಇದ್ದರು. 

‘ಬಿಜೆಪಿ–ಜೆಡಿಎಸ್‌ ಅಪವಿತ್ರ ಮೈತ್ರಿ’
‘ಜಾತ್ಯತೀತ ಜನತಾದಳ ಆರಂಭವಾದ ದಿನದಿಂದಲೂ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಹೇಳುತ್ತಿದ್ದ ದೇವೇಗೌಡರು, ನರೇಂದ್ರ ಮೋದಿಯನ್ನು ವಾಚಾಮಗೋಚರವಾಗಿ ಬೈಯ್ಯುತ್ತಿದ್ದರು. ಮೋದಿ ಮತ್ತೆ ಪ್ರಧಾನಿಯಾದರೆ ದೇಶಬಿಟ್ಟು ಹೋಗ್ತೀನಿ ಅಂದಿದ್ರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಅಂತ ಹೇಳಿದ್ರು. ಈಗ ನೋಡಿದರೆ ಮೋದಿ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಇದೇನಾ ಇವರ ಜಾತ್ಯತೀತತೆ?‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜರಿದರು.  ‘ನಾವು ಖಾಲಿ ಚೆಂಬು ಜಾಹೀರಾತು ನೀಡಿದ್ದಕ್ಕೆ, ‘ಮನಮೋಹನಸಿಂಗ್ ಸರ್ಕಾರ ಮೋದಿ ಅವರಿಗೆ ಖಾಲಿ ಚೆಂಬು ಕೊಟ್ಟಿತ್ತು. ಅದನ್ನು ಮೋದಿಯವರು ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ದೇವೇಗೌಡರು ಹೊಗಳಿದ್ದಾರೆ. ಕಾಂಗ್ರೆಸ್‌ ಅನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಇಂಥವರಿಗೆ ತಕ್ಕ ಪಾಠ ಕಲಿಸಿ’ ಎಂದು ಸಿಎಂ ಹೇಳಿದರು.
‘ಸುಳ್ಳು–ಸತ್ಯದ ನಡುವೆ ಸ್ಪರ್ಧೆ’
ಈ ಚುನಾವಣೆಯಲ್ಲಿ ಸುಳ್ಳು–ಸತ್ಯದ ನಡುವೆ ಸ್ಪರ್ಧೆ ನಡೆಯುತ್ತಿದೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರೈತರ ಸಾಲ ಮನ್ನಾ ಮಾಡುತ್ತೇವೆ, ಎಂಎಸ್‌ಪಿ ಕಾನೂನು ಜಾರಿಗೊಳಿಸುತ್ತೇವೆ, ಜಾತಿ ಗಣದಿ ವರದಿ ಸ್ವೀಕರಿಸಿ ಎಲ್ಲರಿಗೂ ನ್ಯಾಯ ಕಲ್ಪಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.  ಯುವ ಸಜ್ಜನ, ಹೃದಯವಂತ ಮತ್ತು ಸಮಾಜದ ಬಗ್ಗೆ ಕಾಳಜಿ ಇರುವ ಜಾತ್ಯತೀತ ವ್ಯಕ್ತಿತ್ವದ ವಿನೋದ್ ಅಸೂಟಿಯವರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಇವರ ಗೆಲುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಸಿಎಂ ಮನವಿ ಮಾಡಿದರು. 
ಮೋದಿ ಆಡಳಿತದಲ್ಲಿ ರೈತರ ಆದಾಯ ದ್ವಿಗುಣಗೊಂಡಿಲ್ಲ. ಅಂಬಾನಿ ಆದಾಯ ₹11 ಲಕ್ಷ ಕೋಟಿಗೆ ಏರಿದೆ. ಮೋದಿಯವರೇ ಸುಳ್ಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ
– ಸಂತೋಷ ಲಾಡ್‌, ಕಾರ್ಮಿಕ ಸಚಿವ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮಗಳ ಮಧ್ಯೆ ದ್ವೇಷ ಬಿತ್ತಿ ಕೋಮುಸೌಹಾರ್ದ ಕೆಡಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಕಾಂಗ್ರೆಸ್‌ಗೆ ಬೆಂಬಲ ನೀಡಿ
– ವಿನೋದ ಅಸೂಟಿ, ಕಾಂಗ್ರೆಸ್‌ ಅಭ್ಯರ್ಥಿ
ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅಂದಾನಿ, ಅಂಬಾನಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಿಜೆಪಿಯವರ ಹೊಲಸು ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿ
– ವಿನಯ ಕುಲಕರ್ಣಿ, ಧಾರವಾಡ ಗ್ರಾಮೀಣ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.