ADVERTISEMENT

21 ಶಾಲೆಗಳಿಗೆ ‘ಉತ್ತಮ ಎಸ್‌ಡಿಎಂಸಿ’ ಪಟ್ಟ

ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಮೂರು ಶಾಲೆ ಆಯ್ಕೆ | ವಿದ್ಯಾವಾಹಿನಿ ಪೋರ್ಟಲ್ ಮೂಲಕ ಅಂಕ

ಸಂತೋಷ ಜಿಗಳಿಕೊಪ್ಪ
Published 27 ಫೆಬ್ರುವರಿ 2026, 10:08 IST
Last Updated 27 ಫೆಬ್ರುವರಿ 2026, 10:08 IST
‘ಉತ್ತಮ ಎಸ್‌ಡಿಎಂಸಿ’ ಪ್ರಶಸ್ತಿ ಆಯ್ಕೆಗೆ ಅರ್ಹವಾದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕುಮ್ಮೂರಿನ ಫಾಸಿ ಪ್ರಭಾವತಿ ಪ್ರೌಢಶಾಲೆ
‘ಉತ್ತಮ ಎಸ್‌ಡಿಎಂಸಿ’ ಪ್ರಶಸ್ತಿ ಆಯ್ಕೆಗೆ ಅರ್ಹವಾದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕುಮ್ಮೂರಿನ ಫಾಸಿ ಪ್ರಭಾವತಿ ಪ್ರೌಢಶಾಲೆ   

ಹಾವೇರಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನೀಡಲು ಉದ್ದೇಶಿಸಿರುವ 2025– 26ನೇ ಸಾಲಿನ ‘ಉತ್ತಮ ಎಸ್‌ಡಿಎಂಸಿ’ ಪ್ರಶಸ್ತಿಗೆ ಜಿಲ್ಲೆಯ 21 ಶಾಲೆಗಳನ್ನು ಆಯ್ಕೆ ಮಾಡಿ, ಇಲಾಖೆಯ ಯೋಜನಾ ನಿರ್ದೇಶಕರಿಗೆ ಪಟ್ಟಿ ರವಾನಿಸಲಾಗಿದೆ.

ಶಾಲೆಯ ಅಭಿವೃದ್ಧಿ ಉದ್ದೇಶದಿಂದ ಉತ್ತಮ ಕೆಲಸ ಮಾಡಿದ ಎಸ್‌ಡಿಎಂಸಿ (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ಸದಸ್ಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ‘ಉತ್ತಮ ಎಸ್‌ಡಿಎಂಸಿ’ ಕಾರ್ಯಕ್ರಮ ರೂಪಿಸಲಾಗಿದೆ. ಶಾಲೆಗಳ ನಿರ್ವಹಣೆ ಹಾಗೂ ಸಕಲ ಮಾಹಿತಿ ಆಧರಿಸಿ ವಿದ್ಯಾವಾಹಿನಿ ಪೋರ್ಟಲ್ ಮೂಲಕ ಅಂಕಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ಇಲಾಖೆಯ ನಿರ್ದೇಶನದಂತೆ ನಾಲ್ಕು ಹಂತಗಳ ಮೂಲಕ ಎಸ್‌ಡಿಎಂಸಿ ಪ್ರಶಸ್ತಿಗೆ 21 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ತಾಲ್ಲೂಕಿನಿಂದ ಮೂರು ಶಾಲೆಗಳನ್ನು ಪರಿಗಣಿಸಲಾಗಿದೆ. ಈ ಪಟ್ಟಿಯನ್ನು ಇಲಾಖೆಗೆ ಕಳುಹಿಸಲಾಗಿದೆ. ಇಲಾಖೆಯಿಂದಲೇ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಘೋಷಣೆಯಾಗಲಿದೆ. ನಂತರವೇ, ಪ್ರಶಸ್ತಿ ವಿಜೇತ ಎಸ್‌ಡಿಎಂಸಿಗೆ ನಗದು ಬಹುಮಾನ ಬರಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶಾಲಾ ಹಂತದಿಂದ ಪ್ರಕ್ರಿಯೆ ಆರಂಭ; ಉತ್ತಮ ಎಸ್‌ಡಿಎಂಸಿ ಆಯ್ಕೆಗೆ ಸಂಬಂಧಪಟ್ಟಂತೆ 2025ರ ನವೆಂಬರ್ 27ರಂದು ಇಲಾಖೆಯ ಯೋಜನಾ ನಿರ್ದೇಶಕರು, ಎಲ್ಲ ಜಿಲ್ಲೆಯ ಇಲಾಖೆಯ ಉಪನಿರ್ದೇಶಕರಿಗೆ ಜ್ಞಾಪನಾ ಪತ್ರ ಕಳುಹಿಸಿದ್ದರು. ಅಂದಿನಿಂದಲೇ ಪ್ರಶಸ್ತಿಗೆ ಅರ್ಹ ಎಸ್‌ಡಿಎಂಸಿ ಆಯ್ಕೆ ಪ್ರಕ್ರಿಯೆ ಶುರುವಾಗಿತ್ತು.

ಮೊದಲ ಹಂತದಲ್ಲಿ ಶಾಲಾ ಮಟ್ಟದಿಂದ ಅರ್ಹ ಶಾಲೆಗಳ ದಾಖಲಾತಿ ನೋಂದಣಿ ಆರಂಭವಾಗಿತ್ತು. ಸಂಬಂಧಪಟ್ಟ ಶಾಲೆಯ ಮುಖ್ಯಶಿಕ್ಷಕರು, ಆನ್‌ಲೈನ್‌ ಮೂಲಕ ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಬೇಕಿತ್ತು. ಪ್ರಶಸ್ತಿಗೆ ಅರ್ಹವಾದ ಮಾನದಂಡಗಳನ್ನು ನಮೂದಿಸಬೇಕಿತ್ತು. ಅದರಂತೆ ಹಲವು ಶಾಲೆಯವರು, ಪ್ರಶಸ್ತಿಗಾಗಿ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸಿದ್ದರು.

ಎರಡನೇ ಹಂತದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಪಿಆರ್‌ಪಿ, ಇಸಿಒ ಹಾಗೂ ಬಿಆರ್‌ಪಿ ಒಳಗೊಂಡ ತ್ರಿ ಸದಸ್ಯ ತಂಡದವರು ಅರ್ಹ ಶಾಲೆಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸಿದ್ದರು. ಅಂಕಗಳ ಸಮೇತ ಪೋರ್ಟಲ್‌ನಲ್ಲಿ ಅಭಿಪ್ರಾಯ ದಾಖಲಿಸಿದ್ದರು.

ಮೂರನೇ ಹಂತದಲ್ಲಿ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳನ್ನು ಒಳಗೊಂಡ ತಂಡವು, ಶಾಲೆಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಮೇತ ಅಂಕಗಳನ್ನು ಪೋರ್ಟಲ್‌ನಲ್ಲಿ ನಮೂದಿಸಿದ್ದರು.

ನಾಲ್ಕನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ನೇತೃತ್ವದ ತಂಡವು ಅರ್ಹ ಶಾಲೆಗಳಿಗೆ ಭೇಟಿ ನೀಡಿ ಅಂತಿಮ ಪರಿಶೀಲನೆ ನಡೆಸಿತು. ಹೆಚ್ಚು ಅಂಕ ಪಡೆದ 21 ಶಾಲೆಗಳನ್ನು ಆಯ್ಕೆ ಮಾಡಿ, ಅದೇ ಶಾಲೆಗಳನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದೆ.

ನಗದು ಬಹುಮಾನ: ‘ಉತ್ತಮ ಎಸ್‌ಡಿಎಂಸಿ ಪ್ರಶಸ್ತಿಯು ಮೂರು ಶಾಲೆಗಳ ವಿಭಾಗದಲ್ಲಿ ನಗದು ಬಹುಮಾನವನ್ನು ಒಳಗೊಂಡಿದೆ. ಪ್ರತಿ ತಾಲ್ಲೂಕಿನಲ್ಲಿ 1 ಪ್ರಾಥಮಿಕ ಶಾಲೆಗೆ ₹ 50,000, ಹಿರಿಯ ಪ್ರಾಥಮಿಕ ಶಾಲೆಗೆ ₹ 75,000 ಹಾಗೂ ಪ್ರೌಢಶಾಲೆಗೆ ₹ 1 ಲಕ್ಷ ಅನುದಾನದ ರೂಪದಲ್ಲಿ ಬಹುಮಾನ ಲಭ್ಯವಾಗಲಿದೆ’ ಎಂದು ಮೋಹನ ದಂಡಿನ ತಿಳಿಸಿದರು.

ಎಸ್‌ಡಿಎಂಸಿ ಸದಸ್ಯರ ಸಹಭಾಗಿತ್ವ ಸಹಕಾರ ಶಾಲೆ ಅಭಿವೃದ್ಧಿಗೆ ಕೈಗೊಂಡ ತೀರ್ಮಾನ ಶಿಕ್ಷಕರ ಜೊತೆಗಿನ ಸಮನ್ವಯತೆ ಸೇರಿ ಹಲವು ಅಂಶ ಪರಿಗಣಿಸಿ ಅಂಕಗಳ ಆಧಾರದಲ್ಲಿ ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೋಹನ, ದಂಡಿನ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ 

ಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯ: ಆರೋಪ ‘ಉತ್ತಮ ಎಸ್‌ಡಿಎಂಸಿ’ ಆಯ್ಕೆಯಲ್ಲಿ ಜಿಲ್ಲೆಯ ಹಲವು ಶಾಲೆಗಳಿಗೆ ಅನ್ಯಾಯವಾಗಿರುವ ಆರೋಪವೂ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬೈಚವಳ್ಳಿ ಸೇರಿದಂತೆ ಕೆಲ ಶಾಲೆಯ ಎಸ್‌ಡಿಎಂಸಿ ಸದಸ್ಯರು ಉಪನಿರ್ದೇಶಕರ ಎದುರು ಅಳಲು ತೋಡಿಕೊಂಡಿದ್ದಾರೆ. ‘ಶಿಕ್ಷಕರ ಜೊತೆಗೂಡಿ ಶಾಲೆಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಅನುದಾನ ಲಭ್ಯವಿಲ್ಲದಿದ್ದರೂ ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯ ಪ್ರಗತಿಗೆ ಶ್ರಮಿಸುತ್ತಿದ್ದೇವೆ. ಎಲ್ಲ ಅಂಶಗಳಲ್ಲಿಯೂ ಮುಂದಿದ್ದೇವೆ. ಆದರೆ ನಮ್ಮ ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡದಿರುವುದು ಸರಿಯಲ್ಲ’ ಎಂದು ಸದಸ್ಯರು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉಪನಿರ್ದೇಶಕ ಮೋಹನ ದಂಡಿನ ‘ತಾಲ್ಲೂಕಿಗೆ ಮೂರು ಶಾಲೆಗಳನ್ನು ಆಯ್ಕೆ ಮಾಡಲು ಅವಕಾಶವಿತ್ತು. ನಿಗದಿತ ಸಮಿತಿಯ ಸದಸ್ಯರು ಶಾಲೆ ಪರಿಶೀಲನೆ ಮಾಡಿ ಪೋರ್ಟಲ್‌ನಲ್ಲಿ ದಾಖಲಿಸಿದ ಅಂಕಗಳ ಆಧಾರದಲ್ಲಿ 21 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಪ್ರಶಸ್ತಿಗೆ ಅರ್ಹವಾದ ಇನ್ನು ಹಲವು ಶಾಲೆಗಳಿವೆ. ಮುಂಬರುವ ವರ್ಷಗಳಲ್ಲಿ ಅಂಥ ಶಾಲೆಗಳನ್ನು ಅಂಕಗಳ ಆಧಾರದಲ್ಲಿ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು’ ಎಂದರು.

ಪ್ರಶಸ್ತಿ ಆಯ್ಕೆಗೆ ಅರ್ಹವಾದ ಶಾಲೆಗಳು ಬ್ಯಾಡಗಿ: ಬೀಸಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮ್ಮೂರಿನ ಫಾಸಿ ಪ್ರಭಾವತಿ ಪ್ರೌಢಶಾಲೆ ಗುಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಹಾನಗಲ್: ಕೊಪ್ಪರಸಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡೋಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೇಷಗಿರಿ ಸರ್ಕಾರಿ ಪ್ರೌಢಶಾಲೆ. ಹಾವೇರಿ: ಗುತ್ತಲ ಅಂಬೇಡ್ಕರ್‌ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಟೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆ. ಹಿರೇಕೆರೂರು: ಕುಂಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕುಂಚೂರ ಸರ್ಕಾರಿ ಕನ್ನಡ ಪ್ರೌಢಶಾಲೆ ಹಾಡೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ. ರಾಣೆಬೆನ್ನೂರು: ಹೊನ್ನತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರನಗಿರಿಯ ಪ್ರೌಢಶಾಲೆ ಕಜ್ಜರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ. ಸವಣೂರು: ಹುರುಳಿಕುಪ್ಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಕೋಳ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚವಡಾಳದ ಸರ್ಕಾರಿ ಪ್ರೌಢಶಾಲೆ ಶಿಗ್ಗಾವಿ: ಹಿರೇಮಲ್ಲೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಾರಾಯಣಪುರದ ಕರ್ನಾಟಕ ಪಬ್ಲಿಕ್ ಶಾಲೆ ತಿಮ್ಮಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.