ಹಾವೇರಿ: ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59,507 ಟನ್ ಯೂರಿಯಾ ಗೊಬ್ಬರ ಸರಬರಾಜಾಗಿದೆ. ಅಷ್ಟಾದರೂ ಗೊಬ್ಬರಕ್ಕಾಗಿ ರೈತರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಹೆಚ್ಚುವರಿಯಾಗಿ 8 ಸಾವಿರ ಟನ್ ಯೂರಿಯಾ ಗೊಬ್ಬರ ಪೂರೈಸುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಹೀಗಾಗಿ, ಯೂರಿಯಾ ಗೊಬ್ಬರ ಖರೀದಿಗೆ ರೈತರು ಮುಂದಾಗಿದ್ದಾರೆ’ ಎಂದರು.
‘ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 66,629 ಟನ್ ಯೂರಿಯಾ ಹಂಚಿಕೆಯಾಗಿದೆ. ಈಗಾಗಲೇ 59,507 ಟನ್ ಯೂರಿಯಾ ಬಂದಿದೆ. ಗೊಬ್ಬರ ಅಭಾವವಾಗುವ ಭಯದಲ್ಲಿ ರೈತರು, ಸೊಸೈಟಿ ಹಾಗೂ ಇತರೆಡೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಕೆಲವರು, ಮುಂಗಡವಾಗಿ ಗೊಬ್ಬರ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ರೈತರು ಆತಂಕಪಡುವ ಅಗತ್ಯವಿಲ್ಲ. ಮುಂಬರುವ ದಿನಗಳಲ್ಲಿ ಮತ್ತೆ ದಾಸ್ತಾನು ಬರಲಿದೆ. ಎಲ್ಲರಿಗೂ ಯೂರಿಯಾ ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.
‘ಮಳೆ ಸುರಿಯುವ ಸಂದರ್ಭದಲ್ಲಿ ಯೂರಿಯಾ ಬಳಸಿದರೆ, ಬೆಳೆಗಳಿಗೆ ಶೇ 30ರಷ್ಟು ಮಾತ್ರ ತಲುಪುತ್ತದೆ. ಉಳಿದ ಗೊಬ್ಬರ, ನೀರು ಪಾಲಾಗುತ್ತದೆ. ಇದರ ಬದಲು ನ್ಯಾನೊ ಯೂರಿಯಾವನ್ನು ಬೆಳೆಯ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು. ಬೆಳೆಗಳಿಗೆ ಶೇ 80ರಷ್ಟು ಗೊಬ್ಬರ ತಲುಪುತ್ತದೆ. ಜಿಲ್ಲೆಯಲ್ಲಿ 2 ಲಕ್ಷ ಲೀಟರ್ ನ್ಯಾಯೊ ಯೂರಿಯಾ ಲಭ್ಯವಿದೆ’ ಎಂದು ತಿಳಿಸಿದರು.
ಮೆಕ್ಕೆಜೋಳ, 28 ಸಾವಿರ ಹೆಕ್ಟೇರ್ ಹೆಚ್ಚಳ:
‘2.06 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯುವ ಗುರಿಯಿತ್ತು. ಆದರೆ, 2.48 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಕಳೆದ ವರ್ಷದಿಂದ ಈ ವರ್ಷ 28 ಸಾವಿರ ಹೆಕ್ಟೇರ್‌ನಲ್ಲಿ ಹೆಚ್ಚುವರಿಯಾಗಿ ಮೆಕ್ಕೆಜೋಳವಿದೆ. ಇದೇ ಕಾರಣಕ್ಕೆ ರೈತರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚುವರಿ ಬೇಡಿಕೆ ಬಂದಿದೆ. ಶೇಂಗಾ, ಹತ್ತಿ ಬೆಳೆ ಪ್ರದೇಶ ತೀರಾ ಕಡಿಮೆಯಾಗಿದೆ’ ಎಂದು ಹೇಳಿದರು.
ಕಳಪೆ ಬೀಜ, 639 ರೈತರಿಂದ ಅರ್ಜಿ:
‘ರೈತರಿಗೆ ಕಳಪೆ ಬೀಜ ಮಾರಿದ್ದ ರಾಣೆಬೆನ್ನೂರಿನ ನಿಸರ್ಗ ಸೀಡ್ಸ್ ಕಂಪನಿ, ಸೂರ್ಯೋದಯ ಸೀಡ್ಸ್, ಪ್ರಕಾಶ ಹೈಬ್ರೀಡ್ ಸೀಡ್ಸ್, ನಂದಿ ಸೀಡ್ಸ್, ಕೆ.ಬಿ. ಸೀಡ್ಸ್, ಮಣಿಕಂಠ ಸೀಡ್ಸ್, ಗುರು ಹೈಬ್ರೀಡ್ ಸೀಡ್ಸ್, ಗುರುಶಾಂತೇಶ್ವರ ಅಗ್ರೊ ಸೆಂಟರ್ ಹಾಗೂ ಮಂಗಳಾ ಸೀಡ್ಸ್ ಮಳಿಗೆ ವಿರುದ್ಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದೆ. ಈ ಬೀಜ ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ 639 ರೈತರು ಅರ್ಜಿ ಸಲ್ಲಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಹಾವೇರಿ ಜಿಲ್ಲೆಯ 337, ವಿಜಯನಗರ–62, ಬಳ್ಳಾರಿ–79, ಚಿತ್ರದುರ್ಗ–40, ಗದಗ–77, ದಾವಣಗೆರೆ–43, ಧಾರವಾಡ–1 ಅರ್ಜಿ ಬಂದಿದೆ. ಈ ರೈತರು, ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅವಕಾಶವಿದೆ. ನಮ್ಮ ಹಂತದಲ್ಲೂ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.
‘ಕಳಪೆ 17:17:17 ಗೊಬ್ಬರಕ್ಕೆ ಸಂಬಂಧಪಟ್ಟಂತೆ ರಾಣೆಬೆನ್ನೂರಿನ ಸ್ವಸ್ತಿಕ್ ಅಗ್ರೊ ಸೆಂಟರ್ ಹಾಗೂ ಬನಶಂಕರಿ ಅಗ್ರೊ ಟ್ರೇಡರ್ಸ್ ವಿರುದ್ಧ ಕ್ರಮ ಜರುಗಿಸಲಾಗಿದ್ದು, 153 ಚೀಲ ಗೊಬ್ಬರ ಜಪ್ತಿ ಮಾಡಲಾಗಿದೆ. ಗೊಬ್ಬರ ತಯಾರಕರಾದ ವಿನಾಯಕ ಅಗ್ರೊ ಇಂಡಸ್ಟ್ರೀಜ್ ವಿರುದ್ಧ ಕ್ರಮಕ್ಕಾಗಿ ಕೊಪ್ಪಳ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದರು.
‘ಹಾನಗಲ್ ತಾಲ್ಲೂಕಿನ ಮಾಸನಕಟ್ಟಿಯ ಹೊನ್ನಮ್ಮದೇವಿ ಟ್ರೇಡರ್ಸ್ ಮತ್ತು ಉಳವಿ ಚನ್ನಬಸವೇಶ್ವರ ಟ್ರೇಡಿಂಗ್ ಕಂಪನಿ ಮಳಿಗೆಯಲ್ಲಿ ಕಳಪೆ ಡಿಎಪಿ ಗೊಬ್ಬರ ಮಾರಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿದೆ’ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಇದ್ದರು.
ಗೊಬ್ಬರ ಜೊತೆ ಲಿಂಕ್ ಖರೀದಿ ಕಡ್ಡಾಯವಲ್ಲ. ಲಿಂಕ್ ಖರೀದಿಸಿದರಷ್ಟೇ ಗೊಬ್ಬರ ಕೊಡುವುದಾಗಿ ಯಾರಾದರೂ ಒತ್ತಡ ಹಾಕಿದರೆ ನನಗೆ ದೂರು ನೀಡಬಹುದುವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಅಧಿಕಾರಿಗಳ ವರ್ತನೆ: ಡಿ.ಸಿ. ಅಸಮಾಧಾನ:
‘ಜಿಲ್ಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಬಗ್ಗೆ ನನಗೂ ಅಸಮಾಧಾನವಿದೆ. ಚುರುಕಿನಿಂದ ಕೆಲಸ ಮಾಡುವಂತೆ ಅವರಿಗೆ ಈಗಾಗಲೇ ಖಡಕ್ ಸೂಚನೆ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹೇಳಿದರು. ‘ಮೋಟೆಬೆನ್ನೂರಿನಲ್ಲಿ ಈಚೆಗೆ ಯೂರಿಯಾ ಗೊಬ್ಬರ ಅಭಾವದ ಬಗ್ಗೆ ಮಾಹಿತಿ ಬಂದಿತ್ತು. ನಾನೇ ಮೊದಲಿಗೆ ಸ್ಥಳಕ್ಕೆ ಹೋಗಿದ್ದೆ. ಕೃಷಿ ಇಲಾಖೆಯ ಯಾರೊಬ್ಬರೂ ಬಂದಿರಲಿಲ್ಲ. ಜಿಲ್ಲೆಯಲ್ಲಿ ಏನೇ ಸಮಸ್ಯೆಯಾದರೂ ಅದು ಅಧಿಕಾರಿಗಳ ಮೂಲಕ ನನಗೆ ಗೊತ್ತಾಗಬೇಕು. ಆದರೆ ಇಲ್ಲಿ ಜನರಿಂದ ಸಮಸ್ಯೆ ಗೊತ್ತಾಗುತ್ತಿದೆ. ಈ ವಿಷಯದಲ್ಲಿ ಅಸಮಾಧಾನವಿದೆ. ಮುಂಬರುವ ದಿನಗಳಲ್ಲಿ ತ್ವರಿತವಾಗಿ ಸಮಸ್ಯೆ ತಿಳಿದುಕೊಂಡು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ತಾಕೀತು ಮಾಡಿದ್ದೇನೆ’ ಎಂದು ತಿಳಿಸಿದರು. ‘ಜಿಲ್ಲೆಯಲ್ಲಿ ಕಳಪೆ ಗೊಬ್ಬರ ಕಳಪೆ ಬೀಜ ಪ್ರಕರಣ ಹೆಚ್ಚಾಗಿದೆ. ಇಲಾಖೆಯ ವಿಚಕ್ಷಣಾ ದಳ ಏನು ಮಾಡುತ್ತಿದೆ?’ ಎಂಬ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಅಧಿಕಾರಿಗಳನ್ನು ತಮ್ಮ ಬಳಿ ಕರೆದ ಜಿಲ್ಲಾಧಿಕಾರಿ ‘ನೀವು ಏನು ಮಾಡಿದ್ದೀರಾ ಹೇಳ್ರಿ’ ಎಂದರು. ಕೆಲ ಮಳಿಗೆಗಳ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ ನಂತರ ಮೌನವಾದರು. ಮಾತು ಮುಂದುವರಿಸಿದ ಜಿಲ್ಲಾಧಿಕಾರಿ ‘ಚುರುಕಿನಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ತಿಳಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.