ADVERTISEMENT

ಹುಬ್ಬಳ್ಳಿ: 4 ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಬಡವರ ಹಸಿವು ನೀಗಿಸುವ ಯೋಜನೆ: ಆರ್‌.ವಿ. ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 11:21 IST
Last Updated 17 ನವೆಂಬರ್ 2018, 11:21 IST
ಉಣಕಲ್ ಉದ್ಯಾನದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವ ಆರ್‌.ವಿ. ದೇಶಪಾಂಡೆ ಗ್ರಾಹಕರಿಗೆ ಉಪಹಾರ ನೀಡಿದರು. ಮೇಯರ್ ಸುಧೀರ್ ಸರಾಫ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಜಗದೀಶ ಶೆಟ್ಟರ್, ಇದ್ದಾರೆ– ಪ್ರಜಾವಾಣಿ ಚಿತ್ರ
ಉಣಕಲ್ ಉದ್ಯಾನದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಚಿವ ಆರ್‌.ವಿ. ದೇಶಪಾಂಡೆ ಗ್ರಾಹಕರಿಗೆ ಉಪಹಾರ ನೀಡಿದರು. ಮೇಯರ್ ಸುಧೀರ್ ಸರಾಫ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಜಗದೀಶ ಶೆಟ್ಟರ್, ಇದ್ದಾರೆ– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದ ಉಣಕಲ್ ಕೆರೆ ಉದ್ಯಾನ, ಹೊಸ ಬಸ್ ನಿಲ್ದಾಣದ ಪಕ್ಕ, ಬೆಂಗೇರಿ ಸಂತೆ ಮೈದಾನ ಮತ್ತು ಕಿಮ್ಸ್‌ ಆವರಣದ ಇಂದಿರಾ ಕ್ಯಾಂಟೀನ್‌ಗಳನ್ನು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಶನಿವಾರ ಉದ್ಘಾಟಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರೈತರು ಮತ್ತು ಬಡವರ ಪಾಲಿನ ತಾಯಿಯಂತಿದ್ದರು. ಅವರ ಸ್ಮರಣಾರ್ಥ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳನ್ನು ರಾಜ್ಯದ ನಗರ ಮತ್ತು ಪಟ್ಟಣಗಳಲ್ಲಿ ಆರಂಭಿಸಲಾಗಿದೆ. ಒಟ್ಟು 419 ಕ್ಯಾಂಟೀನ್‌ಗಳು ಈಗಾಗಲೇ ಆರಂಭವಾಗಿವೆ. ಕೇವಲ ₹5ಕ್ಕೆ ಉಪಹಾರ ಮತ್ತು ₹10ಕ್ಕೆ ಊಟ ನೀಡುವುದರಿಂದ ಕೂಲಿ ಮಾಡುವವರು, ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ದೇಶಪಾಂಡೆ ಹೇಳಿದರು.

₹25 ಪಾವತಿಸಿ ಮೂರು ಹೊತ್ತು ಊಟ ಮಾಡಬಹುದು. ಪ್ರತಿ ವ್ಯಕ್ತಿಗೆ ಉಪಹಾರ ಹಾಗೂ ಎರಡು ಊಟ ನೀಡಲು ₹57 ಖರ್ಚಾಗುತ್ತದೆ. ಸರ್ಕಾರ ₹30 ಸಬ್ಸಿಡಿ ನೀಡುತ್ತಿದೆ. ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯ ಕ್ಯಾಂಟೀನ್ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕ್ಯಾಂಟೀನ್‌ಗಳ ಶೇ70ರಷ್ಟು ಸಬ್ಸಿಡಿಯನ್ನು ಪಾಲಿಕೆಗಳೇ ಭರಿಸಬೇಕು. ಜನರ ಹಿತಕ್ಕಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ವೃದ್ಧಾಪ್ಯ, ವಿಧವಾ ವೇತನ ನೀಡುವ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಸಂಸದ ಪ್ರಹ್ಲಾದ ಜೋಷಿ, ಶಾಸಕರಾದ ಸಿ.ಎಸ್.ಶಿವಳ್ಳಿ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮೇಯರ್ ಸುಧೀರ್ ಸರಾಫ್, ಉಪ ಮೇಯರ್ ಮೇನಕಾ ಹುರಳಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ರಾಜಣ್ಣ ಕೊರವಿ, ಉಮೇಶ ಕೌಜಗೇರಿ, ನಜೀರ್ ಹೊನ್ಯಾಳ, ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರಪಾಲಿಕೆ ಆಯುಕ್ತ ಶಕೀಲ್ ಅಹಮ್ಮದ್‌, ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಮಹಾನಗರಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ತಹಶೀಲ್ದಾರ ಶಶಿಧರ ಮಾಡ್ಯಾಳ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಮುಖಂಡರಾದ ಸದಾನಂದ ಡಂಗನವರ, ಮೋಹನ ಅಸುಂಡಿ, ಅನಿಲಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.