ಚಂದ್ರಕಾಂತ, ಸಮೀರ್, ವಿಶಾಲ
ಕಮಲಾಪುರ (ಕಲಬುರಗಿ ಜಿಲ್ಲೆ): ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಸಮೀಪದ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಬೈಕ್ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಿಣ್ಣಿ ಸಡಕ್ ಗ್ರಾಮದ ಸಮೀರ್ ಜಮೀರ್ ಸಾಬ್ (22), ವಿಶಾಲ ಸಂಜಯಕುಮಾರ ಜಾಧವ (20) ಮತ್ತು ಚಂದ್ರಕಾಂತ ನಿಂಗಪ್ಪ ಹೊಳಕುಂದಿ (23) ಮೃತ ಯುವಕರು. ಈ ಮೂವರು ಸೇರಿ ಬೈಕ್ ಮೇಲೆ ಕಮಲಾಪುರಕ್ಕೆ ಬರುತ್ತಿದ್ದರು.
ಕಲಬುರಗಿಯಿಂದ ಹುಮನಾಬಾದ್‌ಗೆ ತೆರಳುತ್ತಿದ್ದ ವಿಜಯಪುರ-ಬಸವಕಲ್ಯಾಣ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಕಾಂತ ಅವರು ಇತ್ತೀಚೆಗೆ ಎಲ್ ಅಂಡ್ ಟಿ ಫೈನಾನ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಮೇ 28ರಂದು ಹುಬ್ಬಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನಕ್ಕೆ ತೆರಳುತ್ತಿದ್ದರು. ಸ್ನೇಹಿತರಾದ ಸಮೀರ್ ಹಾಗೂ ವಿಶಾಲ ಸೇರಿ ಚಂದ್ರಕಾಂತನನ್ನು ಕಮಲಾಪುರವರೆಗೆ ಬಿಟ್ಟುಬರಲು ಬೈಕ್ ಮೇಲೆ ಹೊರಟಿದ್ದರು. ಎದುರಿಗೆ ಬಂದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವಗಳನ್ನು ಸಾಗಿಸಲಾಗಿದೆ. ಕಮಲಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.