
ಅಫಜಲಪುರ: ಪಟ್ಟಣದ ಪುರಸಭೆಯವರು ಕೆಲವು ವಾರ್ಡ್‌ಗಳಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡದ ಕಾರಣ ಅಲ್ಲಲ್ಲಿ ತ್ಯಾಜ್ಯ ಹಾಗೆ ಬಿದ್ದಿರುವುದರಿಂದ ಜನರಲ್ಲಿ ರೋಗ ಹರಡುವ ಭೀತಿ ಉಂಟಾಗಿದ್ದು, ಒಳ್ಳೆಯ ಪರಿಸರಕ್ಕಾಗಿ ಪರದಾಡುವಂತಾಗಿದೆ.
ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಿಂಭಾಗದಲ್ಲಿರುವ ಒಡೆಯರ ಲೇಔಟ್‌ನಲ್ಲಿರುವ ಖಾಲಿ ನಿವೇಶನದಲ್ಲಿ ತ್ಯಾಜ್ಯದ ರಾಶಿಯಿಂದಾಗಿ ಗಬ್ಬು ನಾರುತ್ತಿದೆ. ಪುರಸಭೆಯವರು ಪ್ಲಾಸ್ಟಿಕ್ ಬಳಕೆ ಅಪಾಯಕಾರಿಯಂದು ಜಾಗೃತಿ ಮೂಡಿಸಿದರು ಪ್ಲಾಸ್ಟಿಕ್ ಬಳಕೆ ಅವ್ಯಹತವಾಗಿ ನಡೆಯುತ್ತಿದೆ.
ಇನ್ನೊಂದೆಡೆ ಮಧ್ಯಾಹ್ನದ ಊಟಕ್ಕೆ ಪುರಸಭೆಯ ಸಿಬ್ಬಂದಿ ಪ್ಲಾಸ್ಟಿಕ್ ಚೀಲಗಳಲ್ಲಿ ತಿಂಡಿ ಹಾಗೂ ಉಪಹಾರ ತರುತ್ತಾರೆ. ಹೀಗಾಗಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವವರೇ ಸ್ವತಃ ಪ್ಲಾಸ್ಟಿಕ್ ಬಳಸುವುದು ಎಷ್ಟು ಸರಿ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಸಂಗ್ರಹವಾಗಿರುವ ತ್ಯಾಜ್ಯದ ರಾಶಿಯ ಹತ್ತಿರವೇ ಸರ್ಕಾರಿ ಆಯುರ್ವೇದ ಆಸ್ಪತ್ರೆ ಇದ್ದು, ರೋಗಿಗಳು ದಿನಾಲು ಕೆಟ್ಟ ಪರಿಸರದಲ್ಲಿಯೇ ಕಾಲ ಕಳಿಯುವಂತಾಗಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಇದರಿಂದ ಡೆಂಗ್ಯೂ, ಮಲೇರಿಯಾ ಹರಡುವ ಸಾಧ್ಯತೆ ಇದ್ದು, ಸ್ಥಳೀಯರು ರೋಗಭೀತಿಯಲ್ಲೇ ಜೀವಿಸುವಂತಾಗಿದೆ.
ಪಟ್ಟಣದ ಜನಸಂಖ್ಯೆ ಎರಡು ಪಟ್ಟು ಹೆಚ್ಚಳವಾಗಿದ್ದು, ಹಾಗಾಗಿ ತ್ಯಾಜ್ಯ ವಿಲೇವಾರಿಗೆ ವಾಹನಗಳು ಮತ್ತು ಪೌರಕಾರ್ಮಿಕರ ಸಂಖ್ಯೆಯು ಹೆಚ್ಚಳವಾಗಬೇಕು. ಪಟ್ಟಣದ 23 ವಾರ್ಡ್‌ಗಳಲ್ಲಿ ದಿನಾಲು 41 ಪೌರಕಾರ್ಮಿಕರು ಮತ್ತು 14 ಕಸ ವಿಲೇವಾರಿ ವಾಹನಗಳು ಕೆಲಸ ಮಾಡುತ್ತಿವೆ ಎಂದು ತಾಲೂಕು ಪೌರಸೇವಾ ನೌಕರ ಸಂಘದ ಅಧ್ಯಕ್ಷ ಸಂತೋಷ್ ಚಲವಾದಿ ಹೇಳುತ್ತಾರೆ.
ಘನತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ ಅದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಪುರಸಭೆಯಲ್ಲಿ ಸಾಕಷ್ಟು ಜನ ಪೌರಕಾರ್ಮಿಕರು ಇದ್ದರು ಸಹ ಸಕಾಲಕ್ಕೆ ತ್ಯಾಜ್ಯದ ವಿಲೇವಾರಿಯಾಗುತ್ತಿಲ್ಲ ಹೀಗಾಗಿ ಜನರಿಗೆ ರೋಗರೋಜಿಗಳು ಬರುತ್ತೇವೆ ಇದಕ್ಕೆಲ್ಲ ಮುಖ್ಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವೆನ್ನುತ್ತಾರೆ ಪುರಸಭೆಯ ಮಾಜಿ ಸದಸ್ಯರೊಬ್ಬರು.
ತ್ಯಾಜ್ಯ ವಸ್ತುಗಳು ಸರಿಯಾಗಿ ಶೇಖರಣೆ ಸಂಸ್ಕರಣೆ ಮತ್ತು ನಿರ್ವಹಣೆಯಾಗದಿದ್ದಲ್ಲಿ ರೋಗಗಳು ಉತ್ಪತ್ತಿಯಾಗುವುದಲ್ಲದೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ–ಸುರೇಶ್ ಅವಟೆ, ತಾಲ್ಲೂಕು ವಕೀಲರ ಸಂಘದ ಸದಸ್ಯರು
ಪಟ್ಟಣದ ಹೊರವಲಯದ ತ್ಯಾಜ್ಯ ಸಂಗ್ರ ಘಟಕಕ್ಕೆ ತ್ಯಾಜ್ಯ ವಸ್ತುಗಳನ್ನು ಸಾಗಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು–ಸಂತೋಷ ಚಲವಾದಿ, ಪೌರಸೇವಾ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ
ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಲ್ಲಿ ತ್ಯಾಜ್ಯ ವಸ್ತು ಸಂಗ್ರಹವಾದಂತೆ ನೋಡಿಕೊಳ್ಳಲಾಗುವುದು ಮತ್ತು ಈ ಕುರಿತು ಕಿರಿಯ ಆರೋಗ್ಯ ನಿರೀಕ್ಷಕರಿಗೆ ವಿಷಯ ತಿಳಿಸಿ ರಸ್ತೆಯಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಲಾಗುವುದು. ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಹತ್ತಿರದಲ್ಲಿ ಹಾಕಲಾಗಿರುವ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸಲಾಗುವುದು–ಫಕ್ರುದ್ದಿನ್ ಸಾಬ್, ಮುಖ್ಯ ಅಧಿಕಾರಿ ಅಫಜಲಪುರ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.