ADVERTISEMENT

ಬಿಜೆಪಿಯಿಂದ ಸಂವಿಧಾನಕ್ಕೆ ಚ್ಯುತಿ ತರುವ ಯತ್ನ: ಮಲ್ಲಿಕಾರ್ಜುನ ಖರ್ಗೆ

‘ಶ್ರೀಗಳಿಗೆ ಭಾರತ ರತ್ನ ನೀಡದಿರುವುದು ನೋವಿನ ಸಂಗತಿ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 11:29 IST
Last Updated 26 ಜನವರಿ 2019, 11:29 IST
   

ಕಲಬುರ್ಗಿ: ಜಗತ್ತಿನಲ್ಲಿ ಬರವಣಿಗೆಯಲ್ಲಿರುವ ಸಂವಿಧಾನ ಎಲ್ಲಿಯೂ ಇಲ್ಲ. ನಮ್ಮ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ. ಆದರೆ, ಬಿಜೆಪಿಯವರು ಸಂವಿಧಾನಕ್ಕೆ ಚ್ಯುತಿ ತರುವ ಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ಇರದೇ ಇರುವ ಅಂಶಗಳನ್ನು ತಗೆದುಕೊಂಡು ಕಾನೂನು ಜಾರಿಗೊಳಿಸುವ ಯತ್ನ ನಡೆದಿದೆ. ಆರ್ ಎಸ್ ಎಸ್ ತನ್ನ ತತ್ವವನ್ನು ಪ್ರಧಾನಿ ನರೇಂದ್ರ ಮೋದಿ ಮೂಲಕ ದೇಶದಲ್ಲಿ ಜಾರಿಗೊಳಿಸುವ ಯತ್ನ ಮಾಡುತ್ತಿದೆ ಎಂದುಕೇಂದ್ರ ಸರ್ಕಾರದ ವಿರುದ್ಧ‌ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರಕ್ಕೆ ಬುದ್ಧಿ ಬರಲಿ, ಸಂವಿಧಾನ ಪ್ರಕಾರ ನಡೆದುಕೊಳ್ಳಲಿ ಎಂದು ಸಲಹೆ ನೀಡಿದರು.

ADVERTISEMENT

‘ಶ್ರೀಗಳಿಗೆ ಭಾರತ ರತ್ನ ನೀಡದಿರುವುದುನೋವಿನ ಸಂಗತಿ’

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಭಾರತ ರತ್ನ ನೀಡಬೇಕು ಎಂದು ನಾವು ಕೇಳಿದ್ದೆವು. ಆದರೆ, ಬಿಜೆಪಿ ಸರ್ಕಾರ ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೂರು ಜನ ಗಣ್ಯರಿಗೆ ಭಾರತ ರತ್ನ ನೀಡಲಾಗಿದೆ. ಆದರೆ, ಶಿಕ್ಷಣ ಮತ್ತು ದಾಸೋಹ ಮಾಡಿದ ಶ್ರೀಗಳಿಗೆ ನೀಡಿಲ್ಲ. ಗಾಯಕರಿಗೆ, ಆರ್ ಎಸ್ ಎಸ್ ನವರಿಗೆ ನೀಡಿದ್ದಾರೆ ಎಂದು ಹೇಳಿದರು.

ತಮಗೆ ಬೇಕಾದ ಕೆಲವರಿಗೆ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶ್ತಿಗಳನ್ನು ನೀಡಿದ್ದಾರೆ. ಇನ್ನೂ ಸಾಕಷ್ಟು ಜನ ಅರ್ಹರಿದ್ದರೂ ಅವರಿಗೆ ನೀಡಿಲ್ಲ ಎಂದರು.

ಮೋದಿ ಗ್ರಾಫ್ ಇಳಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಗ್ರಾಫ್ ಇಳಿಕೆಯಾಗಿದೆ. ಜನ ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ. ಮಾರ್ಕೆಟಿಂಗ್ ಮಾಡಿ ಮೋದಿಯನ್ನು ಗದ್ದುಗೆ ಮೇಲೆ ಕೂರಿಸಿದ್ದರು. ಈಗ ದೇಶದ ಜನತೆ ಎಚ್ಚೆತ್ತುಕೊಂಡಿದ್ದು, ಸರ್ಕಾರ ಬದಲಾವಣೆಯ ಪಣ ತೊಟ್ಟಿದ್ದಾರೆ. ಹೀಗಾಗಿ ಈ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ಪ್ರಿಯಾಂಕಾರಿಂದ ಹುಮ್ಮಸ್ಸು

ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ. ಇದರಿಂದ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಪ್ರಿಯಾಂಕಾ ರಾಜಕೀಯ ಪ್ರವೇಶದಿಂದ ಬಿಜೆಪಿಯವರಿಗೆ ಭಯ ಪ್ರಾರಂಭವಾಗಿದೆ ಎಂದರಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.