ADVERTISEMENT

ಸಾಂಸ್ಕೃತಿಕ ಉದ್ಯಮಶೀಲತೆ ಗಟ್ಟಿಯಾಗಲಿ: ರಹಮತ್‌ ತರಿಕೆರೆ

ಸಿದ್ಧಲಿಂಗೇಶ್ವರ ಪ್ರಕಾಶನ ಹೊರತಂದ 105 ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ರಹಮತ್‌ ತರಿಕೆರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 15:30 IST
Last Updated 7 ಫೆಬ್ರುವರಿ 2021, 15:30 IST
ಕಲಬುರ್ಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹೊರತಂದ 105 ಕೃತಿಗಳನ್ನು ಪ್ರೊ.ರಹಮತ್‌ ತರಿಕೆರೆ ಅವರು ಭಾನುವಾರ ಏಕಕಾಲಕ್ಕೆ ಲೋಕಾರ್ಪಣೆ ಮಾಡಿದರು
ಕಲಬುರ್ಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹೊರತಂದ 105 ಕೃತಿಗಳನ್ನು ಪ್ರೊ.ರಹಮತ್‌ ತರಿಕೆರೆ ಅವರು ಭಾನುವಾರ ಏಕಕಾಲಕ್ಕೆ ಲೋಕಾರ್ಪಣೆ ಮಾಡಿದರು   

ಕಲಬುರ್ಗಿ: ‘ಯಾವುದೇ ನಾಡು ನೆಮ್ಮದಿಯ ನೆಲೆ ಆಗಬೇಕಾದರೆ ಅಲ್ಲಿನ ಸಾಂಸ್ಕೃತಿಕ ಉದ್ಯಮಶೀಲತೆ ಗಟ್ಟಿಯಾಗಿರಬೇಕು. ಮಾರುಕಟ್ಟೆ ವ್ಯವಹಾರ ಸಹಜವಾಗಿ ನಡೆದೇ ತೀರುತ್ತದೆ. ಆದರೆ, ಸಾಂಸ್ಕೃತಿಕ ಹಾಗೂ ಸಾಹಿತ್ಯದ ಕ್ಷೇತ್ರದ ಆರೋಗ್ಯ ಕಾಪಾಡುವ ಜವಾಬ್ದಾರಿಯೇ ಬಹಳ ದೊಡ್ಡದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಹಮತ್‌ ತರಿಕೆರೆ ಅಭಿಪ್ರಾಯಪಟ್ಟರು.

ಇಲ್ಲಿನ ಸಿದ್ಧಲಿಂಗೇಶ್ವರ ಬುಕ್‌ ಡಿಪೊ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಬಸವ ಪ್ರಕಾಶನ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ 105 ಪುಸ್ತಕಗಳ ಲೋಕಾರ್ಪಣೆ ಹಾಗೂ 44ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶರಣ ಸಾಹಿತ್ಯ, ಜನಪದ, ತತ್ವಪದ, ಆಧುನಿಕ ಸಾಹಿತ್ಯ, ಕೀರ್ತನೆ ಸೂಫಿ... ಹೀಗೆ ಆರು ಆಯಾಮಗಳಲ್ಲಿ ಕಲ್ಯಾಣ ಕರ್ನಾಟಕ ಭಾಗ ಶ್ರೀಮಂತ ನಾಡು. ಇದೊಂದು ಪ್ರಯೋಗಶೀಲ ಭೂಮಿ. ಇಡೀ ರಾಜ್ಯಕ್ಕೆ ಯಾವಾಗ ಗಂಡಾಂತರಗಳು ಕಾಣಿಸಿಕೊಂಡಿವೆಯೋ ಆಗ ಎಲ್ಲರೂ ನೆನಪಿಸಿಕೊಳ್ಳುವುದು ಕಲ್ಯಾಣ ನಾಡನ್ನೇ. ಇಂಥ ಸಾಂಸ್ಕೃತಿಕ ಸಿರಿ ಕಾಪಾಡುವಲ್ಲಿ ಪ್ರಕಾಶನ ಸಂಸ್ಥೆಗಳ ಪಾಲೂ ಇದೆ’ ಎಂದರು.

ADVERTISEMENT

‘ದೇಶ ಏನು ಬೇಕಾದರೂ ಆಗಲಿ ನನ್ನ ವ್ಯಾಪಾರ ನಡೆದರೆ ಸಾಕು ಎನ್ನುವುದು ಸರಿಯಲ್ಲ. ಅಭಿವೃದ್ಧಿಯ ಹುಚ್ಚು ಸೈದ್ಧಾಂತಿಕ ಜವಾಬ್ದಾರಿಯಿಂದ ನುಣುಚಿಕೊಂಡಾಗ ಇಂಥ ಲಕ್ಷಣಗಳು ಕಾಣಿಸುತ್ತವೆ. ನಾವೀಗ ಬರೆಯಬೇಕಾದದ್ದು ರಾಜ, ರಾಜಕಾರಣಿಯ ಬಗ್ಗೆ ಅಲ್ಲ. ನಾಡು ಕಟ್ಟಿದವರು, ಬೆಳೆಸಿದವರು, ಸಮಾಜದ ಅಂಚಿಗೆ ತಲುಪಿದವರಿಂದಲೇ ಬೆಳವಣಿಗೆಗೆ ಹೆಜ್ಜೆ ಇಡಬೇಕಿದೆ. ರಾಜಾಶ್ರಯದಲ್ಲಿ ರಚಿಸಲ್ಪಟ್ಟ ‘ಕವಿರಾಜ ಮಾರ್ಗ’ ಕೃತಿಯಲ್ಲೂ ಜನಮಾರ್ಗವನ್ನೇ ಎತ್ತಿ ಹಿಡಿಯಲಾಗಿದೆ. ಅಂಥ ಪ್ರಯತ್ನ ಈಗಲೂ ಮುಂದುವರಿಯಬೇಕಿದೆ’ ಎಂದು ಆಶಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ‘ಕೃತಿಗಳ ಪ್ರಕಟಣೆಗಾಗಿ ಬೆಂಗಳೂರಿನಂಥ ಊರಿಗೆ ಅಲೆದಾಡುವ ಕಾಲವೂ ಒಂದಿತ್ತು. ಆದರೆ, ಈ ಕೊರತೆಯನ್ನು ಸಿದ್ಧಲಿಂಗೇಶ್ವರ ಪ್ರಕಾಶನ ನೀಗಿಸಿದೆ. ಸಾಹಿತ್ಯ ಹಾಗೂ ಸಾಮರ್ಥ್ಯದಲ್ಲಿ ಈ ಭಾಗ ಗಟ್ಟಿಮುಟ್ಟಾಗಿದೆ. ಆದರೆ, ಅವಕಾಶಗಳು ಹೇರಳವಾಗಿಲ್ಲ. ಹಾಗಾಗಿ, ಅವಕಾಶ ಕಲ್ಪಿಸುವಂಥ ವಾತಾವರಣ ನಿರ್ಮಿಸುವ ಅಗತ್ಯವಿದೆ’ ಎಂದರು.

ಮುಖ್ಯ ಅತಿಥಿ ಭಾಷಣ ಮಾಡಿದ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ, ‘ಪರಿಶ್ರಮದಿಂದ ಪಡೆದ ಫಲ ಯಾವಾಗಲೂ ಹೆಚ್ಚು ರುಚಿಸುತ್ತದೆ. ಈ ಮಾರ್ಗದಲ್ಲಿ ಕಷ್ಟ, ನಷ್ಟ, ಸಮಸ್ಯೆಗಳು ಬಂದೇ ಬರುತ್ತವೆ. ಆದರೆ, ಕೊನೆಗೆ ಸಿಗುವ ಫಲಿತಾಂಶ ಮಾತ್ರ ಶ್ರೇಷ್ಠವಾದದ್ದು. ಸಣ್ಣ ಪುಸ್ತಕ ಅಂಗಡಿಯಲ್ಲಿ ಕೆಲಸ ಆರಂಭಿಸಿದ ಬಸವರಾಜ ಕೊನೇಕ ಅವರು, ನಾಲ್ಕು ದಶಕಗಳ ಶ್ರಮದಿಂದ ಇಂಥ ಪ್ರಕಾಶನ ಕಟ್ಟಿದ್ದಾರೆ. ಪ್ರಕಾಶನ ಸಂಸ್ಥೆ ಕಟ್ಟುವುದು ಕೂಡ ಸಮಾಜಕ್ಕೆ ಸಲ್ಲುವ ದೊಡ್ಡ ಸೇವೆ’ ಎಂದರು.

ಅಫಜಲಪುರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿನಿಯರಾದ ಜಯಶ್ರೀ ಶರಣಪ್ಪ ಯಳಸಂಗಿ, ನಿಖಿತಾ ಬಿ. ಪಾಟೀಲ, ಕೊರೊನಾ ವಾರಿಯರ್‌ಗಳಾದ ಡಾ.ಮಲ್ಹಾರರಾವ್‌ ಮಲ್ಲೆ, ನರ್ಸ್‌ ಸುರೇಖಾ ಬಿ. ದೇಸಾಯಿ, ಪೌರಕಾರ್ಮಿಕ ಮಾಪಣ್ಣ ಶಿವಶರಣಪ್ಪ ಶ್ರೀಸಂದ, ಲ್ಯಾಬ್‌ ಟೆಕ್ನಿಷಿಯನ್‌ ರವಿ ಮಾಲ್ದೆ ಅವರನ್ನು ಸನ್ಮಾನಿಸಲಾಯಿತು.

ಪ್ರಕಾಶಕರಾದ ಬಸವರಾಜ ಜಿ. ಕೊನೇಕ, ಸಿದ್ಧಲಿಂಗ ಬಿ. ಕೊನೇಕ, ಶರಣಬಸವ ಬಿ. ಕೊನೇಕ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.