ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಗುರುವಾರ ಬಂದ್ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು
ಚಿತ್ತಾಪುರ (ಕಲಬುರಗಿ ಜಿಲ್ಲೆ): ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದುಷ್ಕರ್ಮಿಗಳು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕರೆ ನೀಡಿರುವ ಚಿತ್ತಾಪುರ ಬಂದ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿನ ಎಲ್ಲಾ ತರಹದ ಅಂಗಡಿ-ಮುಂಗಟ್ಟಗಳು ಬಾಗಿಲು ತೆರೆಯದೇ ಬಂದ್ ಆಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಜನರು ಪರದಾಡಿದರು.
ಕಿರಾಣಿ ಅಂಗಡಿ, ಹೋಟೆಲ್, ತರಕಾರಿ, ಹಣ್ಣಿನ ಅಂಗಡಿ, ಪಾನ್ ಶಾಪ್, ಬಟ್ಟೆ ಅಂಗಡಿ, ಗ್ಯಾರೇಜ್ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಆಗಿವೆ.
ಕಾಂಗ್ರೆಸ್ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ಪಕ್ಷದ ಧ್ವಜ ಹಿಡಿದುಕೊಂಡು ಪಟ್ಟಣದಲ್ಲಿ ಬೈಕ್ ಮೇಲೆ ಸುತ್ತಾಡಿ ಪ್ರಿಯಾಂಕ್ ಖರ್ಗೆ ಪರವಾಗಿ ಘೋಷಣೆ ಕೂಗಿದರು. ಕರೆ ಮಾಡಿ ನಿಂದಿಸುತ್ತಿರುವ ಬೆದರಿಕೆ ಹಾಕುತ್ತಿರುವವರ ಬಂಧನಕ್ಕೆ ಆಗ್ರಹಿಸಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಸ್ ಘಟಕದ ಹತ್ತಿರದಿಂದಲೇ ಕಲಬುರಗಿ, ಸೇಡಂ, ಕಾಳಗಿ ಬಸ್ ವಾಪಸು ಹೋಗುತ್ತಿವೆ. ಕೆಲವು ಬಸ್ ಯಾರಗಾಲ್ ಕ್ರಾಸ್ ದಲ್ಲೇ ತಡೆಯಲಾಗಿದೆ. ಮೂಡಬೋಳ ಕ್ರಾಸಿನಲ್ಲೇ ಲಾರಿ ಸಂಚಾರ ಬಂದ್ ಮಾಡಲಾಗಿದೆ.
ಕಾಂಗ್ರೆಸ್ ಕರೆ ನೀಡಿದ ಚಿತ್ತಾಪುರ ಬಂದ್ ಗೆ ವ್ಯಾಪಾರಿಗಳು ಉತ್ತಮ ಸಹಕಾರ ನೀಡಿದ್ದಾರೆ.